ಕಥೆ

ಜ್ಞಾನ ಪ್ರಾಪ್ತಿಗಾಗಿ ಸ್ವಲ್ಪ ಲೌಕಿಕ ಸುಖ ತ್ಯಾಗದ ಅಗತ್ಯವೇ.?

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ಜ್ಞಾನ ಪ್ರಾಪ್ತಿಗಾಗಿ ಸ್ವಲ್ಪ ಲೌಕಿಕ ಸುಖ ತ್ಯಾಗದ ಅವಶ್ಯ..!

ಈ ಪ್ರಪಂಚದಲ್ಲಿ ಜ್ಞಾನದಷ್ಟು ಪವಿತ್ರವಾದುದು ಬೇರೇನಿಲ್ಲ ಎಂಬ ಮಾತು ಜ್ಞಾನದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುತ್ತದೆ. ಇಂತಹ ಮಹತ್ವ ಪೂರ್ಣವಾದ ಜ್ಞಾನ ಸಂಪಾದನೆಗಾಗಿಯೇ ವಿಶ್ವದಾದ್ಯಂತ ಶಾಲಾ ಕಾಲೇಜುಗಳೂ, ವಿಶ್ವವಿದ್ಯಾಲಯಗಳೂ ಜನಸಾಮಾನ್ಯರಿಗೆ ನೆರವಾಗುತ್ತವೆ. ಅಲ್ಲಿ ಲಕ್ಷಾಂತರ ಶಿಕ್ಷಕರೂ, ಸಹಸ್ರಾರು ಪ್ರಾಧ್ಯಾಪಕರೂ ಜ್ಞಾನ ದಾಹಿಗಳಾದ ಕೋಟಿಗಟ್ಟಲೆ ವಿದ್ಯಾರ್ಥಿಗಳಿಗೆ ಜ್ಞಾನವಿತರಣೆ ಮಾಡುತ್ತಾರೆ. ಸರಕಾರಗಳ ವತಿಯಿಂದ ಅನೇಕ ಕೋಟಿ ರೂ.ಗಳ ವ್ಯಯ ನಡೆದರೂ ಜ್ಞಾನವಿತರಣೆಯ ಕಾರ್ಯವು ಸಮರ್ಪಕವಾಗಿ ನಡೆಯುತ್ತಿಲ್ಲ ವೇಕೆ? ಎಂಬುದನ್ನು ನಿರೂಪಿಸುವ ಒಂದು ಮನೋಜ್ಞ ಪ್ರಸಂಗ ಇಲ್ಲಿದೆ.

ರಾಜಾ ಥೀಬಾ ಎಂಬಾತ ಅತ್ಯಂತ ಮಹಾನ್ ಜ್ಞಾನಯೋಗಿ. ಆತ ತುಂಬಾ ಪ್ರಸಿದ್ಧನಾಗಿದ್ದ. ಆತನ ಕೀರ್ತಿಗೆ ಮರುಳಾದ ಬೌದ್ಧ ಭಿಕ್ಷುಕ ರಾಜನ ಬಳಿ ಬಂದು ”ಮಹಾರಾಜರೇ, ನಾನು ಅನೇಕ ವರುಷಗಳಿಂದ ಅಖಂಡ ಜಪ-ತಪ-ಧ್ಯಾನಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೆ ಪರಿಶುದ್ಧ ಜ್ಞಾನದ ಪ್ರಾಪ್ತಿ ಈವರೆಗೆ ನನಗಾಗಿಲ್ಲ. ಆದರೆ ನೀವಾದರೋ ರಾಜ ವಂಶದಲ್ಲಿ ಜನಿಸಿ, ರಾಜ ವೈಭೋಗದ ಜೀವನವನ್ನು ನಡೆಸುತ್ತಲಿದ್ದು ಜ್ಞಾನ ಯೋಗಿ ಎಂಬ ಕೀರ್ತಿಗೆ ಭಾಜನರಾಗಿದ್ದೀರಿ! ಇದು ಹೇಗೆ ಸಾಧ್ಯವಾಯಿತು? ಇದರ ರಹಸ್ಯವೇನು? ನನಗೆ ತುಸು ಮಾರ್ಗದರ್ಶನ ನೀಡಬಲ್ಲಿರಾ?” ಎಂದು ನಿವೇದಿಸಿಕೊಂಡ.

