ಲಕ್ಷ್ಮಣ ಸರಯೂ ನದಿಯಲ್ಲಿ ಲೀನನಾದ ಯಾಕೆ ಗೊತ್ತಾ.?
ಲಕ್ಷ್ಮಣನಿಗೆ ಮುಖ ತೋರದಿರಲು ರಾಮಾಜ್ಞೆ ಹೊರಡಿಸಿದ್ಯಾಕೆ..?

ಸೌಮಿತ್ರಿ..
ಲಕ್ಷ್ಮಣನಿಗೆ ಮುಖ ತೋರದಿರಲು ರಾಮಾಜ್ಞೆ ಹೊರಡಿಸಿದ್ಯಾಕೆ..?
ಸರಯೂ ನದಿಯ ತಟದಲ್ಲಿ ನಿಂತ ಲಕ್ಷ್ಮಣ ನಡೆದು ಹೋದ ಘಟನೆಯಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ! ಲಕ್ಷ್ಮಣನ ಜೀವನದಲ್ಲಿ ಇಂದಿನ ಬೆಳಗು ಎಂದಿನ ಬೆಳಗಾಗಿರಲಿಲ್ಲ!
“ಲಕ್ಷ್ಮಣ ಇನ್ನು ಆಜೀವ ಪರ್ಯಂತ ನಿನ್ನ ಮುಖವನ್ನು ಈ ರಾಮನಿಗೆ ತೋರಿಸಬೇಡ!” ಇದು ರಾಜಾಜ್ಞೆ ಅಲ್ಲಾ ರಾಮಾಜ್ಞೆ! ಎನ್ನುವ ರಾಮನ ಮಾತುಗಳು ಲಕ್ಷ್ಮಣನಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು!
ಅಯ್ಯೋ!! ಇಂತಹದೊಂದು ದಿನ ಬರಬಹುದೆನ್ನುವ ಕಲ್ಪನೆಯವೂ ಇರಲಿಲ್ಲ ಲಕ್ಷ್ಮಣನಿಗೆ! ರಾಮನನ್ನು ನೋಡದ ದಿನ ಎಂದರೆ ಅದು ಲಕ್ಷ್ಮಣನ ಕೊನೆಯ ದಿನ ಈ ಭೂಮಿಯ ಮೇಲೆ!
ಘಟನೆಗಳೆಲ್ಲ ಕಣ್ಣೆದುರಿಗೆ ಬರುತೊಡಗಿತು!
ಬೆಳಗ್ಗೆ ಆಸ್ಥಾನದಲ್ಲಿ ರಾಮ ಕುಳಿತಿದ್ದಾಗ ಬಂದ ಒಬ್ಬ ಮಹಾತೇಜಸ್ವಿ ರಾಮನಲ್ಲಿ ವಿನಂತಿಸಿದ್ದು ಏಕಾಂತದಲ್ಲಿ ಮಾತನಾಡಬೇಕು! ಇದು ದೇವಕಾರ್ಯ ಎಂದು! ವಿಷಯದ ಗಂಭೀರತೆಯನ್ನು ಅರಿತ ಅಣ್ಣ ರಾಮಚಂದ್ರ ಏಕಾಂತ ಭಂಗವಾಗದಂತೆ ಕಾಯುವ ಹೊಣೆಯನ್ನು ನನಗೆ ನೀಡಿದ! ತಮ್ಮಾ ಲಕ್ಷ್ಮಣ! ಏಕಾಂತಭಂಗ ಮಾಡಿದವರಿಗೆ ತಲೆದಂಡವೇ ಶಿಕ್ಷೆ ಎಂದು ಮುಂಚಿತವಾಗಿಯೇ ಹೇಳಿದ್ದ!
ಏಕಾಂತ ಭಂಗವಾಗಬಾರದೆಂಬ ಕಾರಣಕ್ಕಾಗಿ ಕಾಯುತ್ತಾ ನಾನು ಬಾಗಿಲಲ್ಲೇ ನಿಂತೆ! ಸ್ವಲ್ಪವೇ ಸಮಯ ಕಳೆದಿರಬಹುದು ಬಂದರಲ್ಲ.. ಅದೆಲ್ಲಿಂದ ಬಂದರೋ.. ದೂರ್ವಾಸರು! ಬಂದವರೇ ತಡಮಾಡಲಿಲ್ಲ! ರಾಮನನ್ನು ಈಗಲೇ ನೋಡಬೇಕು ಎಂದರು! ಬಂದ ದೂರ್ವಾಸರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈಮುಗಿದು ನಿಂತೆ! ದೂರ್ವಾಸರು ಹೇಳಿದ್ದು ಒಂದೇ ಮಾತು “ಎಲ್ಲಿಹನು ಪುಂಡರಿಕಾಕ್ಷ ದಾರಿ ಬಿಡು ನಾನು ರಾಮನನ್ನು ನೋಡಬೇಕು!” ಕೈಮುಗಿದು ಹೇಳಿದೆ, “ಪ್ರಭು ರಾಮಚಂದ್ರ ಏಕಾಂತದಲ್ಲಿ ಘನ ರಹಸ್ಯದ ಮಾತುಕತೆಯಲ್ಲಿ ತೊಡಗಿದ್ದಾನೆ! ಸ್ವಲ್ಪ ತಡೆಯಿರಿ! ಕ್ಷಣ ಕಳೆದರೆ ಅಣ್ಣನೇ ಬರುವ” ಎಂದಿದ್ದಕ್ಕೆ ಕೋಪಗೊಂಡ ದೂರ್ವಾಸರು “ರಾಮನನ್ನು ನೋಡುವುದೇ ನನ್ನ ಸಂಕಲ್ಪ! ನನ್ನ ಸಂಕಲ್ಪವನ್ನು ತಡೆಯುವ ಶಕ್ತಿಯುಂಟೇ ನಿನಗೆ?” ಎಂದರು. ನೀನು ನನ್ನನ್ನು ತಡೆಯುವ ಪ್ರಯತ್ನ ಮಾಡಿದರೆ ಇಡೀ ನಿನ್ನ ಕುಲವೇ ನಾಶವಾಗುವ ಶಾಪ ಕೊಡುತ್ತೇನೆ! ಎಂದರು. ಅಯ್ಯೋ ಮುಂದೇನು ಮಾಡಲಿ ಎನ್ನುತ್ತಾ ಅವರನ್ನು ಸ್ವಲ್ಪ ಸಮಾಧಾನಪಡಿಸುವ ಪ್ರಯತ್ನದಲ್ಲಿ ತೊಡಗಿದೆ!
ಮಹಾ ಮಹಿಮಾ! ನನ್ನಲ್ಲಿ ಹೇಳಿ ಏನು ಮಾತು? ಎಂದಾಗ ದೂರ್ವಸರು ನನ್ನನ್ನು ಹಂಗಿಸಿದಿರಲ್ಲ! ಲಕ್ಷ್ಮಣ ನಾನು ನೋಡಲು ಬಂದಿದ್ದು ರಾಮನನ್ನು ನಿನ್ನನಲ್ಲ! ರಾಮನಿಗೆ ನೀನು ಸಮವೇ? ನೀನು ರಾಮನೇ? ಉರಿಗಣ್ಣಿನಿಂದ ಪ್ರಶ್ನಿಸಿದರು. ರಾಮನ ಮಹಾವ್ಯಕ್ತಿತ್ವವೇನು? ನೀನೇನು? ಎಂದರಲ್ಲ! ನಾನು ತಲೆತಗ್ಗಿಸಿ ನಿಂತೆ ಮುಂದುವರಿದು ಹೇಳಿದರು ” ಹಿಂದೆ ರಾಮ ಕಾಡಿಗೆ ಹೋದ ಸಂದರ್ಭ ನೆನಪಿಸಿದರು! ಕೈಕೆಯಿ ತನ್ನ ಎರಡು ವರಗಳನ್ನು ಮುಂದಿಟ್ಟು ದಶರಥನಲ್ಲಿ “ಭರತನಿಗೆ ಪಟ್ಟ, ರಾಮನಿಗೆ ವನವಾಸ ಇದೇ ನನ್ನ ಅಪೇಕ್ಷೆ ” ಎಂದಾಗ ಮುಂದೆ ದಾರಿ ಕಾಣದೆ ದಶರಥರಾಜ ಕುಸಿದು ಕುಳಿತಿದ್ದನಂತೆ! ನಾಳೆ ಎಂದರೆ ಮಹಾರಾಜನಾಗಿ ಅಭಿಷಿಕ್ತನಾಗಬೇಕಾಗಿದ್ದ ಮಹಾ ಮಹಿಮಾ ರಾಮಚಂದ್ರ ಪರಿಸ್ಥಿತಿಯನ್ನು ಅರಿತು ಕೈಕೇಯಿಯಲ್ಲಿ ಹೇಳಿದನಂತೆ “ಲೆಸನಾಡಿದೆಯವ್ವ! ಇಷ್ಟು ಸ್ವಲ್ಪ ಕಾರ್ಯಕ್ಕೆ ಏಕಿಷ್ಟು ಚಿಂತೆ! ನಾನೆಷ್ಟು ಕಾಲ ಇರಬೇಕು ಕಾಡಿನಲ್ಲಿ ಎಂದು?” ನಾನು ನೋಡಲು ಬಂದಿರುವುದು ಅಂತಹ ತ್ಯಾಗ ಮೂರ್ತಿ ಶ್ರೀರಾಮಚಂದ್ರನನ್ನು! ಪಿತ್ರವಾಕ್ಯ ಪರಿಪಾಲನೆಗಾಗಿ ಅಯೋಧ್ಯೆಯ ಭವ್ಯಸಿಂಹಾಸನವನ್ನು ಕಿರುಗಣ್ಣಿನಿಂದಲೂ ತಿರುಗಿ ನೋಡದೆ ಸಕಲಸಂಪದವು ತಮ್ಮ ಭರತನಿಗಿರಲಿ! ಎಂದು ಜಟಾಧಾರಿಯಾಗಿ ಅರಣ್ಯದತ್ತ ನಡೆದ ರಾಮನನ್ನು! ಮಂಗಳಮೂರ್ತಿಯನ್ನೇ ನೋಡಬೇಕು ಎಂದರು! ನಾನು ಕಾಣಲು ಬಂದಿದ್ದು ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು, ನಿನ್ನನ್ನಲ್ಲ! ಬಿಡು ದಾರಿ ಇಲ್ಲದಿದ್ದರೆ ನಿನ್ನ ಕುಲಕ್ಕೆ ಕಾದಿದೆ ಶಾಪ!
