ಪತಿ ದರ್ಶನ್ಗಾಗಿ ಶಕ್ತಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಅತ್ಯುತ್ತಮ ಉದಾಹರಣೆ.
ಮಾಡಬಾರದ್ದನ್ನ ಮಾಡಿದರೆ, ಆಗಬಾರದ್ದೇ ಆಗುತ್ತೆ ಅನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್, ಅದ್ಯಾರೋ ಪವಿತ್ರಾ ಎಂಬ ಮಾಯಾಂಗನೆಯ ಮೋಹದಲ್ಲಿ ಸಿಲುಕಿದ್ದಾರೆ. ಆದರೂ ಕೂಡ ದರ್ಶನ್ ಮೇಲೆ ಅವರ ಪತ್ನಿ ವಿಜಯ ಲಕ್ಷ್ಮೀ ಅವರಿಗೆ ಇರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಗಂಡ ದರ್ಶನ್ ಅವರನ್ನು ಜೈಲಿಂದ ಕರೆತರಲು ವಿಜಯಲಕ್ಷ್ಮೀ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಕ್ತಿ ದೇವತೆಯ ಮೊರೆ ಕೂಡ ಹೋಗಿದ್ದಾರೆ.
ಹೌದು, ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೇ ಮಹಾಕಾಳಿ ದೇವಸ್ಥಾನಕ್ಕೆ ತೆರೆಳಿದ ವಿಜಯಲಕ್ಷ್ಮೀ, ಜೈಲಿನಾಚೆ ಪತಿಯ ದರ್ಶನಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಪೂಜೆಯನ್ನು ಮಾಡಿದ್ದಾರೆ. ಆಷಾಢ ಶನಿವಾರದ ಮಧ್ಯಾಹ್ನದಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ, ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.




