ದೆಹಲಿಯಲ್ಲಿ ಅರುಣ್ ಜೇಟ್ಲಿ ಸುದ್ದಿಗೋಷ್ಠಿ: ವ್ಯಾಪಾರಿ, ಉದ್ಯಮಿಗಳಿಗೆ ಬಿಗ್ ರಿಲೀಫ್, GST ತೆರಿಗೆ ಇಳಿಕೆ
ದೆಹಲಿ: ಸ್ಟೇಷನರಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಅಲ್ಲದೆ ವ್ಯಾಪಾರಿಗಳಿಗೆ ರಫ್ತಿನ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ. ಶೇಕಡಾ 0.1ರಷ್ಟು ಜಿ.ಎಸ್ ಟಿ ತೆರಿಗೆಯಲ್ಲಿ ರಫ್ತು ಮಾಡಬಹುದು. ರಫ್ತುದಾರರಿಗೆ 2018ರ ಏಪ್ರಿಲ್ 01ರ ಒಳಗೆ ಇ-ವ್ಯಾಲೆಟ್ ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ರಫ್ತುದಾರರಿಗೆ ರಿಫಂಡ್ ನ ಹಣವನ್ನು ಇ-ವ್ಯಾಲೆಟ್ ಮೂಲಕ ಅಕ್ಟೋಬರ್ 10ರೊಳಗೆ ಜಮಾ ಮಾಡಲಾಗುವುದು. ಇ-ವ್ಯಾಲೆಟ್ ಮೂಲಕ ಮುಂಗಣ ಹಣ ಸಹ ಸಿಗಲಿದೆ. 1ಕೋಟಿ ರೂಪಾಯಿವರಗಿನ ವಹಿವಾಟು ನಡೆಸುವವರಿಗೆ ಶೇಕಡಾ 1ರಷ್ಟು ತೆರಿಗೆ ವಿಧಿಸಲಾಗುವುದು. ಅಂತೆಯೇ ಕಾಂಪೋಸೇಷನ್ ಸ್ಕೀಂ ಸಹ ರೂಪಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
ದೆಹಲಿ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಆಯುರ್ವೇದಿಕ್ ಔಷಧಿಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಮಕ್ಕಳ ಆಹಾರದ ಪಾಕೆಟ್ ಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. 1.50 ಕೋಟಿ ರೂಪಾಯಿಗಿಂತ ಒಳಗಿನ ವ್ಯವಹಾರ ನಡೆಸುವ ರೆಸ್ಟೋರೆಂಟ್ ಗಳಿಗೂ ಜಿಎಸ್ ಟಿ ತೆರಿಗೆ ಕಡಿಮೆ ಮಾಡಲಾಗಿದೆ. ಕೈಮಗ್ಗದ ಮೇಲಿನ ಜಿಎಸ್ ಟಿ ತೆರಿಗೆಯನ್ನು ಸಹ ಇಳಿಸಲಾಗಿದೆ. ಮಾರ್ಬಲ್ , ಗ್ರ್ಯಾನೆಟ್ ಹೊರತುಪಡಿಸಿ ಉಳಿದ ಕಲ್ಲುಗಳಿಗೆ ಮಾತ್ರ ಶೇಕಡಾ 18 ಜಿಎಸ್ ಟಿ ತೆರಿಗೆ ವಿಧಿಸಲಾಗಿದೆ. ಒಟ್ಟು 27ವಸ್ತುಗಳಿಗೆ ಜಿಎಸ್ ಟಿ ತೆರಿಗೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದರು. ಅಂತೆಯೇ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ 3ತಿಂಗಳಿಗೊಮ್ಮೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಒಂದೇ ಅರ್ಜಿಯಲ್ಲಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸಬಹುದು ಎಂದು ತಿಳಿಸಿದರು.