ಗೃಹ, ವಾಹನ ಸಾಲಗಾರರಿಗೆ ಸಿಹಿ ಸುದ್ದಿ: EMI ಹೊರೆ ಕಡಿತಗೊಳಿಸುವ ಸಾಧ್ಯತೆ
(EMI;) ಅಮೆರಿಕದ ಫೆಡರಲ್ ರಿಸರ್ವ್ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಡ್ಡಿ ದರದಲ್ಲಿ 50 ಮೂಲಾಂಶ ಕಡಿತಗೊಳಿಸಿದೆ. ಇದು ಅಮೆರಿಕ ಮಾತ್ರವಲ್ಲದೇ ಪ್ರಪಂಚದಾದ್ಯಂತ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಶೇಕಡ 0.25 ರಷ್ಟು ಬಡ್ಡಿ ದರ ಕಡಿತ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಫೆಡರಲ್ ರಿಸರ್ವ್ ಶೇಕಡ 0.50 ರಷ್ಟು ಕಡಿತ ಮಾಡಿದ್ದು, ಮುಂದಿನ ದಿನಗಳಲ್ಲಿ ಇದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಮತ್ತೊಮ್ಮೆ ಶೇಕಡ 0.50 ಬಡ್ಡಿ ದರ ಕಡಿತಗೊಳಿಸುವ ಸೂಚನೆಯನ್ನು ಫೆಡರಲ್ ರಿಸರ್ವ್ ನೀಡಿದೆ.
2025 ರಲ್ಲಿ ಒಟ್ಟು ಶೇಕಡ 1ರವರೆಗಿನ ಕಡಿತ ಮತ್ತು 2026ರಲ್ಲಿ ಶೇಕಡ 0.50 ಕಡಿತ ಅಂದಾಜಿಸಲಾಗಿದೆ. ಆರ್.ಬಿ.ಐ. ಮೇಲೆಯೂ ಅಮೆರಿಕ ಫೆಡರಲ್ ರಿಸರ್ವ್ ತೀರ್ಮಾನ ಪ್ರಭಾವ ಬೀರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಚಿಲ್ಲರೆ ಹಣದುಬ್ಬರ ಆರ್‌ಬಿಐನ ಶೇಕಡ 4ರ ಗುರಿಗಿಂತಲೂ ಕೆಳಗಿಳಿದಿದ್ದು, ಬಡ್ಡಿ ದರ ಕಡಿತದ ನಿರೀಕ್ಷೆ ಹೆಚ್ಚಿಸಿದೆ.
ಪ್ರಸ್ತುತ ರೆಪೊ ದರ 6.50 ರಷ್ಟಿದ್ದು, ಆರ್‌ಬಿಐ ಸಹ ಶೇ. 0.25ರಿಂದ ಶೇ. 0.50 ಮಟ್ಟದಲ್ಲಿ ರಪೊ ದರ ಕಡಿತ ಮಾಡುವ ನಿರೀಕ್ಷೆ ಇದೆ. ಇದರಿಂದಾಗಿ ಗೃಹ ಮತ್ತು ವಾಹನ ಸಾಲಗಳ ಬಡ್ಡಿ ಕಡಿಮೆಯಾಗಿ ಇಎಂಐ ಹೊರೆ ತಗ್ಗಲಿದೆ. ಡಿಸೆಂಬರ್ ಇಲ್ಲವೇ ಪ್ರಸ್ತುತ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎನ್ನಲಾಗಿದೆ.