ಮಾಧವ ಹರಿಬಿಟ್ಟ ಸತ್ಯಕ್ಕೆ ಕರ್ಣ ಗಲಿಬಿಲಿ
ಯುದ್ಧದ ಕಾರ್ಮೋಡ ಸಂದರ್ಭಃ ಕರ್ಣನನ್ನ ನಲುಗಿಸಿದ ಆ ಸತ್ಯ ಯಾವುದು.?

ಯುದ್ಧ ಸನ್ನದ್ಧ – ತೊಳಲಾಟದಲ್ಲೂ ಕರ್ಣ ಇಟ್ಟ ದಿಟ್ಟ ಹೆಜ್ಜೆ
ಅವನು ದಾನಶೂರ,ವೀರ ಕರ್ಣ! !
ಮನೆಗೆ ಬಂದು ಹಿತವಾದ ಆಸನದಲ್ಲಿ ಕುಳಿತು ತಂಪಾದ ಪಾನೀಯವನ್ನು ಕುಡಿಯುತ್ತಿದ್ದರು ಕರ್ಣನಿಗೆ ಮೈ ಬೆವರುತ್ತಿತ್ತು! ತಲೆ ಝಂಮ್ ಎನ್ನುತ್ತಿತ್ತು! ಬೆಳಗಿನಿಂದ ನೆಡೆದ ಘಟನೆಗಳು ಕರ್ಣನ ನೆಮ್ಮದಿಗೆ ಬೆಂಕಿಇಟ್ಟಿತ್ತು! ಎಲ್ಲವೂ ಒಂದೊಂದಾಗಿ ನೆನಪಾಗಿ ತಲೆ ಭಾರವೆನಿಸಿತು. .ಸಂಧಾನದ ಸಭೆಯಲ್ಲಿ ಕೃಷ್ಣ ನಾಡಿದ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು!!
ಸಾವಿರಾರು ಸಭಾಸದರು, ಕುರುಕುಲದ ಹಿರಿಯರು ನೆರೆದಿದ್ದ ಮಹಾಸಭೆಯಲ್ಲಿ ಎದ್ದುನಿಂತ ಕೃಷ್ಣ ನ ಮಾತಿನಲ್ಲಿದ್ದ ಧೃಡತೆ ಎದುರಿನವರ ಎದೆಯನ್ನು ಸೀಳುವಂತಿತ್ತು !
ಕುರುಕುಲದ ಶ್ವೇತ ಸಿಂಹಾಸನದಲ್ಲಿ ಕುಳಿತಿದ್ದ ಧೃತರಾಷ್ಟ್ರನನ್ನೇ ನೋಡುತ್ತಾ ಹೇಳಿದ ಕೃಷ್ಣ “ಸಭೆಯಲ್ಲಿ ನೆರೆದಿರುವ ಎಲ್ಲರೂ ಕೌರವನಾಡಿದ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಿರಲ್ಲವೇ, ಕೇಳಿಸಿಕೊಂಡಿದ್ದೀರಲ್ಲವೇ? ಸೂಜಿಯ ಮೊನೆಯ ಗಾತ್ರದ ಭೂಮಿಯನ್ನು ಸಹ ಸಾಮದಿಂದ,ಶಾಂತಿಯಿಂದ ನೀಡಲಾರೆ, ಪಾಂಡವರ ಭೂಮಿಯನ್ನು ಬಾಣದ ಮೊನೆಯಲ್ಲಿಟ್ಟಿದ್ದೇನೆ! ಯುದ್ಧವಲ್ಲದೇ ಇನ್ಯಾವರೀತಿಯಲ್ಲೂ ಭೂಮಿಯ ಭಾಗವನ್ನು ಪಾಂಡವರಿಗೆ ನಿಡಲಾರೆ!” ಎಂದ ಅವನ ಮಾತಿನಿಂದ ಸ್ಪಷ್ಟವಾಗಿರುವುದು ‘ಯುದ್ಧದ ಹಂಬಲ ಇರುವುದು ಕೌರವನಿಗೆ ಹೋರತು ಪಾಂಡವರಿಗಲ್ಲಾ! ಎನ್ನುವುದು’. ಬೀಷ್ಮ ಪಿತಾಮಹರು, ಶಾಪಾದಪಿ ಶರಾದಪಿ ದ್ರೋಣಾಚಾರ್ಯರು, ವಿದ್ಯಾ ಸರಸ್ವತಿ ಕೃಪಾಚಾರ್ಯರು, ಕಿವಿಗಳನ್ನು ತೆರದು ಕೇಳಿಸಿಕೊಳ್ಳಿ. “ಮರಣವನು ಬಯಸಿರ್ಪ ನೀ ಖಳನು! ಮಗುಳೆಮ್ಮ ದೂರದಿರಿ!” ಆಗುವ ಅನಾಹುತಕ್ಕೆ, ಜರುಗುವ ಮಹಾಯುದ್ದಕ್ಕೆ, ಜರುಗುವ ಮಹಾ ವಿನಾಶಕ್ಕೆ ಪಾಂಡವರಾಗಲಿ ಅಥವಾ ನಾನಾಗಲಿ ಖಂಡಿತಾ ಕಾರಣರಲ್ಲ!. ಇದಕ್ಕೆಲ್ಲಾ ಕಾರಣ ದುರ್ಯೋಧನನ ದುರಹಂಕಾರ. .! ಮುಂದೆ ಆಗಬಹುದಾದ ಮಹಾಯುದ್ಧದ ಪರಿಣಾಮ ಅದೆಷ್ಟು ಭಯಂಕರವಾಗಿದ್ದಿತೆಂದರೇ ಕುರುಕುಲದ ಈ ಸಮೃದ್ಧ ಭೂಮಿ ರಕ್ತದಿಂದ ತೋಯ್ದು ಹೋದಿತು! ಬಿದ್ದ ಹೆಣಗಳನ್ನು ಹೆಕ್ಕುವುದಕ್ಕೂ, ಲೆಕ್ಕ ಮಾಡುವುದಕ್ಕು ಜನಗಳು ಇಲ್ಲದೇ ಹೋದಾರು! ಇಡಿ ಕೌರವರ ಕುಲವೇ ನಾಶವಾಗಿ ಹೋದೀತು! ವೃದ್ಧದೊರೆ ಧೃತರಾಷ್ಟ್ರ ಈಗಲೂ ಬುದ್ದಿಗೆ ಕವಿದಿರುವ ಕತ್ತಲೆಯ ಕುರುಡನ್ನು ಶಾಂತಿಯ ಬೆಳಕಿನಿಂದ ಓಡಿಸದಿದ್ದರೇ ಮುಂದೆ ಗಾಂಧಾರಿಯು ತನ್ನ ನೂರು ಮಕ್ಕಳನ್ನು ಕಳೆದುಕೊಂಡು ಪಾಂಡವರನ್ನೆ ತನ್ನ ಸ್ವಂತ ಮಕ್ಕಳೆಂದು ಭಾವಿಸಬೇಕಾದ ದುಃಸ್ಥಿತಿ ಬರುವುದಂತೂ ಖಚಿತ! ಇನ್ನೂ ಕಾಲ ಮಿಂಚಿಲ್ಲ ಮಹಾಯುದ್ಧವನ್ನು ತಪ್ಪಿಸುವ ಬಗ್ಗೆ ಈ ಮಹಾಸಭೆಯ ಪ್ರಾಜ್ಞರು ಚಿಂತಿಸಿ! ಎಂದು ಎಚ್ಚರಿಕೆಯ ಮಾತನಾಡಿದ ಕೃಷ್ಣ ಕೌರವನು ನೀಡಿದ ಧುರವೀಳ್ಯವನ್ನು ಕೈಯಲ್ಲಿಹಿಡಿದು ತಿರುಗಿನೋಡದೆ ಸಭೆಯಿಂದ ಹೊರನೆಡೆದಿದ್ದ!
