ತುಳಸಿ ವಿವಾಹದ ಮಹತ್ವ, ಆಚರಣೆ ಹಾಗೂ ಪ್ರಯೋಜನ
ತುಳಸಿ ವಿವಾಹ ಹಿಂದೂ ಧರ್ಮದಲ್ಲಿ ಆಚರಿಸುವ ಒಂದು ವಿಶೇಷ ಸಂಪ್ರದಾಯ. ಈ ಸಂದರ್ಭದಲ್ಲಿ, ಪವಿತ್ರ ತುಳಸಿ ಗಿಡವನ್ನು ಸಾಲಿಗ್ರಾಮ ಶಿಲೆ ಅಥವಾ ಕೃಷ್ಣನ ಮೂರ್ತಿಯೊಂದಿಗೆ ವಿವಾಹ ಮಾಡಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ.
ವಿವಾಹ ಎಂಬುದು ಹಿಂದಿ ಪದವಾಗಿದ್ದು, ಮದುವೆ ಎಂದರ್ಥ ಹೊಂದಿದೆ. ಇದು ಕೃಷ್ಣನೊಂದಿಗೆ ತುಳಸಿಯ ವಿವಾಹ ಸಮಾರಂಭವಾಗಿದೆ. ಇದು ಹಿಂದೂಗಳಿಗೆ ಮದುವೆಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಮತ್ತು ತುಳಸಿ ವಿವಾಹವನ್ನು ಹಿಂದೂ ವಿವಾಹದ ರೀತಿಯಲ್ಲಿಯೇ ಆಚರಿಸಲಾಗುತ್ತದೆ, ಅದೇ ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತದೆ ಅಂದರೆ ವಧುವಿಗೆ ಸಿಂಧೂರ, ಬಳೆಗಳು ಮತ್ತು ಸೀರೆಗಳೊಂದಿಗೆ ಆಚರಿಸಲಾಗುತ್ತದೆ.
ತುಳಸಿ ಒಂದು ಸಸ್ಯ. ತುಳಸಿ ವಿವಾಹ ಪೂಜೆಯ ಭಾಗವಾಗುವುದರಿಂದ ಸಂತೋಷದ ವೈವಾಹಿಕ ಜೀವನಕ್ಕಾಗಿ ಸಮೃದ್ಧಿ, ಸಂತೋಷ ಮತ್ತು ಆಶೀರ್ವಾದಗಳನ್ನು ತರುತ್ತದೆ ಎಂಬ ವಾಡಿಕೆಯಾಗಿದೆ. ತುಳಸಿಯು ಲಕ್ಷ್ಮಿ ದೇವಿಯನ್ನು ಸಾಕಾರಗೊಳಿಸುತ್ತದೆ ಎಂದೂ ನಂಬಲಾಗಿದೆ.
ಪಂಚಾಂಗದ ಪ್ರಕಾರ ಇದು ಮದುವೆಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಅಲ್ಲದೆ ಭಗವಾನ್ ವಿಷ್ಣುವು ನಿದ್ರಿಸುತ್ತಿದ್ದಾನೆ ಎಂದು ನಂಬಲಾದ ಚಾತುರ್ಮಾಸ ಅಂದರೆ ನಾಲ್ಕು ತಿಂಗಳ ಅವಧಿಯ ಅಂತ್ಯವನ್ನು ಸೂಚಿಸುತ್ತದೆ.
ಪೌರಾಣಿಕ ಹಿನ್ನೆಲೆ :–
ತುಳಸೀಪೂಜೆ ಮಾಡಲು ಒಂದು ಕಾರಣ ಇದೆ. ಜಲಂಧರ ಒಬ್ಬ ರಾಕ್ಷಸ ಆತನ ಪತ್ನಿ ವೃಂದ ಪತಿವೃತೆ ವಿಷ್ಣುವಿನ ಪರಮ ಭಕ್ತೆ. ಅವಳ ವಿಷ್ಣು ಭಕ್ತಿ ಜಲಂಧರನನ್ನು ಯುದ್ಧದಲ್ಲಿ ರಕ್ಷಿಸುತ್ತಿತು. ಒಮ್ಮೆ ದೇವತೆಗಳೊಂದಿಗೆ ಯುದ್ಧ ನಡೆದಾಗ ದೇವತೆಗಳು ಸೋಲುವರು ಎಂದು ತಿಳಿದು ವಿಷ್ಣುವಿನ ಬಳಿ ಬಂದು ಸಹಾಯ ಕೇಳುತ್ತಾರೆ. ಅವರಿಗೆ ಸಹಾಯ ಮಾಡಲು ಒಪ್ಪಿದ ವಿಷ್ಣು ಜಲಂಧರನ ರೂಪದಲ್ಲಿ ವೃಂದಳ ಬಳಿ ಬರುತ್ತಾನೆ. ಈ ಸಂದರ್ಭದಲ್ಲಿ ವೃಂದ ಜಲಂಧರನಿಗೆ ನೀಡಿದ ಜಯದ ಸಂಕಲ್ಪವನ್ನು ಅಲ್ಲೇ ಬಿಟ್ಟು ಜಲಂಧರನ ಕಾಲು ಮುಟ್ಟಲು ಬಂದಾಗ ಅದು ಜಲಂಧರನಲ್ಲ ವಿಷ್ಣುವೆಂದು ತಿಳಿದು ಸಾಲಿಗ್ರಾಮವಾಗು ಎಂದು ಶಾಪ ನೀಡುತ್ತಾಳೆ. ನಂತರ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಲು ವಿಷ್ಣು ಆಕೆಗೆ ತುಳಸಿಯಾಗಲು ವರನೀಡುತ್ತಾನೆ. ಹಾಗೂ ಅದೇ ಸಾಲಿಗ್ರಾಮದೊಂದಿಗೆ ವಿವಾಹವಾಗುವುದಾಗಿ ವರನೀಡುತ್ತಾರೆ.
