ಕೇವಲ 5 ರೂಪಾಯಿಯ ಕುರ್ಕುರೆ ತಾರದ ಗಂಡನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ ಪತ್ನಿ
ಇತ್ತೀಚಿಗೆ ವಿಚ್ಛೇದನ ಎನ್ನುವುದು ತೀರಾ ಸಾಮಾನ್ಯವಾಗುತ್ತಿದೆ. ಚಿಕ್ಕ ಚಿಕ್ಕ ವಿಚಾರಗಳನ್ನು ದೊಡ್ಡದಾಗಿಸಿಕೊಂಡು ವಿಚ್ಛೇದನ ಪಡೆಯುವ ದಂಪತಿ ಸಂಖ್ಯೆ ಹೆಚ್ಚಾಗುತ್ತಿದೆ. ನನ್ನ ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ, ನನ್ನ ಪತಿ ಪ್ರತಿ ನಿತ್ಯ ಸ್ನಾನ ಮಾಡಲ್ಲ, ಗೊರಕೆ ಹೊಡೆಯುತ್ತಾನೆ, ಬಟ್ಟೆಯನ್ನು ಬೆಡ್ ಮೇಲೆ ಹಾಕುತ್ತಾನೆ ಹೀಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೋರಿ ದಂಪತಿ ಕೋರ್ಟ್ ಮೆಟ್ಟಿಲೇರುವುದು ಹೆಚ್ಚಾಗುತ್ತಿದೆ.
ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಕೋಟ್ಯಂತರ ರೂಪಾಯಿ, ಲಕ್ಷಾಂತರ ರೂಪಾಯಿ ವ್ಯಹಿಸಿ ಮಾಡಿದ ಮದುವೆಯನ್ನು ಕೇವಲ ಐದು ರೂಪಾಯಿ ಕುರ್ಕುರೆ ತಿಂಡಿಗಾಗಿ ರದ್ದು ಕೋರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಆಗ್ರಾದ ಮಹಿಳೆಯೊಬ್ಬರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಪರಿಶೀಲಿಸಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಾಕೆಂದರೆ ಐದು ರೂಪಾಯಿ ಕುರ್ಕುರೆ ಪ್ಯಾಕೆಟ್ ತರದ ಪತಿಯನ್ನು ತನ್ನ ಜೀವನದಿಂದ ದೂರ ಮಾಡಿ ಎಂದು ಆಕೆ ಅರ್ಜಿ ಸಲ್ಲಿಸಿದ್ದಾಳೆ. ಕಳೆದ ವರ್ಷ 2023 ರಲ್ಲಿ ವಿವಾಹವಾಗಿದ್ದ ಈ ಜೋಡಿ ಕೇವಲ ಒಂದು ವರ್ಷದಲ್ಲೇ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಈ ಮಹಿಳೆ ಕಳೆದ ಒಂದೂವರೆ ತಿಂಗಳ ಹಿಂದೆ ಗಂಡನ ಮನೆಯಿಂದ ತನ್ನ ತಾಯಿಯ ಮನೆಗೆ ವಾಪಸ್ ಆಗಿದ್ದಾಳೆ. ಗಂಡನ ಮೇಲೆ ಅತಿ ಕೋಪಗೊಂಡ ಮಹಿಳೆ ತಾಯಿ ಮನೆಯಿಂದಲೇ ಗಂಡನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾಳೆ.
ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ಮುಂದೆ ಆಕೆ ತನ್ನ ಪತಿಯಿಂದ ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಅದಕ್ಕೆ ನಾನು ಆತನ ಮನೆಯನ್ನು ಬಿಟ್ಟು ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಇನ್ನು ಪತಿ, ಪ್ರತಿದಿನ ಕುರ್ಕುರೆ ತರಲು ಹೇಳುತ್ತಾಳೆ. ದಿನನಿತ್ಯದ ತಿಂಡಿಗೆ ಬೇಡಿಕೆ ಇಡುತ್ತಾಳೆ ಎಂದು ದೂರಿದ್ದಾನೆ. ಇಬ್ಬರ ಆರೋಪಗಳನ್ನು ಕೇಳಿದ ಪೊಲೀಸರು ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್ಗೆ ವರ್ಗಾಯಿಸಿದ್ದು, ಪತಿ-ಪತ್ನಿಯನ್ನು ಕೌನ್ಸೆಲಿಂಗ್ ಮಾಡಲಾಗಿತ್ತು. ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂಪಾಯಿ ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ. ಸದ್ಯ ಈ ವಿಚ್ಛೇದನ ಪ್ರಕರಣ ವಿಚಾರಣೆಯನ್ನು ಮುಂದೂಡಲಾಗಿದ್ದು, ಇನ್ನಷ್ಟು ಕೌನ್ಸೆಲಿಂಗ್ ಬಳಿಕ ಈ ಇಬ್ಬರು ರಾಜಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.