ಫೆ.6 ಕ್ಕೆ ನಗರಕ್ಕೆ ಕಾರ್ಮಿಕ ಕಲ್ಯಾಣ ರಥಯಾತ್ರೆ
ಮಾಚ್ 5 ರಂದು ಸಮಾರೋಪ ಸಮಾರಂಭ
yadgiri, ಶಹಾಪುರಃ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ರಥಯಾತ್ರೆ ಯಾದಗಿರಿ ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಫೆ.6 ಸೋಮವಾರ ಬೆಳಗ್ಗೆ ನಗರ ಪ್ರವೇಶಿಸಲಿದೆ. ನಗರದ ಬಸವೇಶ್ವರ ವೃತ್ತಕ್ಕೆ ಬೆಳಗ್ಗೆ 10:30 ಕ್ಕೆ ಆಗಮಿಸಲಿದ್ದು, ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಮಿಕ ರಥವನ್ನು ಸ್ವಾಗತಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ(ರಿ) ಜಿಲ್ಲಾಧ್ಯಕ್ಷ ಚಾಂದಪಾಶ ಮತ್ತು ಕಾರ್ಯದರ್ಶಿ ಬಸವರಾಜ ನಗನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕ ರಥಯಾತ್ರೆ ರಾಜ್ಯ ಐದು ಜಿಲ್ಲೆಗಳಲ್ಲಿ ಪ್ರತ್ಯೇಕ ರಥದೊಂದಿಗೆ ಆಯಾ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಿದೆ. ಅದರಿಂದ ಕಾರ್ಮಿಕರು ಸಂಘಟಿತರಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.
ಇಂದು ನಗರ ಪ್ರವೇಶಿಸುವ ಕಾರ್ಮಿಕ ಕಲ್ಯಾಣ ರಥಯಾತ್ರೆ ಶಹಾಪುರ ಸೇರಿದಂತೆ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಸಂಚರಿಸಲಿದೆ. ನಮ್ಮ ಸಂಘದ ರಾಜ್ಯಧ್ಯಕ್ಷ ಬಿ.ದೇವರಾಜು, ಕಾರ್ಯದಕ್ಷ್ಯ ಆರ್.ಶ್ರೀನಿವಾಸ ಹಾಗೂ ಸ್ಥಳೀಯ ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀ,ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಕಲ್ಯಾಣ ರಥಕ್ಕೆ ಸ್ವಾಗತಿಸಿಕೊಂಡು ಗ್ರಾಮೀಣ ಭಾಗಕ್ಕೆ ಯಾತ್ರೆ ಹೊರಡಲು ಚಾಲನೆ ನೀಡಲಿದ್ದಾರೆ.
ಪ್ರತಿ ಗ್ರಾಮಕ್ಕೂ ತೆರಳಿ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತು ಮನನ ಮಾಡಿಕೊಡಲಿದೆ. ಅಂತಿಮವಾಗಿ ಮಾರ್ಚ್ 5 ರಂದು ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಅಭಿಯಾನ ಸಮಾರೋಪ ಕಾರ್ಮಿಕರ ಬೃಹತ್ ಸಮಾವೇಶ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.