ರೈತರಿಗೆ ಗುಡ್ ನ್ಯೂಸ್: ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ದಿನಾಂಕ ವಿಸ್ತರಿಸಲು ಭರವಸೆ

(CROP-INSURANCE:) ಮಲೆನಾಡು ಭಾಗದಲ್ಲಿ ಸುರಿದ ಮಳೆಗೆ ಹಲವು ಅವಾಂತರ ಸೃಷ್ಟಿಸಿತ್ತು, ಸದ್ಯ ಕೆಲವು ಭಾಗದಲ್ಲಿ ಇದೀಗ ಸುಧಾರಿಸಿಕೊಳ್ಳುತ್ತಿದೆ. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆದ ಪರಿಣಾಮ ಈಗಲೇ ಬೆಳೆ ನಾಶವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಈ ನಡುವೆ ರಾಜ್ಯದ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ನೋಂದಣಿ ಮಾಡಿಸಲು ನಿನ್ನೆ (ಜುಲೈ 31 2024) ಕೊನೆಯ ದಿನವಾಗಿತ್ತು. ಆದರೆ ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದಾಗಿ ಹಲವು ರೈತರಿಗೆ ಬೆಳೆ ವಿಮೆ ಪ್ರೀಮಿಯಂ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಿನಾಂಕ ವಿಸ್ತರಿಸಿ ರೈತರಿಗೆ ಬೆಳೆ ವಿಮೆ ಪಾವತಿಗೆ ಮತ್ತಷ್ಟು ಸಮಯಾವಕಾಶ ನೀಡಬೇಕೆಂದು ವಿನಂತಿಸಿದರು.
ಇದೀಗ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌವ್ಹಾನ್ ಅವರ ಗಮನಕ್ಕೆ ತಂದಿದ್ದು, ಜುಲೈ ತಿಂಗಳ ಅಂತ್ಯದಲ್ಲಿ ಮುಗಿಯುವ ಬೆಳೆ ವಿಮೆ ಅವಧಿಯನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ವಿಸ್ತರಿಸಿ ರೈತಾಪಿ ವರ್ಗಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಅವರು ಈ ಬಗ್ಗೆ ಕೂಡಲೇ ಆದೇಶ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ.