Homeಅಂಕಣಪ್ರಮುಖ ಸುದ್ದಿಮಹಿಳಾ ವಾಣಿ

ಸೀಬೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸೀಬೆಕಾಯಿ ವರ್ಷಕ್ಕೆರಡು ಬಾರಿ ನೋಡಲು ಸಿಗುತ್ತದೆ. ಎಳೆ ಮಿಡಿ, ಕಾಯಿ, ಹಣ್ಣು ಮುಂತಾದ ಯಾವುದೇ ಭೇದವಿಲ್ಲದೆ ಇದನ್ನು ಖಾಲಿ ಮಾಡುವವರಿದ್ದಾರೆ. ಬಾಯಿ ರುಚಿಗಷ್ಟೇ ಇದನ್ನು ತಿನ್ನುವುದಲ್ಲ, ಸೀಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ.

ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ಬಿಳಿ ಪೇರಲೆ, ಹಳದಿ ಬಣ್ಣದ್ದು, ಕೆಂಪು ಬಣ್ಣದ್ದು- ಹೀಗೆ ಯಾವುದೇ ಆದರೂ ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಒಂದು ದೊಡ್ಡ ಸೀಬೆ ಹಣ್ಣಿನಲ್ಲಿ ಎರಡು ಕಿತ್ತಳೆ ಹಣ್ಣುಗಳಲ್ಲಿ ಇರುವಷ್ಟು ಸಿ ಜೀವಸತ್ವ ಇದೆ. ಇದರಿಂದ ರೋಗ ನಿರೋಧಕ ಶಕ್ತಿ ಬಲವಾಗುವುದಲ್ಲದೆ, ಕಬ್ಬಿಣದ ಅಂಶ ದೇಹದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ. ಮಾತ್ರವಲ್ಲ, ಕೊಲಾಜಿನ್‌ ಉತ್ಪಾದನೆ ಹೆಚ್ಚಾಗಿ, ಕೂದಲು ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ. ಇದು ಹಣ್ಣಾದಾಗ ರುಚಿ ಸಿಹಿಯೇ ಇದ್ದರೂ, ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಪೇರಲೆಯ ಎಲೆಯ ಕಷಾಯಗಳನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಪದ್ಧತಿ ಪರಂಪರಾಗತ ಔಷಧಕ್ರಮದಲ್ಲಿ ಇದೆ. ನಾರಿನಂಶ ಹೇರಳವಾಗಿ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ.

ಜೊತೆಗೆ, ಗ್ಲೂಕೋಸ್‌ ಅಂಶ ದಿಢೀರನೆ ರಕ್ತ ಸೇರದಂತೆ ತಡೆಯುವ ಗುಣವಿದೆ. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ. ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ.   Ad

Related Articles

Leave a Reply

Your email address will not be published. Required fields are marked *

Back to top button