ಶಹಾಪುರಕ್ಕಿದೆಯೇ ಐಸಿಸ್ ಉಗ್ರರ ನಂಟು..? FULL DETAIL
ಬಂಧಿತ ಉಗ್ರನೊಂದಿಗೆ ಸಂಪರ್ಕ - ಶಹಾಪುರಕ್ಕೆ ಆಗಮಿಸಿದ ಐಎನ್‍ಎ ತಂಡ
ಶಹಾಪುರಕ್ಕಿದೆಯೇ ಐಸಿಸ್ ಉಗ್ರರ ನಂಟು..?
ಬಂಧಿತ ಉಗ್ರನೊಂದಿಗೆ ಸಂಪರ್ಕ ಃ ಶಹಾಪುರಕ್ಕೆ ಆಗಮಿಸಿದ ಐಎನ್‍ಎ ತಂಡ
ಶಹಾಪುರಃ ಜಾರ್ಖಂಡನಲ್ಲಿ ಬಂಧಿತ ಐಸಿಸ್ (ಐಎಸ್‍ಐಎಸ್) ಉಗ್ರನೋರ್ವನ ಸಂಪರ್ಕಿತ ಆರೋಪಿ ಎನ್ನಲಾದ ನಗರದ ವಾರ್ಡ್ ನಂಬರ್ 21 ರ ನಿವಾಸಿ, ಹಳೆಪೇಟೆಯ ದೇಶಮುಖ ಮನೆ ಹಿಂಭಾಗದ ಮನೆಯಲ್ಲಿ ವಾಸವಿರುವದನ್ನು ಮನಗಂಡಿದ್ದ ಜಾರ್ಖಂಡದ ಎನ್‍ಐಎ ತಂಡ ನಗರಕ್ಕೆ ಆಗಮಿಸಿ ಗುರುವಾರ ಬೆಳಗಿನ ಜಾವ 4 ಗಂಟೆಗೆ ಆರೋಪಿ ಖಾಲಿದ್ ಐಹ್ಮದ್ ತಂದೆ ಅಬ್ದುಲ್ ಸಲೀಂ ಅವರ ಮನೆ ಮೇಲೆ ದಾಳಿ ನಡೆಸಿ ಆರೋಪಿ ಖಾಲಿದ್ ಐಹ್ಮದ್ (22) ಈತನನ್ನು ವಿಚಾರಣೆಗೆ ಒಳಪಡಿಸಿದ ಘಟನೆ ನಡೆದಿದೆ.
ಇದೇ ಜುಲೈ ತಿಂಗಳಲ್ಲಿ ಜಾರ್ಖಂಡನ ರಾಂಚಿಯಲ್ಲಿ ಬಂಧಿಸಲ್ಪಟ್ಟ ಉಗ್ರ ಸಂಘಟನೆಯ ವ್ಯಕ್ತಿಯ ಜೊತೆ ಶಹಾಪುರ ನಗರದ ಖಾಲಿದ್ ಐಹ್ಮದ್ ಸಂಪರ್ಕ ಹೊಂದಿದ್ದಾನೆ ಎನ್ನುವ ಮಾಹಿತಿ ಮೇರೆಗೆ ಎನ್‍ಐಎ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.ಎರಡು ಮೋಬೈಲ್ ವಶಕ್ಕೆಃ ಆರೋಪಿತನ ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡ ಅಧಿಕಾರಿಗಳ ತಂಡ, ಆತನ ಮನೆಯನ್ನು ಪರಿಶೀಲನೆ ನಡೆಸಿ, ನಂತರ ಆತನ ಆದಾಯ, ಆಸ್ತಿ, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.
ರಾಂಚಿಯ ಉಗ್ರ ಸಂಘಟನೆಯ ವ್ಯಕ್ತಿಗೂ ನನಗೂ ಯಾವುದೇ ಸಂಬಂಧವಿಲ್ಲ. ಫೈಜಾನ್ ಎಂಬ ವ್ಯಕ್ತಿ ಇನ್ಸ್ಟ್ರಾಗ್ರಾಂನಲ್ಲಿ ಫ್ರೆಂಡ್ಸ್ ಆಗಿದ್ದಾನೆ ಅಷ್ಟೆ. ಆತ ಯಾರೆಂಬುದು ನನಗೆ ಗೊತ್ತಿಲ್ಲ. ಮೊಬೈಲ್‍ನಲ್ಲಿ ಅಲಿಘಡ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತೇನೆ ಎಂದು ಆತ ಹೇಳಿಕೊಂಡಿದ್ದ ಆತನೊಂದಿಗೆ ಚಾಟಿಂಗ್ ಮಾಡಿದ್ದೇನೆ. ಆತನನ್ನು ನಾನು ನೋಡಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಷ್ಟೆ.
