ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಆತ್ಮಹತ್ಯೆ..!
ಬೆಂಗಳೂರು: ನಟ ದರ್ಶನ್ಗೆ ಸೇರಿದ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಒಬ್ಬರು ಏಪ್ರಿಲ್ 16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಫಾರ್ಮ್ ಹೌಸ್ನಲ್ಲಿ ಮ್ಯಾನೇಜರ್ ಆಗಿದ್ದ ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಖಿನ್ನತೆಗೆ ಒಳಗಾಗಿದ್ದು, ಡೆತ್ ನೋಟ್ ಬರೆದಿಟ್ಟು ಆನೇಕಲ್ನ ಬಗ್ಗನದೊಡ್ಡಿಯಲ್ಲಿ ಏಪ್ರಿಲ್ 16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಧರ್ ಅವರ ಶವ ಕಲ್ಲು ಬಂಡೆಯ ಮೇಲೆ ಅನಾಥವಾಗಿ ಪತ್ತೆಯಾಗಿತ್ತು. ಶ್ರೀಧರ್ ಮೃತ ದೇಹ ಕಂಡ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುಮಾರು 10 ಎಕರೆ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ನಲ್ಲಿ ಸುಮಾರು 1 ವರ್ಷ ಕಾಲ ಶ್ರೀಧರ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಶ್ರೀಧರ್ ವಿಷ ಸೇವಿಸಿದ್ದರಿಂದ ಫಾರ್ಮ್ ಹೌಸ್ ಪಕ್ಕದ ಬಂಡೆಯ ಮೇಲೆ ರಕ್ತಕಾರಿ ಸಾವನ್ನಪ್ಪಿದ್ದರು. ಘಟನೆಯ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಶ್ರೀಧರ್ ಅವರು ಬರೆದ ಡೆತ್ನೋಟ್ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದಿದ್ದರು. ಜೊತೆಗೆ ಅವರು ಮಾಡಿದ ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ತಿಳಿಸಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ, ಆತ್ಮಹತ್ಯೆ ಮಾಡಿಕೊಳ್ಳುವಾಗ ಶ್ರೀಧರ್ ಡೆತ್ ನೋಟ್ ಬರೆದಿದ್ದರು. ಡೆತ್ ನೋಟ್ನಲ್ಲಿ ಒಂಟಿತನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಳಿಸಿದ್ದರು. ಪೊಲೀಸರು ತೊಂದರೆ ಕೊಡಬೇಡಿ ಎಂದು ಶ್ರೀಧರ್ ವಿಡಿಯೋದಲ್ಲಿ ಹೇಳಿದ್ದಾರೆ. ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಡೆತ್ನೋಟ್ ಮತ್ತು ವಿಡಿಯೋ ಕೂಡ ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿಷ ಸೇವಿಸಿ ಶ್ರೀಧರ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ ಎಂದರು.