ಪಂಚಕಂತಿ ಮಠ- ಸಂಭ್ರಮದ ಶರಣಬಸವೇಶ್ವರ ರಥೋತ್ಸವ, ಉತ್ತುತ್ತಿ, ಬಾಳೆಹಣ್ಣು ಸಮರ್ಪಣೆ
ಶಹಾಪುರದಲ್ಲಿ ಶರಣಬಸವೇಶ್ವರರ ಸಂಭ್ರಮದ ರಥೋತ್ಸವ
Yadgiri, ಶಹಾಪುರ: ನಗರದಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ರಥೋತ್ಸವ ಶನಿವಾರ ಸಂಜೆ ಶ್ರದ್ಧಾ ಭಕ್ತಿ ಪೂರ್ವಕ ಸಹಸ್ರಾರು ಭಕ್ತರ ಮಧ್ಯದಲ್ಲಿ ಜರುಗಿತು.
ದಿಗ್ಗಿ ಬೇಸ್ ಹತ್ತಿರವಿರುವ ಪಂಚಕಂತಿ ಮಠದಿಂದ ಪ್ರತಿವರ್ಷ ರಥೋತ್ಸವ ನಡೆಸಲಾಗುತ್ತದೆ.
ಶ್ರೀಚರಬಸವ ತಾತನವರ ಗುರುಗಳಾದ ಬಾಡಿಯಾಲ ಮೂಲ ಮಠದ ಚೆನ್ನವೀರ ಶಿವಾಚಾರ್ಯರಿಂದ ರಥೋತ್ಸವಕ್ಕೆ ಚಾಲನೆ ದೊರೆಯಿತು.
ಪಂಚಕಂತಿ ಮಠದಿಂದ ದಿಗ್ಗಿ ಬೇಸ್ ರಸ್ತೆ ಮಾರ್ಗವಾಗಿ ಗಾಂಧಿ ಚೌಕ ಹತ್ತಿರದ ಗುಗ್ಗಳ ಬಸವೇಶ್ವರ ದೇವಸ್ಥಾನ ದವರೆಗೆ ರಥೋತ್ಸವ ಜರುಗಿತು.
ರಥೋತ್ಸವ ಹಿನ್ನೆಲೆ ಭಕ್ತಾಧಿಗಳು ಶ್ರೀಮಠಕ್ಕೆ ಬೆಳಗ್ಗೆಯಿಂದಲೇ ನೈವೇದ್ಯ ಅರ್ಪಿಸಿ ಕಾಯಿ ಕರ್ಪೂರ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು.
ರಥೋತ್ಸವ ವೇಳೆ ಉತ್ತುತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಈ ವೇಳೆ ಗದ್ದುಗೆಯ ಬಸವಯ್ಯ ಶರಣರು, ಶರಣು ಬಿ. ಗದ್ದುಗೆ, ಶ್ರೀಮಠದ ರಾಚಯ್ಯಸ್ವಾಮಿ ಗದ್ದುಗೆ, ವಿಶ್ವನಾಥ ಗದ್ದುಗೆ, ಡಾ.ಜಗಧೀಶ ಉಪ್ಪಿನ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಹಿನ್ನೆಲೆಃ ನಗರದ ಗದ್ದುಗೆಯ ಶ್ರೀಚರಬಸವೇಶ್ವರರು ಸ್ಥಾಪಿಸಿದ ಪಂಚಕಂತಿ ಮಠ ಇದಾಗಿದ್ದು, ಚರಬಸವೇಶ್ವರರು ದಾಸೋಹ ಮುರ್ತಿಗಳಾಗಿದ್ದು, ಸಮಾಜದಲ್ಲಿ ಅಪಾರ ಭಕ್ತರನ್ನು ಹೊಂದಿದ್ದಾರೆ.
ಅದೇ ವೇಳೆ ಕಲಬುರಗಿ ದಾಸೋಹಿ ಶರಣಬಸವೇಶ್ವರರು ಪಂಚಕಂತಿ ಮಠಕ್ಕೆ ಭೇಟಿ ನೀಡಿದ್ದರಂತೆ. ಅವರ, ಸ್ಮರಾರ್ಣಾಥವಾಗಿ ಪ್ರತಿ ವರ್ಷ ಕಲಬುರಗಿಯಲ್ಲಿ ನಡೆಯುವ ಶರಣಬಸವೇಶ್ವರ ರಥೋತ್ಸವದಂದೆ ನಗರದಲ್ಲಿಯೂ ಅದ್ಧೂರಿಯ ಜಾತ್ರೆ ಜರುಗುತ್ತಿದೆ ಎಂದು ಗದ್ದುಗೆ ಸಂಸ್ಥಾನಿಕರಾದ ಶರಣು ಬಿ.ಗದ್ದುಗೆ ಅವರು ತಿಳಿಸಿದ್ದಾರೆ.