ಹಾಲಭಾವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಪನ್ನ
ಮದಗಜಗಳಂತೆ ಸೆಣಸಾಡಿದ ಕುಸ್ತಿಪಟುಗಳು
yadgiri, ಶಹಾಪುರಃ ನಗರ ಹತ್ತಿರದ ಹಾಲಭಾವಿ ರಸ್ತೆಯಲ್ಲಿರುವ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಕಾರ್ತಿಕ ಮಾಸಾಚರಣೆ ಹಿನ್ನೆಲೆ ವಿಶೇಷ (ಖಾಂಡ) ಪೂಜೆ ಜಾತ್ರೆ ಜರುಗುವದು. ಅದರಂತೆ ಶನಿವಾರ ಜಾತ್ರಾ ಮಹೋತ್ಸವ ಸಂಪನ್ನಗೊಳಿಸಲಾಯಿತು.
ಜಾತ್ರಾ ಸಂಪನ್ನ ನಿಮಿತ್ತ ಶನಿವಾರ ಬೆಳಿಗ್ಗೆ 6 ಗಂಟೆಗೆ ಶ್ರೀವೀರಭದ್ರೇಶ್ವರ ಮೂರ್ತಿಗೆ ವೈಜನಾಥ ಶಾಸ್ತ್ರಿ ನೇತೃತ್ವದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ವಿಶೇಷ ಪೂಜೆ ಜರುಗಿತು.
ಪದ್ದತಿಯಂತೆ ದೇವಸ್ಥಾನದ ಸುತ್ತಮುತ್ತಲಿನ ಹೊಲ, ಗದ್ದೆಗಳ ರೈತರು ಸೇರಿಕೊಂಡು ಕಾರ್ತಿಕ ಮಾಸ ಆಚರಣೆ ಅಂಗವಾಗಿ ಅಂತಿಮವಾಗಿ ಜಾತ್ರಾ ಸಂಪನ್ನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ. ಭಕ್ತಾಧಿಗಳೆಲ್ಲರೂ ಸೇರಿ ಅಂದು ಶ್ರೀದೇವರಿಗೆ ವಿಶೇಷ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅದರಂತೆ ಈ ವರ್ಷ ಭಕ್ತರಾದ ಪತ್ರಕರ್ತ ಅಮರೇಶ ಹಿರೇಮಠ ಅವರು ಗೋದಿ ಹುಗ್ಗಿ ಮತ್ತು ಅನ್ನ ಸಾಂಬಾರು ವ್ಯವಸ್ಥೆ ಮಾಡಿದ್ದರು.
ಇದೇ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವು ಗ್ರಾಮೀಣ ಕಲೆ ಕುಸ್ತಿ ಪಂದ್ಯವನ್ನು ಆಯೋಜಿಸಲಾಗಿತ್ತು. ಶನಿವಾರ ಮದ್ಯಾಹ್ನ 3 ಗಂಟೆಯಿಂದಲೇ ಪ್ರಾರಂಭವಾದ ಕುಸ್ತಿ ಪಂದ್ಯದಲ್ಲಿ ನೂರಾರು ಪಟುಗಳು ಮದಗಜಗಳಂತೆ ಸೆಣಸಾಡಿ ಕಲೆ ಪ್ರದರ್ಶಿಸಿದರು.
ನಂತರ ಅಂತಿಮವಾಗಿ ಖಡ್ಗದ ಪಂದ್ಯದಲ್ಲಿ ನಗರದ ರಾಜು ಭೀಮರಾಯ ಸಗರ ಎನ್ನುವ ಕುಸ್ತಿ ಪಟು ತನ್ನ ಪ್ರತಿಸ್ಪರ್ಧಿ ಗೋಗಿ ಗ್ರಾಮದ ರಾಯಪ್ಪ ಎನ್ನುವ ಪಟುವಿಗೆ ಪರಾಜಯಗೊಳಿಸುವ ಮೂಲಕ ಸೇರಿದ್ದ ರೈತಾಪಿ ಮುಖಂಡರಿಂದ ಬೆಳ್ಳಿ ಕಡಗವನ್ನು ತನ್ನ ಮುಂಗೈಗೇರಿಸಿಕೊಂಡರು.
ನಂತರ ಇನ್ನೊಂದು ಬೆಳ್ಳಿ ಕಡಗದ ಪಂದ್ಯದಲ್ಲಿ ಚಂದ್ರು ನಾಯ್ಕೋಡಿ ಎನ್ನುವ ಯುವಕ ಶಿರವಾಳ ಯುವಕನನ್ನು ಸೋಲಿಸುವ ಮೂಲಕ ಬೆಳ್ಳಿ ಕಡಗ ವಿಜೇತರಾದರು. ಒಬ್ಬರಿಗಿಂತ ಒಬ್ಬರು ಕುಸ್ತಿಯಲ್ಲಿ ತಮ್ಮ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ನೋಡುಗರ ಮೈಜುಮ್ಮೆನ್ನುವಂತೆ ಮಾಡುವ ಮೂಲಕ ವೀಕ್ಷರನ್ನು ನಿಬ್ಬೆರಗುಗೊಳಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಯಪ್ಪ ಸಾಲಿಮನಿ, ಯಲ್ಲಪ್ಪ ನಾಯ್ಕೋಡಿ, ಭೀಮರಾಯ ಸಗರ, ಯಲ್ಲಪ್ಪ ಮಾಸ್ತರ ಹಳಕಟ್ಟಿ, ದೊಡ್ಡ ನಿಂಗಪ್ಪ ನಾಯ್ಕೋಡಿ, ಮಲ್ಲಪ್ಪ ನಾಯ್ಕೋಡಿ, ಅಂಬ್ರೇಶ ನಾಯ್ಕೋಡಿ, ಭೀಮರಾಯ ಸಾಲಿಮನಿ, ಭೀಮರಾಯ ತಹಸೀಲ್ದಾರ್, ಭೀಮರಾಯ ಹೆಡಗಿಮದ್ರಾ ಸೇರಿದಂತೆ ನೂರಾರು ರೈತ ಮುಖಂಡರು, ಯುವಕರು ಭಾಗವಹಿಸಿದ್ದರು.