ಕಲಬುರ್ಗಿಃ ಶಿಕ್ಷಕನಿಂದ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿ, ಬಿಇಓ, ಸಿಆರ್ಪಿ ಬಲೆಗೆ
ಕಲಬುರ್ಗಿಃ ಶಿಕ್ಷಕನಿಂದ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಬಿಇಓ, ಸಿಆರ್ಪಿ
ಕಲಬುರ್ಗಿಃ ಶಿಕ್ಷಕನೋರ್ವನಿಂದ ಐದು ಸಾವಿರ ರೂ. ಲಂಚ ಸ್ವೀಕರಿಸುವಾಗ ಬಿಇಓ ಮತ್ತು ಸಿಆರ್ಪಿ ಇಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಆಳಂದ ಪಟ್ಟಣದ ಬಿಇಓ ಕಚೇರಿಯಲ್ಲಿಯೇ ನಡೆದಿದೆ.
ಅಮೃತ ಸಿಂದೆ ಎಂಬ ಶಿಕ್ಷಕನಿಂದ ಲಂಚ ಸ್ವೀಕರಿಸುವಾಗ ಬಿಇಓ ಗುರಣ್ಣ ಗುಂಡಗುರ್ತಿ ಮತ್ತು ಸಿಆರ್ಪಿ ಮಲ್ಲಿಕಾರ್ಜುನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಶಿಕ್ಷಕ ಅಮೃತ ಸಿಂಧೆ, ಆಳಂದ ತಾಲೂಕಿನ ಹೊನ್ನಳ್ಳಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತ ಕೆಲ ದಿನಗಳ ಹಿಂದೆ ರಜೆ ಪಡೆಯದೆ ಶಾಲೆಗೆ ಗೈರಾಗಿದ್ದ ಕಾರಣ ಸಿಆರ್ಪಿ ಮಲ್ಲಿಕಾರ್ಜುನ ಬಿಇಓ ಅವರಿಗೆ ಶಿಕ್ಷಕನ ಅನಧಿಕೃತ ರಜೆ ಬಗ್ಗೆ ವರದಿ ನೀಡಿದ್ದರು.
ಶಿಕ್ಷಕ ಅಮೃತ್ ಅವರ ಅನಧಿಕೃತ ರಜೆಯ ದೂರನ್ನು ರದ್ದುಗೊಳಿಸಲು ಸಿಆರ್ಪಿ ಮತ್ತು ಬಿಇಓ ಸೇರಿ ಹದಿನೈದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕ ಸಾಕಷ್ಟು ಕೇಳಿಕೊಂಡಿದ್ದರೂ ಕ್ಯಾರೆ ಅನ್ನದ ಬಿಇಓ, ಅಂತಿಮವಾಗಿ ಐದು ಸಾವಿರ ರೂ.ನೀಡುವಂತೆ ಒತ್ತಾಯಿಸಿದ್ದರಂತೆ.
ಅಧಿಕಾರಿಗಳ ಲಂಚಾವತಾರದಿಂದ ರೋಸಿಹೋಗಿದ್ದ ಶಿಕ್ಷಕ ಅಮೃತ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸಂತೋಷ ಬನಹಟ್ಟಿ ಅವರನ್ನು ಸಂಪರ್ಕಿಸಿ ಬಿಇಓ ಮತ್ತು ಸಿಆರ್ ಪಿ ಅವರನ್ನು ಎಸಿಬಿ ಬಲೆಗೆ ಕೆಡವಿದ್ದಾರೆಂದು ತಿಳಿದುಬಂದಿದೆ. ಬನಹಟ್ಟಿ ಅವರು ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಬಿಇಓ ಮತ್ತು ಸಿಆರ್ಪಿ ಅವರನ್ನು ರೆಡ್ ಹ್ಯಾಂಡಾಗಿ ಹಿಡಿಯುವ ಮೂಲಕ ಕ್ರಮಕೈಗೊಂಡಿದ್ದಾರೆ. ಈ ಕುರಿತು ಕಲಬುರ್ಗಿ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.