ಬೆಳಗಿನಜಾವ ಬಿರುಗಾಳಿ, ಆಲಿಕಲ್ಲು ಮಳೆಗೆ ಅಪಾರ ಬೆಳೆ ನಷ್ಟ
ಆಲಿಕಲ್ಲು ಸುರಿದು ಬೆಳೆ ಹಾನಿ, ಅಪಾರ ನಷ್ಟಕ್ಕೊಳಗಾದ ಸಂಗಮೇಶ್ವರ ನರ್ಸರಿ
yadgiri, ಶಹಾಪುರಃ ಶನಿವಾರ ಬೆಳಗಿನ ಜಾವ ಮಿಂಚು, ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆ ಜೋರಾಗಿ ಸುರಿದ ಪರಿಣಾಮ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾದ ವರದಿಯಾಗಿದೆ.
ಅಲ್ಲದೆ ನಗರ ಸೇರಿದಂತೆ ಹಲವಡೆ ಮನೆ, ಗಿಡ ಮರಗಳು ನೆಲಕ್ಕುರುಳಿದ್ದು, ಅಪಾರ ಪ್ರಮಾಣ ಹಾನಿಗೊಳಗಾಗಿದೆ ಆದರೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ನಗರದ ಹಳಿಸಗರ ಸೀಮಾಂತರದ ಸಂಗಮೇಶ್ವರ ನರ್ಸರಿ ಆಲಿಕಲ್ಲು ಮಳೆಯಿಂದಾಗಿ ಸುಮಾರು 6 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿದ್ದ ನೆಟ್ ಹಾಗೂ ಸ್ಪಿಂಕ್ಲರ್ ಸೇರಿದಂತೆ ಹನಿ ನೀರಾವರಿ ವ್ಯವಸ್ಥೆ ಪೂರ್ಣ ಹಾನಿಗೊಳಗಾಗಿದೆ. ಅಲ್ಲದೆ ಲಕ್ಷಾಂತರ ಮೆಣಸಿನ ಕಾಯಿ, ತಮಟೆ, ಗೋಬಿ, ಬೀನ್ಸ್ ಸಸಿಗಳು ಬಿರುಗಾಳಿ ಮಳೆ ಹಾಗೂ ಆಲಿಕಲ್ಲು ಮಳೆಗೆ ಕುಸಿದು ನೆಲಕ್ಕೊರಗಿ ಹಾಳಾಗಿರುವ ದೃಶ್ಯ ಮನಕಲುಕುವಂತಿದೆ. ಸಂಗಮೇಶ್ವರ ನರ್ಸರಿ ಮಾಲೀಕ ಹೇಳುವಂತೆ ಅಂದಾಜು 10 ರಿಂದ 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ನರ್ಸರಿಗೆ ಡಿಸಿ, ಶಾಸಕ ದರ್ಶನಾಪುರ ಭೇಟಿ
ಶಹಾಪುರಃ ಬೆಳಗಿನ ಜಾವ ಬಿರುಗಾಳಿ, ಆಲಿಕಲ್ಲು ಮಳೆಗೆ ಅಪಾರ ಹಾನಿಯುಂಟಾದ ರೈತ ಮಲ್ಲಿಕಾರ್ಜುನ ದೇಸಾಯಿ ಎಂಬುವರ ಸಂಗಮೇಶ್ವರ ನರ್ಸರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಮುಂದೆ ರೈತರು ಅಳಲನ್ನು ತೋಡಿಕೊಂಡಿದ್ದ, ಆಲಿಕಲ್ಲು ಮಳೆಗೆ ಅಪಾರ ನಷ್ಟ ಕುರಿತು ಮಾಹಿತಿ ನೀಡಿದರು. ಸಮರ್ಪಕ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಈ ಕುರಿತು ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವದು.
ನೈಸರ್ಗಿಕ ವಿಕೋಪದಿಂದಾಗಿರುವ ಬೆಳೆ ನಷ್ಟ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಮರ್ಪಕ ವರದಿ ತಯಾರಿಸಲು ಸೂಚಿಸಿದ್ದು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಬೆಳೆ ನಷ್ಟದಿಂದ ಯಾವುದೇ ರೈತರು ಹೆದರಬೇಕಿಲ್ಲ. ಸೂಕ್ತ ವರದಿ ಆಧರಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವದು ಎಂದರು.
ಶಾಸಕ ದರ್ಶನಾಪುರ ನೊಂದ ರೈತರಿಗೆ ಸಾಂತ್ವನ ತಿಳಿಸಿ, ಯಾರೊಬ್ಬರು ಹೆದರಬೇಕಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಕಣ್ಣಾರೆ ಕಂಡಿದ್ದಾರೆ. ನಾನು ಸಮರ್ಪಕ ಮಾಹಿತಿ ಪಡೆದು ಅಧಿಕಾರಿಗಳಿಗೆ ನೀಡುವೆ. ನಷ್ಟ ಭರಿಸುವ ಕೆಲಸ ಮಾಡಲಾಗುತ್ತದೆ. ಆದಷ್ಟು ಬೇಗನೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ನಾನು ಆಗ್ರಹಿಸುವೆ ಎಂದರು.
ಕಳೆದ 10 ವರ್ಷದಿಂದ ನರ್ಸರಿ ಕೃಷಿ ಮಾಡುತ್ತಿರುವೆ. 6 ಎಕರೆಯಲ್ಲಿ ಸುಮಾರು 60-70 ಲಕ್ಷ ಖರ್ಚು ಮಾಡಿ ನರ್ಸರಿ ಮಾಡಿರುವೆ. ಇದೇ ಮೊದಲ ಬಾರಿಗೆ ಸುಮಾರು 15 ಲಕ್ಷ ದಷ್ಟು ಹಾನಿಯುಂಟಾಗಿದೆ. ನೆಟ್ ಹರಿದುಹೋಗಿವೆ. ನೆಟ್ ತುಂಬೆಲ್ಲ ಮಂಜುಗಡ್ಡೆಗಳೇ ತುಂಬಿ ಹರಿದಿವೆ. ಸಸಿಗಳು ನೆಲಕ್ಕೊರಗಿ ಹಾಳಾಗಿವೆ. ಸ್ಪಿಂಕ್ಲರ್, ಹನಿ ನೀರಾವರಿ ಕಲೆಕ್ಷನ್ ಹಾಳಾಗಿದೆ. ಹೊರ ರಾಜ್ಯದ ತಜ್ಞರಿಂದ ಕರೆಯಿಸಿ ನರ್ಸರಿ ಹೌಸ್ ಸಿದ್ಧ ಪಡೆಸಿದ್ದೆ, ಮತ್ತೆ ಅವರನ್ನು ಕರೆ ತಂದು ದುರಸ್ತಿ ಮಾಡಿಸಬೇಕು. ಇಲ್ಲಿವರೆಗೂ ಸರ್ಕಾರದಿಂದ ಯಾವೊಂದು ಸಹಾಯ ಸಹಕಾರ, ಧನಸಹಾಯ ಪಡೆದಿರುವದಿಲ್ಲ. ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಸಾಕಾಗಿ ಸ್ವಂತ ಖರ್ಚಿನಲ್ಲಿಯೇ ಎಲ್ಲವೂ ಮಾಡಿಕೊಂಡಿದ್ದೆ.
–ಮಲ್ಲಿಕಾರ್ಜುನ ದೇಸಾಯಿ (ಚಿಲ್ಲಿ) ಸಂಗಮೇಶ್ವರ ನರ್ಸರಿ ಮಾಲೀಕ.