ದಿನಕ್ಕೊಂದು ಕಥೆ
ನೀತಿ ಬಿಡದ ಕಳ್ಳ
ಕಳ್ಳನೊಬ್ಬ ಮಧ್ಯ ರಾತ್ರಿಯಲ್ಲಿ ಶ್ರೀಮಂತನೋರ್ವನ ಮನೆಗೆ ಕದಿಯಲು ಹೋದ. ಮನೆಯ ಎಲ್ಲರೂ ಗಾಢ ನಿದ್ರೆಯಲ್ಲಿದ್ದದನ್ನು ತಾನು ತಂದಿದ್ದ ಬ್ಯಾಟರಿಯ ಬೆಳಕಿನಿಂದ ಗಮನಿಸಿದ. ಅದೇ ಕೋಣೆಯಲ್ಲಿ ತಿಜೋರಿಯ ಬೀಗದ ಕೈ ಗೋಡೆಗೆ ನೇತು ಹಾಕಿರುವುದನ್ನು ಆತ ಕಂಡ. ಇದರಿಂದ ತನ್ನ ಕೆಲಸ ಇನ್ನಷ್ಟು ಸುಲಭವಾಯಿತೆಂದು ಆತ ಅಂದುಕೊಂಡು, ತಡ ಮಾಡದೆ ತಿಜೋರಿಯ ಬೀಗ ತೆಗೆದು ನೋಡಿದ. ಅಲ್ಲಿ ಹಣ, ಒಡವೆಗಳು ಸೇರಿದಂತೆ ಬಹಳಷ್ಟು ಬಂಗಾರದ ನಾಣ್ಯಗಳು ಅವನ ಕಣ್ಣಿಗೆ ಬಿದ್ದವು.
ಸಂತೋಷಗೊಂಡ ಕಳ್ಳ ಸದ್ದು ಮಾಡದೆ ತಾನು ತಂದಿದ್ದ ಚೀಲದಲ್ಲಿ ಆ ದ್ರವ್ಯಗಳನ್ನು ತುಂಬಿಕೊಳ್ಳುತ್ತಿರುವಾಗ ಅವನ ಒಂದು ಬೆರಳಿನ ಉಗುರು ಮುರಿದು ನೆಲಕ್ಕೆ ಬಿತ್ತು. ಕಳ್ಳ ಕದಿಯುವ ಕೆಲಸ ಬಿಟ್ಟು ಆ ಉಗುರನ್ನು ಹುಡುಕಲು ಮುಂದಾದ. ಸರಿಯಾದ ಬೆಳಕಿಲ್ಲದ ಆ ಕೋಣೆಯಲ್ಲಿ ಬ್ಯಾಟರಿಯ ಬೆಳಕಿನ ಸಹಾಯದಿಂದ ಎಷ್ಟು ಹುಡುಕಿದರೂ ಆ ಉಗುರು ಸಿಗಲಿಲ್ಲ. ಮುಂಜಾನೆಯ ಬೆಳಕು ಹರಿಯಿತು. ಆಗಲೂ ಕಳ್ಳನಿಗೆ ಉಗುರಿನ ಪತ್ತೆ ಆಗಲಿಲ್ಲ.
ಮನೆ ಯಜಮಾನ ನಿದ್ರೆಯಿಂದ ಎಚ್ಚರಗೊಂಡು ನೋಡಲು ಮನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ತಿಜೋರಿಯ ಬಾಗಿಲು ತೆರೆದು ಚಿನ್ನದ ಒಡವೆ, ನಾಣ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಬರಿಗೊಂಡ ಶ್ರೀಮಂತ ಕಳ್ಳನ ಹಿಡಿದು ವಿಚಾರಿಸಿದ. ಭಯಭೀತನಾದ ಕಳ್ಳ “ಸ್ವಾಮಿ, ಈ ದಿನ ನಿಮ್ಮ ಮನೆಗೆ ಕನ್ನ ಹಾಕಲು ಬಂದೆ. ಅಕಸ್ಮಾತಾಗಿ ನನ್ನ ಒಂದು ಉಗುರು ಮುರಿದು ಮನೆಯೊಳಗೆ ಬಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ” ಎಂದ ಅವನ ವರ್ತನೆ ಅರ್ಥವಾಗದೇ ಶ್ರೀಮಂತ “ಅಲ್ಲಾ, ಉಗುರು ಮುರಿದು ಹೋದರೆ ನಿನಗೇನಾಯ್ತು? ಒಡವೆಗಳನ್ನು ತೆಗೆದುಕೊಂಡು ನೀನು ಹೋಗಬಹುದಾಗಿತ್ತಲ್ಲ” ಎಂದು ಸಮಾಧಾನದಿಂದ ಕೇಳಿದ.
ಅದಕ್ಕೆ ಕಳ್ಳ “ಛೆ, ಛೇ…ಎಲ್ಲಾದರೂ ಉಂಟಾ ಸ್ವಾಮಿ? ಉಗುರನ್ನು ಮನೆಯೊಳಗೆ ಬಿಟ್ಟರೆ ದರಿದ್ರ ನಿಮಗೆ” ಅಂಥ ಮತ್ತೆ ವಿಚಿತ್ರವಾಗಿ ಉತ್ತರಿಸಿದ. ತಾಳ್ಮೆ ಕಳೆದುಕೊಳ್ಳದ ಶ್ರೀಮಂತ ಕುತೂಹಲದಿಂದ “ನಾನು ದರಿದ್ರನಾದರೆ ನಿನಗೇನು? ನಿನ್ನ ಪಾಡು ನಿನ್ನದಲ್ಲ” ಅಂಥ ಮರು ಉತ್ತರ ನೀಡಿದ. ಆಗ ಕಳ್ಳ “ಸ್ವಾಮಿ, ತಾವು ಶ್ರೀಮಂತಿಕೆಯಿಂದ ಇದ್ದ ಕಾರಣಕ್ಕೆ ನಾನು ಇಲ್ಲಿಗೆ ಕದಿಯಲು ಬಂದೆ. ನೀವು ದರಿದ್ರರಾಗಿಬಿಟ್ಟರೆ ನನ್ನಂಥ ಕಳ್ಳರ ಗತಿ ಏನು? ಆದ್ದರಿಂದ ನೀವು ಚೆನ್ನಾಗಿರಬೇಕು. ಕೊಡುವವನು ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರಬೇಕು” ಎಂದು ನುಡಿದ.
ತನಗೆ ಆಪತ್ತು ಒದಗುವುದು ಎಂದು ತಿಳಿದರೂ ತನ್ನ ನೀತಿಯನ್ನು ಬಿಡದ ಕಳ್ಳನನ್ನು ನೋಡಿ ಶ್ರೀಮಂತನಿಗೆ ಅತೀವ ಆನಂದವಾಯಿತು. ಬಳಿಕ ಆತ ಅವನಿಗೆ ಬೇಕಾಗುವಷ್ಟು ಒಡವೆ, ನಾಣ್ಯಗಳನ್ನು ನೀಡಿ ಸಂತೋಷದಿಂದ ಕಳುಹಿಸಿದ. ನಮ್ಮ ನಡವಳಿಕೆಯಿಂದ ಇನ್ನೊಬ್ಬರ ಬದುಕು ಹಸನಾಗದಿದ್ದರೂ ಪರವಾಗಿಲ್ಲ. ವಿನಾಶವಾಗಬಾರದು ಎಂಬುದನ್ನು ಈ ಕತೆಯಿಂದ ತಿಳಿದುಕೊಳ್ಳಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.