ಪ್ರಮುಖ ಸುದ್ದಿ

ವಿಶೇಷ ಚೇತನರ ಶೇ.5 ರಷ್ಟು ಅನುದಾನ ಬಳಕೆ ಮಾಡಿ – ಸಿಇಒ ಗರಿಮಾ ಪನ್ವಾರ

ವಿಶೇಷ ಚೇತನರ ಅನುದಾನ ಬಳಕೆ, ಹಕ್ಕುಗಳ ಕಾಯ್ದೆ-2016 ಕುರಿತು ಕಾರ್ಯಗಾರ

ವಿಶೇಷ ಚೇತನರ ಅನುದಾನ ಬಳಕೆ, ಹಕ್ಕುಗಳ ಕಾಯ್ದೆ-2016 ಕುರಿತು ಕಾರ್ಯಗಾರ

ವಿಶೇಷ ಚೇತನರ ಶೇ.5 ರಷ್ಟು ಅನುದಾನ ಬಳಕೆ ಮಾಡಿ – ಸಿಇಒ ಗರಿಮಾ ಪನ್ವಾರ

ಶಹಾಪುರಃ ವಿಶೇಷಚೇತನರ ಹಕ್ಕುಗಳ ಸಂರಕ್ಷಣಾ ಕಾಯ್ದೆ-2016 ರನ್ವಯ ಸರಕಾರದ ವಿವಿಧ ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ.5ರಷ್ಟು ಅನುದಾನ ವಿಶೇಷಚೇತನರ ಅಭಿವೃದ್ಧಿಗೆ ಬಳಕೆ ಮಾಡುವ ಮೂಲಕ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಗರಿಮಾ ಪನ್ವಾರ ಅವರು ಹೇಳಿದರು.

ಜಿಲ್ಲಾಡಳಿತ, ಜಿಪಂ ಯಾದಗಿರಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ, ತಾಪಂ ಶಹಾಪುರ, ದಿ ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ(ಎಪಿಡಿ) ಇವರ ಸಂಯುಕ್ತಾಶ್ರಯದಲ್ಲಿ ಅ.18ರಂದು ಶಹಾಪುರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ವಿಕಲಚೇತನರ ಶೇ.5ರ ಅನುದಾನ ಬಳಕೆ ಹಾಗೂ ವಿಕಲಚೇತನರ ಹಕ್ಕುಗಳ ಕಾಯ್ದೆ-2016 ಕುರಿತು ನಡೆದ ಕಾರ್ಯಗಾರ ಉದ್ಘಾಟಿಸಿ, ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಅಧ್ಯಕ್ಷರು, ಸದಸ್ಯರು ಒಮ್ಮತದ ಮೇರೆಗೆ ಶೇ.5 ರಷ್ಟು ಅನುದಾನ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಬೇಕು. ಅಲ್ಲದೆ, ಸರಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ವಿಕಲಚೇತನರಲ್ಲಿ ತಿಳಿವಳಿಕೆ ಮೂಡಿಸಿ, ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಿ ಎಂದರು.

ವಿಶೇಷಚೇತನರ ಬಗ್ಗೆ ಯಾರು ಅನುಕಂಪ ಪಡುವ ಅಗತ್ಯವಿಲ್ಲ, ಅವರಿಗೆ ಸರಕಾರದ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಿ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆರು ತಿಂಗಳಿಗೊಮ್ಮೆ ವಿಕಲಚೇತನರ ಅಭಿವೃದ್ಧಿಗಾಗಿ ಸಮನ್ವಯ ಗ್ರಾಮ ಸಭೆ ಮಾಡಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಗ್ರಾಮ ಪಂಚಾಯಿತಿಯ ಸೂಚನಾ ಫಲಕದಲ್ಲಿ ಮಾಹಿತಿ ಪ್ರದರ್ಶನ ಮಾಡಿ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ವಿಕಲಚೇತನರಿಗೆ ಸ್ವಾವಲಂಬಿ ಜೀವನ ನಿರ್ವಹಣೆ ಮಾಡಲು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಒಂದು ಆರ್ಥಿಕ ವರ್ಷದಲ್ಲಿ ಒಬ್ಬರಿಗೆ ಒಂದು ವಿಶೇಷ ಜಾಬ್ ಕಾರ್ಡ್ ನೀಡಿ, ನೂರು ದಿನಗಳ ಕೂಲಿ ಕೆಲಸ ಕೊಡಲಾಗುತ್ತದೆ.

ಅಲ್ಲದೆ ಕೆಲಸ ನಿರ್ವಹಣೆಯಲ್ಲಿ ಶೇ.50ರಷ್ಟು ವಿನಾಯಿತಿ ನೀಡಿದ್ದು, ಒಂದು ದಿನಕ್ಕೆ 316ರೂ.ಗಳಂತೆ ಕೂಲಿ ಪಾವತಿಸಲಾಗುತ್ತದೆ. ಒಬ್ಬ ವಿಕಲಚೇತನ ವ್ಯಕ್ತಿ ನೂರು ದಿನ ಕೆಲಸ ಮಾಡಿದರೆ 31,600 ರೂ.ಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ಫಲಾನುಭವಿಗಳಿಗೆ, ಬೆಳವಣಿಗೆಯಲ್ಲಿ ಕುಂಠಿತ ಇರುವ ಮಕ್ಕಳಿಗೆ ಸಾಧನ ಸಲಕರಣೆ ಹಾಗೂ ನಿರಾಮಯಿ ಕಾರ್ಡ್, ವಿಶೇಷಚೇತನ ಯುವತಿಯರಿಗೆ ಹೊಲಿಗೆ ಯಂತ್ರ, ಊಲನ್ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ವಿಶೇಷಚೇತನರ ಸನ್ನೆ ಭಾಷೆ ಪರಿಣಿತೆ ಸೌಮ್ಯ ಅವರು ಸನ್ನೆ ಭಾಷೆಯ ಪ್ರಾಮುಖ್ಯತೆ ಹಾಗೂ ಶ್ರವಣ ದೋಷದ ನೂನ್ಯತೆ ಇರುವ ಮಕ್ಕಳ ಸಮಸ್ಯೆಗಳ ಕುರಿತು ತರಬೇತಿ ನಿಡಿದರು.

ಈ ವೇಳೆ ಶಹಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕರಾದ ಭೀಮರಾಯ ಬಿರಾದಾರ, ಎಪಿಡಿ ಸಂಸ್ಥೆಯ ಜಿಲ್ಲಾ ಮುಖ್ಯಸ್ಥರಾದ ಮದುಕೇಶವ, ಈರಣ್ಣ, ತಾಲೂಕ ಎಂಆರ್‌ಡಬ್ಲೂ ನಾಗರಾಜ, ತಾಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿಶೇಚೇತನ ಫಲಾನುಭವಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button