ಪ್ರಾಮಾಣಿಕತೆ
ಒಂದು ಸಲ ಸಂತ ಇಬ್ರಾಹಿಮನು ದೇಶ ಸಂಚಾರಕ್ಕೆ ಹೊರಟನು. ಸಂಚರಿಸುತ್ತ ಒಬ್ಬ ಧನಿಕನ ತೋಟಕ್ಕೆ ಬಂದನು. ಆ ಧನಿಕನು ಸಂತ ಇಬ್ರಾಹಿಮನ ಸಾಧಾರಣ ಉಡುಪನ್ನು ಕಂಡು ಅವನನ್ನು ಒಬ್ಬ ಸಾಮಾನ್ಯ ಮನುಷ್ಯನೆಂದು ಭಾವಿಸಿದನು. ಆ ಧನಿಕನಿಗೆ ಅವನ ತೋಟ ಕಾಯಲು ಒಬ್ಬ ಆಳು ಬೇಕಾಗಿದ್ದನು. “ನೀನು ನನ್ನ ತೋಟದ ಕಾವಲು ಮಾಡುವೆಯಾ?” ಎಂದು ಆ ಧನಿಕನು ಇಬ್ರಾಹಿಮನನ್ನು ಕೇಳಿದನು.
ಇಬ್ರಾಹಿಮನಿಗೆ ಆ ತೋಟದ ಶಾಂತ ವಾತಾವರಣ ತುಂಬ ಹಿಡಿಸಿತು. ಏಕಾಂತದಲ್ಲಿ ದೇವರ ಧ್ಯಾನ ಮಾಡಲು ಅವನಿಗೆ ಅದು ಸೂಕ್ತವಾದ ಸ್ಥಳವೆನಿಸಿತು. ಆದ್ದರಿಂದ ಧನಿಕನ ಮಾತನ್ನು ಕೂಡಲೇ ಒಪ್ಪಿಕೊಂಡನು.
ಹೀಗೆ ಅನೇಕ ದಿನಗಳು ಕಳೆದುಹೋದವು. ಇಬ್ರಾಹಿಮನು ತುಂಬ ಮುತುವರ್ಜಿಯಿಂದ ತೋಟದ ಕಾವಲು ಮಾಡುತ್ತಿದ್ದನು. ಒಂದು ದಿನ ಆ ಧನಿಕನು ತನ್ನ ಕೆಲವು ಮಿತ್ರರೊಂದಿಗೆ ತನ್ನ ತೋಟಕ್ಕೆ ಬಂದನು. ಮಾವಿನ ಮರದಲ್ಲಿ ಮಾವಿನ ಹಣ್ಣುಗಳಾಗಿದ್ದವು.
ಧನಿಕನು ಇಬ್ರಾಹಿಮನಿಗೆ ಕೆಲವು ಮಾವಿನ ಹಣ್ಣುಗಳನ್ನು ಕಿತ್ತು ತರುವಂತೆ ಹೇಳಿದನು. ಇಬ್ರಾಹಿಮನು ಒಂದು ಮರದಿಂದ ಕೆಲವು ಹಣ್ಣುಗಳನ್ನು ಕಿತ್ತು ತಂದನು. ಆದರೆ ಅವನು ಕಿತ್ತು ತಂದ ಹಣ್ಣುಗಳೆಲ್ಲ ಹುಳಿಯಾಗಿದ್ದವು.
ಆಗ ಧನಿಕನು ಇಬ್ರಾಹಿಮನನ್ನು ಕುರಿತು ಹಲವು ದಿನಗಳಿಂದ ನನ್ನ ತೋಟದ ಕಾವಲು ಮಾಡುತ್ತಿರುವೆ. ಆದರೆ ಯಾವ ಮರದ ಹಣ್ಣು ಹುಳಿಯಾಗಿದೆ. ಯಾವ ಮರದ ಹಣ್ಣು ಸಿಹಿಯಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಕೇಳಿದನು.
ಧನಿಕನ ಮಾತನ್ನು ಕೇಳಿ ಇಬ್ರಾಹಿಮನು ನಗತೊಡಗಿದನು. ಅವನು ಏಕೆ ನಗುತ್ತಿರುವನೆಂದು ಧನಿಕನಿಗೆ ತಿಳಿಯಲಿಲ್ಲ. “ನೀನು ಏಕೆ ನಗುತ್ತಿರುವೆ?” ಎಂದು ಧನಿಕನು ಇಬ್ರಾಹಿಮನಿಗೆ ಕೇಳಿದನು. ಆಗ ಇಬ್ರಾಹಿಮನು “ಒಡೆಯರೇ, ನೀವು ನನ್ನನ್ನು ನೇಮಿಸಿರುವುದು ತೋಟವನ್ನು ಕಾಯುವುದಕ್ಕೆ, ಮಾವಿನ ಹಣ್ಣುಗಳನ್ನು ತಿನ್ನುವುದಕ್ಕಲ್ಲ.
ನಿಮ್ಮ ಆಜ್ಞೆ ಇಲ್ಲದೆ ನಾನು ಹಣ್ಣುಗಳನ್ನು ತಿನ್ನಲು ಹೇಗೆ ಸಾಧ್ಯ? ನಾನು ಹಣ್ಣುಗಳನ್ನು ತಿಂದೇ ಇಲ್ಲ ಎಂದ ಮೇಲೆ ನನಗೆ ಯಾವ ಮರದ ಹಣ್ಣು ಹುಳಿ, ಯಾವ ಮರದ ಹಣ್ಣು ಸಿಹಿ ಎಂದು ಹೇಗೆ ಗೊತ್ತಾದಿತು?” ಎಂದು ಕೇಳಿದನು.
ಇಬ್ರಾಹಿಮನ ಪ್ರಾಮಾಣಿಕತೆಯನ್ನು ಕಂಡು ಧನಿಕನು ತಲೆದೂಗಿದನು ಮತ್ತು ತನ್ನ ನಡವಳಿಕೆಗಾಗಿ ಇಬ್ರಾಹಿಮನಲ್ಲಿ ಕ್ಷಮೆ ಯಾಚಿಸಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.