ದಿನಕ್ಕೊಂದು ಕಥೆ
ದುರ್ಜನರ ಸಂಗ
ದಟ್ಟ ಕಾಡಿನ ಸಮೀಪದಲ್ಲಿ ರೈತನೊಬ್ಬನ ಜಮೀನು. ಆತ ಪ್ರತಿ ವರ್ಷವೂ ಜಮೀನನ್ನು ಉತ್ತು, ಬಿತ್ತಿ ಬೆಳೆ ಬೆಳೆಯುತ್ತಿದ್ದ. ಆ ಕಾಡಿನಲ್ಲಿ ಅಸಂಖ್ಯಾತ ಪಕ್ಷಿಗಳು ವಾಸವಾಗಿದ್ದವು. ಆತನ ಜಮೀನಿಗೆ ಬಂದು ಬಿತ್ತಿದ್ದ ಬೀಜಗಳನ್ನು ಕೆದಕಿ ಕೆದಕಿ ಈಚೆಗೆ ತಂದು ತಿನ್ನುತ್ತಿದ್ದವು. ಇದರಿಂದಾಗಿ ರೈತನು ತುಂಬಾ ನಷ್ಟವನ್ನು ಹೊಂದಿದ.
ಪಕ್ಷಿಗಳ ಸಂಗಡ ಸಾರಸ ಪಕ್ಷಿಯೊಂದು ಸ್ನೇಹದಿಂದಿದ್ದು ತನಗೆ ಅಗತ್ಯವಾದ ಕ್ರಿಮಿ-ಕೀಟಗಳನ್ನು ಅವುಗಳ ಸಹಾಯದಿಂದ ದೊರಕಿಸಿಕೊಳ್ಳುತ್ತಿತ್ತು. ಆದರೆ, ಬಿತ್ತಿದ ಬೀಜಗಳನ್ನು ಮಾತ್ರ ಕೆದಕಿ ತಿನ್ನುತ್ತಿರಲಿಲ್ಲ. ರೈತನು ಹಕ್ಕಿಗಳ ಕಾಟವನ್ನು ತಪ್ಪಿಸಲು ಒಂದು ದಿನ ಪಕ್ಷಿಗಳನ್ನು ಹಿಡಿಯಲು ದೊಡ್ಡ ಬಲೆಯೊಂದನ್ನು ಜಮೀನಿನಲ್ಲಿ ಹಾಕಿದ. ಬೀಜವನ್ನು ತಿನ್ನಲೋಸುಗ ಬಂದ ಪಕ್ಷಿಗಳೆಲ್ಲವೂ ಬಲೆಯಲ್ಲಿ ಸಿಕ್ಕಿಬಿದ್ದವು. ಆ ಪಕ್ಷಿಗಳ ಸಮೂಹದಲ್ಲಿ ಸಾರಸ ಪಕ್ಷಿ ಅರ್ಥಾತ್ ಕೊಕ್ಕರೆಯೂ ಸಹ ಸಿಕ್ಕಿಬಿದ್ದಿತು.
ರೈತನು ಬಲೆಯನ್ನು ಬಿಚ್ಚಿ ಸಿಕ್ಕಿಬಿದ್ದ ಪಕ್ಷಿಗಳನ್ನು ಹಿಡಿಯಲು ಹೊರಟಾಗ ಸಾರಸ ಪಕ್ಷಿ “ನಾನು ನಿಮಗೆ ಅನ್ಯಾಯವನ್ನು ಮಾಡಿಲ್ಲ. ಬೀಜಗಳನ್ನು ಮುಟ್ಟಿಲ್ಲ. ನಾನು ಕಾಳುಗಳನ್ನು ಅಂದರೆ ಬಿತ್ತಿದ ಬೀಜಗಳನ್ನು ತಿನ್ನುವ ಪಕ್ಷಿಯಲ್ಲ. ನಾನು ಹೇಳಿ ಕೇಳಿ ಸಾರಸ ಪಕ್ಷಿ. ಏನಿದ್ದರೂ ಕ್ರಿಮಿ-ಕೀಟಗಳನ್ನು ತಿನ್ನುತ್ತೇನೆ. ಇದರಿಂದಾಗಿ ನಿಮ್ಮ ಜಮೀನಿಗೆ ನನ್ನಿಂದ ತೊಂದರೆ ಏನೂ ಇಲ್ಲ. ನನ್ನನ್ನು ದಯಮಾಡಿ ಬಿಟ್ಟುಬಿಡಿ” ಎಂದು ಬೇಡಿಕೊಂಡಿತು.
ರೈತನು ಸಾರಸ ಪಕ್ಷಿಯ ಮಾತನ್ನು ಕೇಳಿಸಿಕೊಂಡು “ಅದೆಲ್ಲಾ ಆಗದ ಮಾತು. ಇತರ ಪಕ್ಷಿಗಳೊಡನೆ ಸ್ನೇಹದಿಂದ ಬಾಳಿ ಜಮೀನಿಗೆ ಅವುಗಳ ಜೊತೆ ಬಂದಿರುವುದರಿಂದ ನೀನೂ ತಪ್ಪಿತಸ್ಥನೇ ಸರಿ. ಅವುಗಳಿಗೆ ಸಿಗುವ ದಂಡನೆ ನಿನಗೂ ಸಹ ದೊರಕಬೇಕು. ಆ ಪಕ್ಷಿಗಳ ಸಂಗ ನೀನು ಮಾಡಿದ್ದು ಶತಾಪರಾಧ. ದಂಡನೆಗೆ ನೀನು ಅರ್ಹನೆ ಸರಿ” ಎಂದು ಹೇಳುತ್ತಾ ಶಿಕ್ಷಿಸಿದ.
ನೀತಿ :– ದುರ್ಜನರ ಸಂಗದಿಂದ ತಪ್ಪು ಮಾಡದೇ ಇದ್ದರೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರಿಂದ ದೂರ ಇರುವುದು ಒಳಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.