ಇನ್ನೊಂದು ಕಥೆಯ ಪ್ರಕಾರ, ವಿಷ್ಣುವಿನ ಕಣ್ಣಿನಿಂದ ಹೊರಟ ಆನಂದ ಬಾಷ್ಪದಿಂದ ತುಳಸಿ ಗಿಡವು ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಮತ್ತೊಂದು ಪುರಾಣದ ಪ್ರಕಾರ, ತುಳಸಿ ಒಮ್ಮೆ ಶಿವನನ್ನು ಅವಮಾನಿಸಿದಳು. ಕೋಪಗೊಂಡ ಶಿವನು ತುಳಸಿಯನ್ನು ಗಿಡವಾಗಿ ಮಾರ್ಪಡಿಸಿದನು.
ಒಟ್ಟಿನಲ್ಲಿ ವಿಷ್ಣು ವೃಂದಾಳಿಗೆ ಪ್ರತಿ ವರ್ಷದ ಕೃಷ್ಣ ಏಕಾದಶಿ ದಿನ ಮದುವೆ ಆಗುವುದಾಗಿ ಮಾತು ಕೊಟ್ಟಿರುತ್ತಾರೆ. ಹಾಗಾಗಿ ಪ್ರತಿವರ್ಷ ತುಳಸಿ ಹಬ್ಬದ ದಿವಸ ವಿಷ್ಣು ಸಾಲಿಗ್ರಾಮವನ್ನಿಟ್ಟು ಪೂಜೆ ಮಾಡುತ್ತಾರೆ. ಹಾಗಾಗಿ ತುಳಸಿಗೆ ದೈವತ್ವ ಸಾಮನ್ಯವಾಗಿ ಮನೆಯಲ್ಲಿ ಬೆಳೆಸುವ ಹಸಿರು ತುಳಸಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಐಶ್ವರ್ಯ ಮತ್ತು ಸಂತೋಷ ದೊರೆಯುತ್ತದೆ ಎಂದು ಹೇಳುತ್ತಾರೆ.
ಆಚರಣೆ ಹಿನ್ನೆಲೆ :–
ದೀಪಾವಳಿಯಲ್ಲಿ ಪ್ರಾರಂಭವಾದ ಪೂಜೆ ಹನ್ನೆರೆಡು ದಿನಗಳ ಕಾಲ ನಡೆಯುತ್ತದೆ. ತುಳಸಿಕಟ್ಟೆಗೆ ಬಣ್ಣಗಳನ್ನು ಹಚ್ಚಿ ತಳಿರು ತೋರಣಗಳಿಂದ ಸುಂದರಗೊಳಿಸಿ ಕಟ್ಟೆಯ ಸುತ್ತ ದೀಪಗಳನ್ನಿಟ್ಟು ನೆಲ್ಲಿಯ ಗಿಡಗಳನ್ನು ನೆಟ್ಟು ಹೂಗಳಿಂದ ಅಲಂಕಾರ ಮಾಡಿ ಪೂಜೆಗೆ ಸಿದ್ಧಮಾಡಲಾಗುತ್ತದೆ. ಆ ದಿನ ಭಜನೆಗಳ ಮೂಲಕ ತುಳಸಿಗೆ ಸುತ್ತುಹಾಕುತ್ತಾರೆ. ಗೋವಿಂದ ಗೋವಿಂದ ರಾಮ ಗೋವಿಂದ ನಾರಾಯಣ , ಗೋವಿಂದ ಗೋಪಾಲ ಕೃಷ್ಣ ಗೋವಿಂದ ನಾರಾಯಣ ಎಂದು ಹೇಳುತ್ತಾ ತಾಳ ಹಾಕುತ್ತ ತುಳಸಿಗೆ ಸುತ್ತು ಬಂದು ನಮಸ್ಕಾರ ಮಾಡುತ್ತಾರೆ. ತುಳಸಿಗೆ ನೈವೇದ್ಯವಾಗಿ ಅವಲಕ್ಕಿ, ಬೆಲ್ಲ ಇಡಲಾಗುವುದು. ಇದು ಬಹಳ ವಿಶೇಷವೆಂದು ಹೇಳುತ್ತಾರೆ.