ಬೇರೆ ದಾರಿ ಕಾಣದೆ ರಾಮನ ಏಕಾಂತ ಭಂಗ ಮಾಡಬೇಕಾಯಿತು!
ರಾಜಾಜ್ಞೆಯನ್ನು ತಪ್ಪಿದರೆ ಶಿಕ್ಷೆ ಖಂಡಿತ ಎನ್ನುವ ಅರಿವಿದ್ದರೂ ಕುಲಕ್ಕೆ ಶಾಪ ತಟ್ಟುವ ಭೀತಿಯಿಂದ ರಾಮನ ಏಕಾಂತ ಭಂಗ ಮಾಡಿದೆ! ಸಿಂಹಾಸನದಲ್ಲಿ ಕುಳಿತ ರಾಜಾರಾಮಚಂದ್ರ ಹೇಳಿದ್ದು “ನೀತಿ ತಪ್ಪಿ ನಡೆದೆಯಲ್ಲಾ ತಮ್ಮಾ” ರಾಜಾಜ್ಞೆಯನ್ನು ಮೀರಿ ನಡೆದದ್ದಕ್ಕೆ ನಿನಗಿದೋ ಶಿಕ್ಷೆ ನಿನ್ನ ಮುಖವನ್ನು ನನಗಿನ್ನು ತೋರಿಸಬೇಡ! ಸಿಂಹಾಸನದಲ್ಲಿ ಕುಳಿತು ಶಿಕ್ಷಿಸಿದ ಅಣ್ಣ, ಪೀಠವಿಳಿದು ಬಂದವನೇ ತಬ್ಬಿಕೊಂಡು,ಕಣ್ಣೀರುಸುರಿಸಿ, ತಲೆ ಸವರಿ ಕೊನೆಯ ಬಾರಿಯೆನ್ನುವಂತೆ ತಬ್ಬಿಕೊಂಡ! ರಾಮನ ಕಣ್ಣಿನಲ್ಲಿ ಕಂಡಿದ್ದು ದುಃಖದ ಸಾಗರ! ಸಾಗರಕ್ಕೆ ಸೇತುವೆ ಕಟ್ಟಿದವನು ಇಂದು ದುಃಖದ ಸಾಗರದಲ್ಲಿ! ಅದೆಷ್ಟು ನೊಂದುಕೊಂಡನೋ ಅಣ್ಣ ನನ್ನನ್ನು ಶಿಕ್ಷಿಸುವಾಗ! ರಾಮನ ಜೀವನವೇ ತ್ಯಾಗದ ಪ್ರತೀಕ!
ಅಂದು, ತುಂಬಿದ ಬಸರಿ ಪ್ರಿಯ ಮಡದಿ ಸೀತೆಯನ್ನು ಕಾಡಿಗೆ ಕಳಿಸುವಾಗಲು ರಾಮನ ಮನಸ್ಥಿತಿ ಮತ್ತು ಪರಿಸ್ಥಿತಿ ಹೀಗೇ ಇದ್ದಿರಬಹುದು! ರಾಮನ ಜೀವನದ ತ್ಯಾಗಗಳೇ ರಾಮ ರಾಜ್ಯದ ಬುನಾದಿ!
ಸಮುದ್ರಕ್ಕೆ ಸೇತುವೆಯನ್ನೇ ಕಟ್ಟಿ ಲಂಕಾಧಿಪತಿ ರಾವಣನನ್ನು ಕೊಂದು ಸೀತಾಮಾತೆಯನ್ನು ಬಂಧ ಮುಕ್ತಗೊಳಿಸಿ ಅಯೋಧ್ಯೆಗೆ ಬಂದು ರಾಜಾ ರಾಮನಾದ ಮೇಲೂ ಕಷ್ಟ ತಪ್ಪಲಿಲ್ಲ ಅಣ್ಣನಿಗೆ!
