ಡಿ. 7 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮೋದಿಜಿ ಪರಿಕಲ್ಪನೆಯ ಭಾರತ ನಿರ್ಮಾಣ – ಡಾ.ವೀರಭದ್ರಗೌಡ
ಡಿ. 7 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮೋದಿಜಿ ಪರಿಕಲ್ಪನೆಯ ಭಾರತ ನಿರ್ಮಾಣ – ಡಾ.ವೀರಭದ್ರಗೌಡ
yadgiri, ಶಹಾಪುರಃ ಡಿಸೆಂಬರ್ 7 ರಂದು ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದ್ದು, ತಾಲೂಕಿನ ಜನತೆ ಶಿಬಿರದ ಲಾಭ ಪಡೆಯಬೇಕೆಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಕೋಷ್ಟಕಗಳ ಸಂಯೋಜಕ ಡಾ.ವೀರಭದ್ರಗೌಡ ಹೊಸಮನಿ ತಿಳಿಸಿದರು.
ನಗರದ ಮೋಟಗಿ ಸಭಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದೀಜಿ ಪರಿಕಲ್ಪನೆಯ ಭಾರತ ನಿರ್ಮಾಣಕ್ಕೆ ನಾವೆಲ್ಲ ಸಹಕಾರ ನೀಡುವ ನಿಟ್ಟಿನಲ್ಲಿ, ರಾಜ್ಯ ಹಾಗೂ ಕೇಂದ್ರ ಜಾರಿಗೊಳಿಸಿದ ಯೋಜನೆಗಳ ಸಾಕಾರಗೊಳಿಸುವ ಮೂಲಕ ಸ್ವಚ್ಛ ಭಾರತ, ಉತ್ತಮ ಆರೋಗ್ಯ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಅಗತ್ಯವಿದೆ.
ಆ ಹಿನ್ನೆಲೆಯಲ್ಲಿ ಶಿಬಿರವು ಭಾಜಪ ಪ್ರಕೋಷ್ಠಕಗಳ ರಾಜ್ಯ ಅಧ್ಯಕ್ಷರ ಸೂಚನೆ, ಸಲಹೆ ಮೇರೆಗೆ ನಡೆಸಲಾಗುತ್ತಿದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆ ಮತ್ತು ಸಂಜೀವಿನಿ ಆಸ್ಪತ್ರೆ ಸಹಯೋಗದಲ್ಲಿ ನಡೆಯಲಿದೆ. ಅಲ್ಲದೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ, ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ವೈದ್ಯಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸುವ ಮೂಲಕ ಸಹಕರಿಸಲಿದ್ದಾರೆ.
ಸಾರ್ವಜನಿಕರು ಈ ಬೃಹತ್ ಶಿಬಿರದ ಸದುಪಯೋಗ ಪಡೆಯಬೇಕು. ಪ್ರತಿ ಹಳ್ಳಿ ಹಳ್ಳಿಗೆ ಶಿಬಿರ ಕುರಿತು ಮಾಹಿತಿ ನೀಡಲಾಗುತ್ತಿದ್ದು, ನಾಗರಿಕರು ಶಿಬಿರದಲ್ಲಿ ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದಲ್ಲಿ, ಬೆಂಗಳೂರಿಗೆ ಕಳುಹಿಸಿ ಚಿಕಿತ್ಸೆ ಕೊಡಿಸುವ ಸೌಲಭ್ಯವು ಕಲ್ಪಿಸಲಾಗುತ್ತಿದೆ.
ಶಿಬಿರದಲ್ಲಿ ಹೃದಯ ರೋಗ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ನರ ರೋಗ, ಎಲಬು, ಕೀಲು ಸಮಸ್ಯೆ, ಕಣ್ಣಿನ ಸಮಸ್ಯೆ ಕುರಿತು ತಪಾಸಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಯ್ಯ ನಾಯಕ ವನದುರ್ಗ, ಅಮರೇಗೌಡ ಹೋತಪೇಟ, ಶರಣಗೌಡ ಪಾಟೀಲ್ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕಿನ ಬಿಜೆಪಿ ಮಂಡಲದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ನಿರ್ಮಾಣದಲ್ಲಿ ಸ್ವಚ್ಛ ಭಾರತ, ಸರ್ವರಿಗೂ ಆರೋಗ್ಯ ಭಾಗ್ಯ, ಮನೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಕಾರ್ಯದಲ್ಲಿ ಪ್ರಕೋಷ್ಠಕದಿಂದ ಮೊದಲ ಹೆಜ್ಜೆ ಹಾಕಿದ್ದೇವೆ. ಸರ್ವರ ಆರೋಗ್ಯ, ಉತ್ತಮ ಸಮಾಜ ನಿರ್ಮಾಣವೇ ನಮ್ಮ ಗುರಿ.
-ಡಾ.ವೀರಭದ್ರಗೌಡ. ಜಿಲ್ಲಾ ಪ್ರಕೋಷ್ಟಕಗಳ ಸಂಯೋಜಕ.