ಕರ್ಣನ ಮನಸ್ಸಿನ ಶಾಂತಿ ಇಂದು ಸಂಪೂರ್ಣವಾಗಿ ಕದಡಿ ಹೋಗಿತ್ತು! ಪುನಃ ಚಿಂತೆಯ ಚಿತೆಯಲ್ಲಿ ಬೆಯತೊಡಗಿತ್ತು ಕರ್ಣನ ಮನಸ್ಸು! ಅದೆಷ್ಟು ವಿಚಿತ್ರ ಘಟನೆಗಳು ನೆಡೆದು ಹೋದವು ಇಂದು! ಇಂದಿನ ಬೆಳಗೂ ಎಂದಿನ ಬೆಳಗಲ್ಲ! ಛೇ! ನಾನು ಸಂಧಾನದ ಸಭೆಯ ನಂತರ ಗಂಗೆಯ ತಟಕ್ಕೆ ಹೋಗಲೇ ಬಾರದಿತ್ತು!! ಗಂಗೆಯ ತಟದಲ್ಲಿ ಕೃಷ್ಣನಾಡಿದ ಮಾತುಗಳನ್ನು ಪುನಃ ನೆನಪಿಸಿಕೊಳ್ಳುವುದಕ್ಕೂ ಹಿಂಜರಿಯುತ್ತಿತ್ತು ಕರ್ಣನ ಮನಸ್ಸು! ! ಗಂಗೆಯ ತಟದಲ್ಲಿ ನೆಡೆದ ಘಟನೆ ಕಣ್ಣೆದುರಿಗೆ ಬರತೊಡಗಿತ್ತು!
ಗಂಗೆಯ ತಟದಲ್ಲಿ ದೂರದಲ್ಲೊಂದು ಆಕೃತಿ ಕಂಡಂತಾಯಿತು ಕರ್ಣನಿಗೆ,ತನ್ನತ್ತಲೇ ಬರುತ್ತಿರುವಂತೆ ಭಾಸವಾಯಿತು! ಹತ್ತಿರ ಬರುತ್ತಿದ್ದಂತೆ ಕಂಡ ಕೀರಿಟದ ಮೇಲಿದ್ದ ನವಿಲುಗರಿ ಸಾರಿ ಹೇಳುತ್ತಿತ್ತು ಬರುತ್ತಿರುವವನು ಮಾಧವನೆಂದು!
ಮಾಧವನನ್ನು ನೋಡಿ ಕೈ ಮುಗಿದರೆ ಶುಭವಾಗಲಿ ‘ದಿನಕರ ತನಯ ‘ ಎಂದ! ಇದೇನು ಹೊಸ ವರಸೆ ’ಸೂತ ಪುತ್ರ’ನಾದ ನನ್ನನ್ನು ಸೂರ್ಯನ ಮಗನೆಂದೇಕೆ ಸಂಭೋದಿಸುತ್ತಿರುವೆ ಎಂದು ಕೇಳಿದ್ದಕ್ಕೆ ಮುಂದುವರಿದು ಕೃಷ್ಣ ಅದೇನೋ ‘ರಹಸ್ಯ’ ಹೇಳುತ್ತೇನೆ ಎಂದ!ಮುಂದುವರಿದು ಹೇಳಿದ. .ಕುಂತಿಭೋಜನ ಆಸ್ಥಾನಕ್ಕೆ ದೂರ್ವಾಸರು ಬಂದರಂತೆ ಅವರನ್ನು ಪರಮ ಭಕ್ತಿಯಿಂದ ಐದು ವರುಷದ ಕುಂತಿ ಸತ್ಕರಿಸೀದಳಂತೆ! ಅದ್ಕಕೆ ಮೆಚ್ಚಿ ಶಾಪ ಕೊಡುವುದಕ್ಕೆ ಹೆಸರಾಗಿದ್ದ ದೂರ್ವಾಸರು ಕುಂತಿಗೆ ವರ ನೀಡಿದರಂತೆ! ನಾನು ಹುಬ್ಬೆರಿಸಿ ಕೇಳಿದೆ ಇದನ್ನೆಲ್ಲಾ ನನಗೇಕೆ ಹೇಳುತ್ತಿರುವೆ? ಮಹಾಯುದ್ಧವೊಂದು ಎದುರಿಗಿರಿವಾಗ ಈ ಹಳೆ ಕಥೆಯನ್ನೇಕೆ ಹೇಳುತ್ತಿರುವೆ ಮಾಧವ? ಅವನು ನನ್ನ ಮಾತು ಕೇಳಲೇ ಇಲ್ಲಾ ಎನ್ನುವಂತೆ ತನ್ನ ಮಾತನ್ನು ಮುಂದುವರಿಸಿದ. .