ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿಗೆ ಓರ್ವ ವ್ಯಕ್ತಿ ಸೇರಿದಂತೆ 3 ಮಕ್ಕಳ ಬಲಿ
ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿಗೆ ನಾಲ್ವರು ಬಲಿ ಮೂವರಿಗೆ ಗಂಭೀರ ಗಾಯ
ಯಾದಗಿರಿ: ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ನಾಲ್ಕು ಜನರು ಸಿಡಿಲು ಬಡೆದು ಓರ್ವ ವ್ಯಕ್ತಿ ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಜರುಗಿದೆ.
ಸುರಪುರ ತಾಲೂಕಿನ ಎಣ್ಣೆ ವಡಿಗೇರಾ ಗ್ರಾಮದ ನಾಗಪ್ಪ ಹೊಸಮನಿ(40) ಎಂಬಾತ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಇತರೆ ಮೂವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಲ್ಲದೆ ಯಾದಗಿರಿ ತಾಲೂಕಿನ ಗೌಡಗೇರಾ ಗ್ರಾಮದ ಮೂವರು ಮಕ್ಕಳು ಕುರಿ ಕಾಯಲು ಹೊರವಲಯದ ಅಡವಿಗೆ ತೆರಳಿದ್ದಾಗ, ಸಿಡಿಲು ಬಡಿದು ನಾಗರಾಜ್(14) ಮೀನಾಕ್ಷಿ (06) ಮತ್ತು ಕರೆಪ್ಪ (15) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೈದಾಪುರ ಮತ್ತು ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಎಣ್ಣೆ ವಡಿಗೇರಾದ ಗಾಯಗೊಂಡ ಮೂವರು ಮಹಿಳೆಯರನ್ನು ಸಮೀಪದ ವಿಜಯಪುರ ಜಿಲ್ಲೆಯ ನಾಲತವಾಡ ಗ್ರಾಮದ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.