“ಅಣ್ಣ!ಅದು ಯಾರೋ ಅಪ್ರಯೋಜಕರು ಸೀತಾಮಾತೆಯ ಪಾವಿತ್ರ್ಯತೆಯ ಬಗ್ಗೆ ಮಾತನಾಡಿದರು ಎನ್ನುವ ಕಾರಣಕ್ಕಾಗಿ ಅಗ್ನಿಪರೀಕ್ಷೆಯಲ್ಲಿ ಪರಮ ಪವಿತ್ರೆ ಎಂದು ಸಾಬೀತಾದ ಮಹಾಸಾದ್ವಿ ಸೀತಾಮಾತೆಯನ್ನು ಕಾಡಿಗೆ ಕಳಿಸುವೆಯಾ?” ಎಂದು ಕೇಳಿದ್ದಕ್ಕೆ ಅಲ್ಲಾ ಒಂದು ಮಟ್ಟಕ್ಕೆ ಅಣ್ಣನನ್ನು ವಿರೋಧಿಸಿದ್ದಕ್ಕೆ, ರಾಮನೆಂದ ಮಾತು..
“ಕಳವಳಗೊಳುವುದು ಬೇಡ ನೀನು ಇಳೆಯಾತ್ಮಜೆಗೆ ಕರಿಕಲೆ ಎಂಬುದಿಲ್ಲ!
ತಿಳಿದಿರುವೆನಾದರೂ ದಾರಿ ಬೇರಿಲ್ಲ!! ಕುಲಕೀರ್ತಿಗಿಂತಧಿಕ ಈ ಸತಿಯಲ್ಲ!
ಅಯ್ಯೋ! ಎಷ್ಟು ನೊಂದಿರಬಹುದು ಆ ಮಹಾ ಸಾಧ್ವಿಯನ್ನು ಕಾಡಿಗೆ ಕಳಿಸುವಾಗ ರಾಮನ ಮನಸ್ಸು!! ತನ್ನ ಕುಡಿಗಳನ್ನು ಮಡಿಲಲ್ಲಿ ಹೊತ್ತ ಸೀತೆಯಂತ ಹೆಂಡತಿಯನ್ನು ಬಿಟ್ಟುಬಿಡುವಾಗ ಹೇಗಿತ್ತು ಪುರುಷೋತ್ತಮನ ಮನಸ್ಥಿತಿ… ಅದಕ್ಕೆ ಅದನ್ನು ಸೀತಾ ಪರಿತ್ಯಾಗ ಎಂದರು ಬಲ್ಲವರು..! ಅದು ನ್ಯಾಯ ಧರ್ಮ ಸತ್ಯದ ಪ್ರತೀಕವಾದ ರಾಮ ರಾಜ್ಯದ ನಿರ್ಮಾಣಕ್ಕಾಗಿ ರಾಮ ಮಾಡಿದ ಅತಿ ದೊಡ್ಡ ತ್ಯಾಗ!!
ಹೀಗೆ ಹಳೆಯ ಘಟನೆಗಳ ನೆನಪಿನಲ್ಲಿ ಮುಳುಗಿ ಹೋಗಿದ್ದ ಲಕ್ಷ್ಮಣನಿಗೆ ಅನಿಸಿತು ರಾಮನ ಬದುಕಿನಲ್ಲಿ ಸ್ವಾರ್ಥವೆನ್ನುವುದೇ ಇಲ್ಲ! ಸ್ವಜನ ಪಕ್ಷಪಾತದ ಪ್ರಶ್ನೆಯೇ ಇಲ್ಲ! ಮನುಷ್ಯನಾಗಿ ಹುಟ್ಟಿದ ರಾಮ ದೇವರಾಗಿದ್ದು ಅವನ ಗುಣ ವ್ಯಕ್ತಿತ್ವದಿಂದ ಎಂದುಕೊಳ್ಳುತ್ತಾ… ಪುನಃ ರಾಮನನ್ನು ನೋಡಲಾರದ ಈ ಕಣ್ಣುಗಳು, ಈ ಬದುಕು ಈ ಭೂಮಿಯ ಮೇಲೆ ಅರ್ಥಹೀನ! ಎಂದೆನಿಸಿ ನಿಧಾನವಾಗಿ ಸರಾಯು ನದಿಯ ಪವಿತ್ರ ನೀರಿನಲ್ಲಿ ಲೀನವಾಗಿ ಹೋದ ಪರಮ ಪರಾಕ್ರಮಿ ಲಕ್ಷ್ಮಣ!
–ಸಂಗೀತಾ ವೈದ್ಯ . ಅಬುದಾಬಿ