ದುರ್ವಾಸರು ಕುಂತಿಗೆ ‘ಮಂತ್ರ ಪಂಚಕವನ್ನು’ ಉಪದೇಶಿಸಿದರಂತೆ! ಇದು ಗೊತ್ತಿರುವ ಕಥೆ ಮಾಧವ! ಸಮಯ ವ್ಯರ್ಥ! ! ಎಂದ ನನ್ನ ಮಾತು ಕೇಳಲೇ ಇಲ್ಲಾ ಮಾಧವನಿಗೆ!ಅವನು ಮುಂದುವರಿಸಿ ಹೇಳಿದ ಮಹಾಶಿವನಂಥ ದೂರ್ವಾಸರು,ಆ ಶಿವನೇ ತನ್ನ ತಲೆಯಮೇಲಿದ್ದ ಚಂದ್ರನನ್ನೇ ವರವಾಗಿ ಕೊಟ್ಟನೋ ಎನ್ನುವಂತೆ ಕೊಟ್ಟ ಐದು ಮಂತ್ರದಿಂದ ಆರು ಮಕ್ಕಳು ಜನಿಸಿದರು!! ಆರು ಮಕ್ಕಳೇ?! ಅನಾಯಾಚಿತವಾಗಿ ನನ್ನ ಬಾಯಿಂದ ಉದ್ಘಾರ ಹೊರಟಿತು! ಪಂಚ ಪಾಂಡವರಲ್ಲವೇ!!? ಈಗ ಮಾಧವನ ಮುಖ ಗಂಭೀರವಾಯಿತು!
ಸಹನೆಯಿಂದ ಕೇಳು ಕರ್ಣ ಎಂದ!
ಮಂತ್ರ ಪಂಚಕದ ವರ ಪಡೆದ ಐದು ವರುಷದ ಕುಂತಿಗೆ ವರದ ಮಹತ್ವ ಅಥವಾ ಅದರ ಗಂಭೀರತೆಯ ಅರಿವಿರಲಿಲ್ಲ!ಮುಳುಗುತ್ತಿರುವ ಸೂರ್ಯನನ್ನು ಕಂಡು ಆಕರ್ಷಿತಳಾದ ಕುಂತಿ ಸೂರ್ಯನನ್ನು ಸ್ಮರಿಸುತ್ತಾ ಮಂತ್ರೋಚ್ಚಾರ ಮಾಡಿಯೇ ಬಿಟ್ಟಳು! ಪ್ರತ್ಯಕ್ಷನಾದ ಸೂರ್ಯ ಪುತ್ರನನ್ನು ಅನುಗ್ರಹಿಸಿಯೇ ಬಿಟ್ಟ! ಮಗುವನ್ನು ಮಡಿಲಲ್ಲಿ ಇಟ್ಟುಕೊಂಡ ಕುಂತಿ ವಿಚಾಲಿತಳಾಗಿದ್ದಳು!
ಸಮಾಜದ ನಿಂದನೆಗೆ ಹೆದರಿ ಮುಂದೇನು ಮಾಡಬೇಕೆಂದು ತಿಳಿಯದ ಮುಗ್ಧ ಬಾಲಕಿ ಮಗುವನ್ನು ಬುಟ್ಟಿಯಲ್ಲಿಟ್ಟು ಜೊತೆಗೆ ಬಂಗಾರದ ಒಡವೆ, ವಸ್ತ್ರ ಗಳನ್ನು ಇಟ್ಟು ಹರಿಯುತ್ತಿರುವ ಗಂಗೆಯಲ್ಲಿ ತೆಲಿಬಿಟ್ಟಳು! ಹಾಂ! ಒಂದು ವಿಷಯ ಬಿಟ್ಟೇ ಆ ಮಗುವಿಗೆ ಹುಟ್ಟುವಾಗಲೇ ದೈವಿದತ್ತವಾದ ಕುಂಡಲ ಮತ್ತು ಕವಚವಿತ್ತು! ಆ ಮಗು ನೀನೇ! ನೀನೇ ಕುಂತಿ ಸುತ ಕರ್ಣ!
ಸಾಕು ಕೃಷ್ಣ ನಿಲ್ಲಿಸು ! ಎಂದ ಕರ್ಣನ ತಲೆತಿರುಗುತ್ತಿತ್ತು!ಗಂಟಲ ಸೆರೆ ಉಬ್ಬಿತ್ತು!