ಬೌದ್ಧ ಭಿಕ್ಷುವಿನ ಸಹಾನುಭೂತಿಯಿಂದ ಆಲಿಸಿದ ರಾಜನು ”ನಿಮ್ಮ ಪ್ರಶ್ನೆಗೆ ಉತ್ತರ ಮತ್ತೆ ನಾನು ಕೊಡುತ್ತೇನೆ. ಸದ್ಯ ನೀವು ಈ ದೀಪವನ್ನು ಕೈಯಲ್ಲಿ ಹಿಡಿದುಕೊಂಡು ಅರಮನೆಯೊಳಗೆ ಹೋಗಿ, ಸಕಲ ವೈಭವದ ಅಂತಃಪುರದ ದರ್ಶನ ಮಾಡಿ ಬನ್ನಿ. ಆದರೊಂದು ಶರ್ತವಿದೆ. ಎಲ್ಲೂ ದೀಪ ಆರಿ ಹೋಗ” ಎಂದ. ಅಂತೆಯೇ ಹೊರಟ ಭಿಕ್ಷುವು ತುಸು ಹೊತ್ತಿನಲ್ಲೇ ಹಿಂದಿರುಗಿ ಬಂದಾಗ ರಾಜನು ಅಚ್ಚರಿಯಿಂದ ಪ್ರಶ್ನಿಸಿದ. ”ಇಷ್ಟೊಂದು ವೈಭವದ ಅರಮನೆಯ ವೀಕ್ಷಣೆ ಇಷ್ಟು ಬೇಗ ಮುಗಿಯಿತೇ? ಅಥವಾ ನಿಮಗೆ ಇಷ್ಟವಾಗಲಿಲ್ಲವೇ?” ಎಂದು ಕೇಳಿದ.

ಉತ್ತರವಾಗಿ ಭಿಕ್ಷುವು ”ಮಹಾಪ್ರಭು, ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು. ಆದರೆ ನಾನು ದೀಪ ಆರಿ ಹೋಗಬಾರದೆಂಬ ಶರ್ತಕ್ಕೆ ಬದ್ಧನಾಗಿದ್ದೆ. ಆದ್ದರಿಂದ ಯಾವುದರ ಸ್ವಾರಸ್ಯವನ್ನು ಅನುಭವಿಸಲು ಸಮರ್ಥನಾಗಲಿಲ್ಲ!!” ಎಂದ. ತಕ್ಷಣವೇ ಚಪ್ಪಾಳೆ ತಟ್ಟಿದ ರಾಜ ”ಇಲ್ಲಿದೆ ಮುಖ್ಯ ಕೇಂದ್ರ ಬಿಂದು. ಜನರು ಲೌಕಿಕ ಸುಖ ಭೋಗದ ಕಡೆಗೆ ಗಮನ ಹರಿಸಿದಾಗ ಆತ್ಮಜ್ಞಾನದ ದೀಪವನ್ನು ಮರೆತು ಬಿಡುತ್ತಾರೆ. ಆತ್ಮಜ್ಞಾನದ ದೀಪವನ್ನೇ ಗಮನಿಸಿದವರಿಗೆ ಲೌಕಿಕ ಸುಖ ಭೋಗದ ಕಾಟವಿಲ್ಲ” ಎಂದ ನುಡಿದ. ಭಿಕ್ಷುವಿನ ಅಂತರಂಗದ ಕಣ್ಣುಗಳು ತೆರೆದುಕೊಂಡವು. ಇಡೀ ಪ್ರಪಂಚದ ಜನರು ಸಾಧ್ಯವಾದಷ್ಟು ಉತ್ತಮ ಸ್ತರದ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಬಯಸುತ್ತಾರೆ. ಆದರೆ ಇಂತಹ ಜ್ಞಾನ ಪ್ರಾಪ್ತಿಗಾಗಿ ಸ್ವಲ್ಪ ತ್ಯಾಗವನ್ನೂ ಮಾಡಬೇಕಾಗುತ್ತದೆ. ಲೌಕಿಕ ಸುಖ ಭೋಗಗಳ ಪಿಪಾಸೆಯನ್ನು ತ್ಯಜಿಸಬೇಕಾಗುತ್ತದೆ. ಇವೆರಡೂ ಜೊತೆ ಜೊತೆಯಾಗಿ ಸಾಗಿದಾಗ ಮಾನವ ಜೀವನ ಸಾರ್ಥಕವೆನಿಸುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button