ಕಲಬುರಗಿ: ದರೋಡೆಕೋರರ ಮೇಲೆ ಗುಂಡಿನ ದಾಳಿ
ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ: ಇಬ್ಬರಿಗೆ ಗಾಯ
ಕಲಬುರಗಿ: ಕಲಬುರಗಿ ನಗರದ ಹೊರವಲಯದಲ್ಲಿ ದರೋಡೆಕೋರರ ಗುಂಪು ದರೋಡೆಗೆ ಪ್ಲಾನ್ ಮಾಡಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ದರೋಡೆಕೋರರ ಗುಂಪು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಪರಿಸ್ಥಿತಿ ಕಂಟ್ರೋಲ್ ತಪ್ಪಿದ ಪರಿಣಾಮ ಪೊಲೀಸರು ಆತ್ಮರಕ್ಷಣೆಗಾಗಿ ದರೋಡೆಕೋರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅಶೋಕ ನಗರ ಸಿಪಿಐ ಜೇಮ್ಸ್ , ಆರ್.ಜೆ.ನಗರದ ಪಿಎಸ್ ಐ ಅಕ್ಕಮಹಾದೇವಿ ನೇತೃತ್ವದ ತಂಡ ದಾಳಿ ನಡೆಸಿದೆ. ಪರಿಣಾಮ ದರೋಡೆಕೋರರಾದ ಶಿವಕುಮಾರ್ ಮತ್ತು ಚೇತನ್ ಕಾಲಿಗೆ ಗುಂಡು ತಗುಲಿದೆ. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಪೋಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚೇತನ್ ಮತ್ತು ಶಿವಕುಮಾರ್ ಇಬ್ಬರೂ ರೌಡಿ ಶೀಟರ್ ಗಳಾಗಿದ್ದು ಇಬ್ಬರ ಮೇಲೂ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ.
ದರೋಡೆಕೋರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ವೇಳೆ ಪಿಎಸ್ ಐ ಅಕ್ಕಮಹಾದೇವಿ ಮತ್ತು ಓರ್ವ ಪೇದೆ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪಿಎಸ್ ಐ ಮತ್ತು ಪೇದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.