ಆದರೆ ಕೃಷ್ಣ ಮಾತ್ರ ಮಾತನ್ನು ನಿಲ್ಲಿಸಲಿಲ್ಲ ಮುಂದುವರಿದು ಹೇಳುತ್ತಲೇ ಇದ್ದ,ಕರ್ಣಾ !ನೀನು ಹಗೆಗಳೆಂದು ಬಗೆದಿರುವ ಪಾಂಡವರು ನಿನ್ನ ಸಹೋದರರು! ನೀನು ಕುಂತಿಯ ಹಿರಿಮಗ! ನೀನು ಹಿರಿಯನೆಂದು ತಿಳಿದರೆ ಪಾಂಡವರು ಯುದ್ಧ ಬೇಡವೆನ್ನುತ್ತಾರೆ! ಸ್ವತಃ ಧರ್ಮಜ ತನ್ನ ಅಧಿಕಾರವನ್ನು ರಾಜ್ಯವನ್ನು ನಿನ್ನ ಕಾಲ ಕೆಳಗಿಡುತ್ತಾನೆ! ನಿನ್ನ ಪರಮ ಮಿತ್ರ ಕೌರವನು ನಿನ್ನನ್ನು ದ್ವೇಷಿಸಲಾರ! ಎಡದಲ್ಲಿ ಪಾಂಡವರು, ಬಲದಲ್ಲಿ ಕೌರವರು ಮಧ್ಯದಲ್ಲಿ ರಾಜಾಧೀರಾಜನಾಗಿ ನೀನು ಈ ಮಹಾಸಾಮ್ರಾಜ್ಯದ ಚಕ್ರವರ್ತಿಯಾಗಿ ಈ ಕುರುಕುಲವನ್ನು ಮುನ್ನಡೆಸು! ಈ ಭೂಮಿಯನ್ನು ಮಹಾಯುದ್ಧದ ಸಂಕಷ್ಟದಿಂದ ತಪ್ಪಿಸುವ ಶಕ್ತಿ ಇರುವದು ನಿನಗೆ ಮಾತ್ರ! ಒಂದು ವೇಳೆ ಯುದ್ಧವೇ ನೆಡೆದರೆ ನಿನ್ನ ಸಹೋದರರನ್ನು ನೀನು ಕೊಲ್ಲಬಲ್ಲೆಯಾ? ಯುದ್ಧದಲ್ಲಿ ..ನಿನ್ನ ತಾಯಿ ಕುಂತಿಯ ಕಣ್ಣಿರನ್ನು ನೀನು ನೋಡಬಲ್ಲೆಯಾ? ಯೋಚಿಸು ಕರ್ಣ!
ಕರ್ಣ ತುಂಬಾ ಹೊತ್ತು ಮೌನವಾಗಿದ್ದ..ತಲೆ ಎತ್ತಿ ಆಗಾಗ ಸೂರ್ಯದೇವನನ್ನೇ ನೋಡುತ್ತಿದ್ದ!ಕರ್ಣನ ಎದೆಯಲ್ಲಿ ಜ್ವಾಲಾಮುಖಿ ಸಿಡಿಯುತ್ತಿತ್ತು! ನಾನು ಕುಂತಿಯ ಮಗ! ಈ ಕೃಷ್ಣ ಹೇಳುತ್ತಿರುವುದು ಸುಳ್ಳು ಎನ್ನಿಸುತ್ತಿಲ್ಲ! ಆದರೇ ಈಗ ಎಪ್ಪತ್ತು ವರುಷಗಳನ್ನು ಈ ಭೂಮಿಯ ಮೇಲೆ ಕಳೆದ ಮೇಲೆ ಈ ಸತ್ಯದ ಅಗತ್ಯ ನನಗಿರಲಿಲ್ಲ..ಈಗ ನಾನೇನು ಮಾಡಲಿ! ಇದೆಲ್ಲಾ ಕುಟಿಲ ಕೃಷ್ಣನ ಕಪಟ ನಾಟಕ! ಅಂದು ದ್ರೌಪದಿ ಸ್ವಯಂವರದಲ್ಲಿ ಅವಳು ನನ್ನನ್ನು ‘ಸೂತಪುತ್ರ’ ಎಂದಾಗ ಮಾಧವ ಸುಮ್ಮನಿದ್ದ!