–ಖಾಲಿದ್ ಐಹ್ಮದ್ . ಆರೋಪಿತ.
ನನ್ನ ಮಗ ಯಾವುದೇ ರೀತಿ ತಪ್ಪು ಮಾಡಿರುವದಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ರಾಂಚಿ ಮೂಲದ ಫೈಜಾನ್ ಎಂಬಾತ ಸಾಮಾನ್ಯವಾಗಿ ಜಾಲತಾಣದಲ್ಲಿ ಚಾಟಿಂಗ್ ಮಾಡಿದ್ದಾರೆ ಅಷ್ಟೆ. ರಾಂಚಿಯ ಫೈಜಾನ್ ಎಂಬಾತ ಯಾರೋ ನಮ್ಮ ಹುಡಗನಿಗೆ ಗೊತ್ತಿಲ್ಲ. ಬೆಳ್ಳಂಬೆಳಗ್ಗೆ ಪೊಲೀಸರು ಹಾಗೂ ಅಧಿಕಾರಿಗಳ ತಂಡ ಆಗಮನದಿಂದ ನಾವು ಸ್ವಲ್ಪ ಹೊತ್ತು ಆತಂಕಗೊಂಡಿದ್ದೇವು. ನಮ್ಮ ಹುಡುಗ ಯಾವುದೇ ತಪ್ಪು ಮಾಡಿಲ್ಲ.
–ಅಬ್ದುಲ್ ಸಲಿಂ. ಆರೋಪಿತನ ತಂದೆ. ಮೆಕಾನಿಕ್.
ಎನ್‍ಐಎ ಅಧಿಕಾರಿಗಳ ತಂಡ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಗೆ ದಾಂಗುಡಿ ಇಟ್ಟರು. ಸ್ಥಳೀಯ ನಾಲ್ಕು ಜನ ಪೊಲೀಸರೊಂದಿಗೆ ಅಧಿಕಾರಿಗಳು ಬಂದಿದ್ದರು. ನಮ್ಮ ತಂದೆಯವರು ಗಾಬರಿಗೊಂಡು ಯಾರು ಬೇಕೆಂದು ಪ್ರಶ್ನಿಸಿದ್ದಾರೆ. ನನ್ನ ಹೆಸರು ಅಧಿಕಾರಿಗಳು ಹೇಳಿದ ತಕ್ಷಣ ಯಾಕೆ ಏನಾಗಿದೆ,?É ಎಂದು ತಂದೆಯವರು ಕೇಳಿದ್ದಾರೆ. ಅವನನ್ನು ಕರೆಯಿರಿ ಮೊದಲು ಎಂದ ತಕ್ಷಣ ನನ್ನ ಎಬ್ಬಿಸಿದ್ದಾರೆ ಎಂದು ಆರೋಪಿ ಖಾಲಿದ್ ಐಹ್ಮದ್ ಮಾತು ಮುಂದುವರೆಸಿ,
ಮನೆಯವರೆಲ್ಲರನ್ನೂ ವಿಚಾರಿಸಿ, ನಂತರ ನನ್ನನ್ನ ಪ್ರತ್ಯೇಕವಾಗಿ ಎರಡು ಗಂಟೆ ವಿಚಾರಣೆ ನಡೆಸಿದರು. ನನ್ನ ಹತ್ತಿರವಿದ್ದ ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಸೆ.20 ರಂದು ರಾಂಚಿಗೆ ಆಗಮಿಸುವಂತೆ ಅಧಿಕಾರಿಗಳು ನನಗೆ ಸೂಚನೆ ನೀಡಿದ್ದಾರೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾಗಿ ನಾನು ಉತ್ತರಿಸಿದ್ದೇನೆ ಎಂದು ಪತ್ರಿಕೆಗೆ ತಿಳಿಸಿದರು.