ಪರಿಸರ ಕಾಳಜಿ ಇಲ್ಲದ ನಾವು ವಿನಾಶದತ್ತ ಸಾಗುತ್ತಿದ್ದೇವೆ.
ವಿನಾಶದತ್ತ ನಾವು ಪರಿಸರದ ಅರಿವಿರಲಿ ನಮಗೆ
ವಿಜಯಪುರದ ಬಂಜಾರಾ ಕ್ರಾಸ್ ಬಳಿ ಹೀಗೆ ನಿರ್ದಯವಾಗಿ ಮರಗಳನ್ನು ಕೊಲ್ಲಲಾಗುತ್ತಿದೆ. ನೆಲಕ್ಕೆ ಬಿದ್ದ ಬೃಹತ್ ತೆಂಗಿನ ಮರದಿಂದ ಜನ ಕಾಯಿಗಳನ್ನು ಹಿರಿಯುತ್ತಿದ್ದರು. ಇದು ಸತ್ತ ತಾಯೊಬ್ಬಳ ಗರ್ಭದಿಂದ ಫಲವನ್ನು ಕಿತ್ತಂತೆ ನನಗೆ ಭಾಸವಾಯಿತು..!
ಮನುಷ್ಯ ಅದೆಷ್ಟು ಕ್ರೂರ, ಅದೆಷ್ಟು ದುಷ್ಟ ಅನಿಸಿತು. ಇವನು ತಾನು ಬದುಕುತ್ತಿರುವೆ, ಅದಕ್ಕಾಗಿ ಅಭಿವೃದ್ಧಿ ಹೊಂದುತ್ತಿರುವೆ ಎಂದು ರಸ್ತೆ-ಇನ್ನಿತರೇ ಯೋಜನೆಗಳಿಗಾಗಿ ಮರ ಕಡಿಯುತ್ತಲೇ ಇದ್ದಾನೆ. ಭೂಮಿ ಹಾಳಾಗುತ್ತಿದೆ, ಮಣ್ಣು ಸವಳಾಗುತ್ತಿದೆ, ಆಹಾರದ ಆಹಾಕಾರ ಏರ್ಪಡಲಿದೆ.. ಪರಿಸರ-ಪ್ರಕೃತಿ ಹಾಳಾಗುತ್ತಲೇ ನಮ್ಮ ಮಕ್ಕಳು ಮೊಮ್ಮಕ್ಕಳನ್ನು ವಿನಾಶದೆಡೆಗೆ ದಬ್ಬುತ್ತಿದ್ದೇವೆ ಎನ್ನುವ ಖಬರೇ ನಮಗಿಲ್ಲ.
ತಿನ್ನಲು ಕೂಳಿರಲ್ಲ, ಮುಂದೆ ಕುಡಿಯಲು ನೀರಿರಲ್ಲ, ನೆರಳಂತೂ ಮೊದಲೇ ಇರಲ್ಲ. ನಾವು ಹೇಗೋ ಸದ್ಯ ಬದುಕಿ ಸಾಯುತ್ತೇವೆ, ಆದರೆ ಮುಂದಿನವರು ವಿನಾಶ ಹೊಂದುತ್ತಾರೆ ಎನ್ನುವ ಗಾಬರಿ ನಮಗಾರಿಗೂ ಇಲ್ಲ.
ಮನುಷ್ಯನಷ್ಟು ಮೂರ್ಖ ಮತ್ತ್ಯಾರೂ ಇಲ್ಲ. ಬದುಕಲು ಗಿಡ ಬೇಕು; ಅಭಿವೃದ್ಧಿಯೊಂದೇ ಅಲ್ಲ. ನಮಗೆಲ್ಲ ಅರಿವು ಮೂಡುವುದು ಯಾವಾಗ!?
–ಶಿವಕುಮಾರ್ ಉಪ್ಪಿನ
ಜಾಹಿರಾತು