ಜಗತ್ತೇ ನನ್ನ ಕುಲವನ್ನು ಹಂಗಿಸುವಾಗ ಹೇಳದ ಸತ್ಯ ಈಗೇಕೆ?? ಈ ಸತ್ಯವನ್ನು ಈಗ ಹೇಳಿ ನನ್ನ ಹೃದಯವನ್ನು,ಬುದ್ಧಿಯನ್ನು ಛಿದ್ರಗೊಳಿಸುತ್ತಿದ್ದಾನೆ! ಅಯ್ಯೋ ಈಗ ನಾನೇನು ಮಾಡಲಿ??
ಕಾದಿ ಕೊಲುವಡೆ
ಪಾಂಡು ಸುತರು ಸಹೋದರರು!!
ಕೊಲ್ಲದೆ ಕಾದೇನಾದರೇ
ಕೌರವಗೆ ಅವನಿಯಲಿ ನೆಲೆಯಿಲ್ಲ!!
ಎಂದು ಯೋಚಿಸುವಾಗ ಗಂಟಲು ಕಟ್ಟಿತು! ಕಣ್ಣಿನಲ್ಲಿ ನೀರು ತುಂಬಿ ಬಂತು!!
ಇಡೀ ಜಗವೇ ಜಾತಿಹೀನನೆಂದರು ! ಹೆಜ್ಜೆ ಹೆಜ್ಜೆಗೂ ಅವಮಾನವಾದರೂ! ಕಣ್ಣೀರು ಎಂದು ಬಂದಿರಲಿಲ್ಲ! ಮತ್ತಷ್ಟು ಗಟ್ಟಿಯಾಗಿ, ಕಲ್ಲಾಗಿದ್ದ ಕರ್ಣನ ಹೃದಯ ಇಂದು ಕರಗುತ್ತಿತ್ತು! ಏನನ್ನೋ ನಿರ್ಧಾರ ಮಾಡಿದವನಂತೆ ಕರ್ಣ. .ಮಾಧವ ಎಂದ!
ಕುಂತಿ ಪುತ್ರ ಎನ್ನಲು ಹೊರಟ ಕೃಷ್ಣನನ್ನು ಮಧ್ಯದಲ್ಲೇ ತಡೆದು ನುಡಿದ.. ಮಾಧವ ನೀನು ಹೇಳುತ್ತಿದ್ದ ಕಥೆಯನ್ನು ನಾನು ಮುಂದುವರಿಸಲೇ?!..ಮಾಧವ ಕುತೂಹಲದಿಂದ ಕರ್ಣನನ್ನೇ ನೋಡಿದ..
ಹಾಗೆ ಗಂಗೆಯಲ್ಲಿ ಕುಂತಿ ತೇಲಿ ಬಿಟ್ಟ ಮಗು ಸಿಕ್ಕಿದ್ದು ಅಧಿರಥ ಎನ್ನುವ ಸೂತನಿಗೆ! ಮಕ್ಕಳಿಲ್ಲದ ರಾಧೆ ಮತ್ತು ಅಧಿರಥ ಪ್ರೀತಿಯನ್ನೆಲ್ಲ ಧಾರೆ ಎರೆದು ಸಾಕಿದ ಮಗುವೇ ನಾನು.. ರಾಧಾ ಸುತ ರಾಧೆಯ! ತೇಲಿ ಬಂದ ಮಗುವನ್ನು ಕೈಯಲ್ಲಿ ಹಿಡಿದಾಕ್ಷಣ ನನ್ನ ಅಮ್ಮ ರಾಧೆಯ ತಾಯ್ತನ ಜಾಗ್ರತವಾಯಿತಂತೆ! ಬಂಜೆಯಾದ ಆಕೆಯ ಸ್ತನಗಳಲ್ಲಿ ಹಾಲು ಒಸರಿತಂತೆ!!
ಈಗ ಎಪ್ಪತ್ತು ವರುಷಗಳ ನಂತರ ನನ್ನಮ್ಮ ರಾಧೆಯಲ್ಲಿ ಹೋಗಿ ಹೇಳಲೇ? ನಾನು ಕುಂತಿ ಪುತ್ರನೆಂದು?!
