ಶಹಾಪುರಗೆ ಬೈಪಾಸ್ ರಸ್ತೆ ಅನುಮೋದನೆ – ದರ್ಶನಾಪುರ
ಶಹಾಪುರಗೆ ಬೈಪಾಸ್ ರಸ್ತೆ ಅನುಮೋದನೆ - ಭೂ ಸ್ವಾಧೀನ ಪ್ರಕ್ರಿಯೆ
ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ – ದರ್ಶನಾಪುರ
ಶಹಾಪುರಗೆ ಬೈಪಾಸ್ ರಸ್ತೆ ಅನುಮೋದನೆ – ದರ್ಶನಾಪುರ
yadgiri, ಶಹಾಪುರಃ ಕೇಂದ್ರ ಸರಕಾರ ನೂತನ ಚತುಸ್ಪಥ ರಸ್ತೆ ಯೋಜನೆಯಲ್ಲಿ ತಾಲೂಕಿಗೆ 24 ಕಿ.ಮಿ.ಬೈಪಾಸ್ ರಸ್ತೆಗೆ ಅನುಮೋದನೆ ನೀಡಿದ್ದು ಸಂತಸ ತಂದಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚತುಸ್ಪಥ ಬೈಪಾಸ್ ರಸ್ತೆಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿರುವ ವಿಷಯ ತಿಳಿಸಿದ್ದಾರೆ ಎಂದರು.
ಅನುಮೋದನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕೇಂದ್ರ ಸರಕಾರದ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 150 ಎ ಜೇವರ್ಗಿಯಿಂದ ತಿಂಥಣಿ ಬ್ರಿಡ್ಜ್‍ವರೆಗಿನ ರೂ.800 ಕೋಟಿ ವೆಚ್ಚದಲ್ಲಿ ಅಂದಾಜು 90ಕಿ.ಮೀ ಚತುಸ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ. ಜೇವರ್ಗಿ ಭೀಮಾ ಬ್ರಿಡ್ಜ್‍ನಿಂದ ಪ್ರಾರಂಭವಾಗಿ ಮಾರ್ಗ ಮಧ್ಯದ ಔರಾದ, ಕೆಲ್ಲೂರು, ಚಿಗರಹಳ್ಳಿ, ಮೋರಟಗಿ, ಮೂಡಬೂಳ, ಮದ್ರಕಿ ಗ್ರಾಮಗಳಿಂದ ಹಾಯ್ದು ಶಹಾಪುರ ಹತ್ತಿರದ ಹುಲಕಲ್ ಗ್ರಾಮದಿಂದ ಬೈಪಾಸ್ ಮೂಲಕ ತಾಲೂಕಿನ ಕೆಂಚನಕವಿ, ಗೋಗಿ, ಸೈದಾಪುರ, ಉಮರದೊಡ್ಡಿ, ಸಗರ, ಶಾರದಹಳ್ಳಿ ಗ್ರಾಮಗಳ ಮೂಲಕ ಒಟ್ಟು 24 ಕಿ.ಮಿ.ಚತುಸ್ಪಥ ಬೈಪಾಸ್ ರಸ್ತೆ ನಿರ್ಮಾಣವಾಗಲಿದ್ದು ಮುಂದೆ ಬಿಜಾಸ್ಪುರ ಗ್ರಾಮದವರೆಗೆ ಹೋಗಲಿದೆ.
ಇದರಿಂದ ಶಹಾಪುರ ನಗರದಲ್ಲಿ ಸಂಚಾರ ಸುಗಮಗೊಳ್ಳಲು ಅನುಕೂಲವಾಗಲಿದೆ ಎಂದು ಶಾಸಕ ದರ್ಶನಾಪುರ ತಿಳಿಸಿದರು. ಮೇ.ಮೋನಾರ್ಕ್ ಸರ್ವೆಯರ್ಸ್, ಎಂಜಿನೀಯರ್ ಮತ್ತು ಕನ್ಸ್‍ಲೆಂಟೆಂಟ್ ಪ್ರೈ. ಕಂಪನಿಯಿಂದ ಇನ್ನೆರಡು ತಿಂಗಳಲ್ಲಿ ಡಿಪಿಆರ್ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗಳು ಮುಗಿಯಲಿದ್ದು 7-8 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಹಾಪುರ ನಗರದ ಜಲಜೀವನಾಡಿಗಳಾಗಿದ್ದ ನಾಗರಕೆರೆ ಮತ್ತು ಮಾವಿನಕೆರೆಗಳಿಗೆ ಎಸ್‍ಬಿಸಿ ಕಾಲುವೆಯಿಂದ ನೀರು ತುಂಬಿಸುವ ಸುಮಾರು 5 ಕೋಟಿ ರೂ.ವೆಚ್ಚದ ಕಾಮಗಾರಿಗೆ ಕೆಬಿಜೆಎನ್‍ಎಲ್ ಮೂಲಕ ಟೆಂಡರ್ ಕರೆಯಲಾಗಿದ್ದು ಸಧ್ಯದಲ್ಲಿಯೇ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಲಾಗುವುದು. ಇದರಿಂದ ಜನತೆಗೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗಲಿದೆ ಎಂದು ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.