ವಿದ್ಯಾರ್ಥಿಗಳ ಅತೀ ಕಡಿಮೆ ದಾಖಲಾತಿಯಿಂದಾಗಿ ರಾಜ್ಯದ 4398 ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ!

ಬೆಂಗಳೂರು: ವಿದ್ಯಾರ್ಥಿಗಳ ಅತಿ ಕಡಿಮೆ ದಾಖಲಾತಿಯಿಂದಾಗಿ ರಾಜ್ಯದಲ್ಲಿ 4398 ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ.
ರಾಜ್ಯದಲ್ಲಿನ 46 ಸಾವಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಸುಮಾರು 18 ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ದಾಟಿಲ್ಲ. ಆಶ್ಚರ್ಯವೆಂದರೆ, ಈ ಪೈಕಿ 4300ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇದರಲ್ಲಿ ಶೂನ್ಯ ದಾಖಲಾತಿಯ ಶಾಲೆಗಳೂ ಇವೆ. ಈ ಹಿಂದೆ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಮತ್ತೊಂದು ಶಾಲೆಯಲ್ಲಿ ವಿಲೀನ ಮಾಡುವ ಮೂಲಕ ಒಂದು ಶಾಲೆಯನ್ನು ಸರ್ಕಾರ ಶಾಶ್ವತವಾಗಿ ಮುಚ್ಚುತ್ತಿತ್ತು.
ಇದೀಗ 4300 ಶಾಲೆಯ ವಿದ್ಯಾರ್ಥಿಗಳು, ಪೋಷಕರಿಗೆ ಅದೇ ಆತಂಕ ಎದುರಾಗಿದೆ. 2022ರಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ 1810 ಇತ್ತು. 2023ರಲ್ಲಿ ಅದು 3646 ಏರಿಕೆಯಾಯ್ತು. ಈ ಸಂಖ್ಯೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 4398ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 700ಕ್ಕೂ ಹೆಚ್ಚು ಶಾಲೆಗಳಲ್ಲಿ ದಾಖಲಾತಿ ತೀವ್ರ ಕುಸಿತಕ್ಕೆ ಒಳಗಾಗಿದೆ. ಈ ಪೈಕಿ ಹಾಸನದಲ್ಲಿ ಅತಿ ಹೆಚ್ಚು 490 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ, 696 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮತ್ತು 347 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ದಾಖಲಾತಿ ಇದೆ. ನಂತರದ ಸ್ಥಾನ ತುಮಕೂರು ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ 1300ರಷ್ಟಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.