ಇಡೀ ಪ್ರಪಂಚವೇ ಜಾತಿಯ ಹೆಸರಿನಲ್ಲಿ ಕುರುಡಾಗಿದ್ದಾಗ.. ನನಗೆ ಆಶ್ರಯ ಕೊಟ್ಟು. .ತಲೆಯ ಮೇಲೆ ಮುತ್ತಿನ ಕಿರೀಟವಿಟ್ಟು ಅಂಗರಾಜ್ಯದ ಅಧಿಪತಿಯನ್ನಾಗಿಸಿದ ಕೌರವನಿಗೆ ಹೇಳಲೇ ನಾನು ಕುಂತಿ ಪುತ್ರನೆಂದು..
ನಾನು ಈ ಸಾಮ್ರಾಜ್ಯದ ಆಸೆಗೆ ಕೌರವನಿಗೆ ಮೋಸ ಮಾಡುವ ನಯವಂಚಕನಲ್ಲ ಎನ್ನುವುದು ನಿನಗೂ ತಿಳಿದಿದೆ! ಆದರೂ ನೀನು ಬೇಡದ ಸಂದರ್ಭದಲ್ಲಿ ಬೇಡದ ಸತ್ಯವನ್ನು ನುಡಿದು. .ನನ್ನ ಹೃದಯವನ್ನೇ ಕಲಕಿದೆ!
ನೀನಾಡಿದ ಮಾತುಗಳಿಗೆ ನನ್ನ ಸ್ಪಷ್ಟ ಉತ್ತರವನ್ನು ಕೇಳಿಸಿಕೋ ಕೃಷ್ಣ…ನೀನು ಹೇಳಿದ ಚಕ್ರವರ್ತಿ ಪೀಠದ ಆಮಿಷಕ್ಕೆ ಕರ್ಣನ ವ್ಯಕ್ತಿತ್ವ ,ನಿಯತ್ತನ್ನು ಕೊಲ್ಲುವ ಶಕ್ತಿಯಿಲ್ಲ! ಮುಂದೆ ನೆಡೆಯುವ ಮಹಾಯುದ್ಧದಲ್ಲಿ ಇತಿಹಾಸ ನೆನಪಿಡುವಂತೆ ಹೋರಾಡಿ ನನ್ನ ಮಿತ್ರ ಕೌರವನ ಶತ್ರುಗಳ ಮೇಲೆ ಬಾಣದ ಮಳೆ ಸುರಿಸುತ್ತೇನೆ..ಇನ್ನೂ ಸ್ಪಷ್ಟವಾಗಿ ಹೇಳುತ್ತೇನೆ ಕೇಳಿಸಿಕೋ ಕೃಷ್ಣ! ಧರ್ಮರಾಜ ನನ್ನನ್ನು ಅಣ್ಣನೆಂದು ಒಪ್ಪಿ, ಭೀಷ್ಮರೇ ಅಪ್ಪಿ ಒಪ್ಪಿ ಕೊಂಡರು,ಧ್ರತಾರಾಷ್ಟ್ರ ದೊರೆಯೇ ಸಮ್ಮತಿಸಿ ನನಗೆ ಕುರು ಸಾಮ್ರಾಜ್ಯವನ್ನು ಕೊಟ್ಟರೂ. . ಮರುಘಳಿಗೆಯಲ್ಲೇ ಸರ್ವ ಸಾಮ್ರಾಜ್ಯವನ್ನು ನಿನ್ನ ಕಣ್ಣೆದುರಲ್ಲೇ ನನ್ನ ಮಿತ್ರ ಅನ್ನದಾತ ದುರ್ಯೋಧನನಿಗೆ ಅರ್ಪಿಸುತ್ತೇನೆ!!
ಕೃಷ್ಣನ ಮುಖ ಗಂಭೀರವಾಯಿತು! ಕರ್ಣನಿಗೆ ತನ್ನ ಉತ್ತರದಿಂದ ಸಮಾಧಾನವಾಯಿತು! ಆದರೂ ಏನೋ ಒಂದು ದುಗುಡ ಕಾಡುತ್ತಿತ್ತು! ಮನೆಯಲ್ಲಿ ಕುಳಿತು ಇದನ್ನೆಲ್ಲಾ ಯೋಚಿಸುತ್ತಿದ್ದ ಕರ್ಣನಿಗೆ ತಿಳಿದಿರಲಿಲ್ಲಾ ನಾಳೆ ಕುಂತಿ ತನಗಾಗಿ ಗಂಗೆಯ ತಟದಲ್ಲಿ ಕಾದಿರುತ್ತಾಳೆ ಎಂದು!!