ವಿವಿದೆಡೆ ವಿವಿದ ಆಚರಣೆ :–
ತುಳಸಿ ಪೂಜೆಯು ವಿಜೃಂಭಣೆಯಿಂದ ಮನೆಗಳಲ್ಲಿ , ದೇವಾಲಯಗಳಲ್ಲಿ ಮಾಡುತ್ತಾರೆ. ಈ ಪೂಜೆಗೆ ಹತ್ತಿಯ ಮಾಲೆ ಬಹಳ ವಿಶೇಷ. ಪೂಜೆಯ ವಿಧಿ ವಿಧಾನಗಳು ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ಇವೆ. ಕೆಲವರು ಮಂಟಪದ ರೀತಿ ತುಳಸಿ ಕಟ್ಟೆ ಸುತ್ತ ಕಟ್ಟಿ ಅಲಂಕಾರ ಮಾಡುತ್ತಾರೆ. ಕೊನೆಯ ದಿನವಾದ ಉತ್ಥಾನ ದ್ವಾದಶಿಯಂದು ವಿಜೃಂಭಣೆಯಿಂದ ಈ ಪೂಜೆ ನಡೆಯುತ್ತದೆ.
ದಕ್ಷಿಣ ಭಾರತದಲ್ಲಿ ಇದು ಬಹಳ ವಿಶೇಷ. ತುಳಸಿ ಪೂಜೆ ಮಾಡುವಾಗ ಉತ್ತರ ದಿಕ್ಕು ಅಥವಾ ಈಶಾನ್ಯದಲ್ಲಿ ಇಟ್ಟು ಪೂಜೆಮಾಡಬೇಕು. ಇದು ಬಹಳ ಒಳ್ಳೆಯದು ಅಲ್ಲದೆ ಒಣಗಿದ ತುಳಸಿಗಿಡವನ್ನು ಎಂದೂ ಇಡಬಾರದು. ತುಳಸಿಗಿಡದ ಸುತ್ತ ಮುಳ್ಳಿನಂತ ಗಿಡಗಳು ಬೆಳೆಯಬಾರದು. ಇದು ಮನೆಗೆ ಒಳ್ಳೆಯದಲ್ಲ.
ಕೆಲವು ಕಡೆ ಏಕಾದಶಿಯಿಂದ ತ್ರಯೋದಶಿವರೆಗೆ ತುಳಸಿಪೂಜೆಯನ್ನು ವಿಭಿನ್ನ ರೀತಿ ಮಾಡುತ್ತಾರೆ. ಮೊದಲ ದಿನ ರಾಮಾಯಣ ಓದುತ್ತಾರೆ. ಎರಡನೇ ದಿನ ಶೋಭಾಯಾತ್ರ , ಮೂರನೇದಿನ ತಿಲಕೋತ್ಸವ ಮತ್ತು ವಿಷ್ಣು ಮತ್ತು ತುಳಸಿಯ ವಿವಾಹ ಮಹೋತ್ಸವ ನಡೆಯುತ್ತದೆ.
ಧಾರ್ಮಿಕ ಹಿನ್ನೆಲೆ :–
ತುಳಸಿ ವಿವಾಹವು ಹಿಂದೂ ಧರ್ಮದಲ್ಲಿ ಪವಿತ್ರವಾದ ಸಂಸ್ಕಾರ. ಇದು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ತುಳಸಿಯನ್ನು ವಿಷ್ಣುವಿನ ಅವತಾರಗಳಾದ ಕೃಷ್ಣ ಮತ್ತು ರಾಮನಿಗೆ ಪ್ರಿಯವಾದದ್ದು ಎಂದು ನಂಬಲಾಗಿದೆ. ಹೀಗಾಗಿ, ತುಳಸಿ ವಿವಾಹವನ್ನು ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯಾಗಿದೆ.
ಪರಿಸರದ ಹಿನ್ನೆಲೆ :–
ತುಳಸಿ ಗಿಡವು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಪರಿಸರಕ್ಕೆ ಉಪಯುಕ್ತವಾಗಿದೆ. ತುಳಸಿ ವಿವಾಹದ ಮೂಲಕ ತುಳಸಿ ಗಿಡದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಸಂಪ್ರದಾಯದ ಒಂದು ಉದ್ದೇಶ.
ಸಾಮಾಜಿಕ ಹಿನ್ನೆಲೆ :–
ತುಳಸಿ ವಿವಾಹವು ಕುಟುಂಬ ಸಮೇತರಾಗಿ ಒಟ್ಟುಗೂಡಿ ಆಚರಿಸುವ ಒಂದು ಹಬ್ಬ. ಇದು ಕುಟುಂಬದ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ.
ಆರೋಗ್ಯದ ಹಿನ್ನೆಲೆ ಹಾಗೂ ಪ್ರಯೋಜನ :–
ತುಳಸಿ ಗಿಡವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಆಯುರ್ವೇದದಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದು. ಇದೊಂದು ಪರಿಸರ ಸ್ನೇಹಿ. ಇದು ಕುಟುಂಬ ಸಂಬಂಧಗಳನ್ನು ಬಲಪಡಿಸಿ, ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ ಕೊನೆಯಲ್ಲಿ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ.
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.