ಅಂಕಣಕಥೆ

ಅವನ ವಾಂಛೆಗೆ ಕಲ್ಲಾದಳು ಯಾರವಳು..!!

ಶ್ರೀರಾಮನ ಪಾದಸ್ಪರ್ಶದಿಂದ ಶಾಪ ಮುಕ್ತಳಾದಳು ಯಾರವಳು.?

ಅವನ ವಾಂಛೆಗೆ ಕಲ್ಲಾದಳು ಅವಳು!!

ಶ್ರೀರಾಮನ ಪಾದಸ್ಪರ್ಶದಿಂದ ಶಾಪ ಮುಕ್ತಳಾದಳು ಯಾರವಳು.?

ರೇ! ಇದೇನಿದು!! ನನ್ನ ಮೇಲೊಂದು ತುಳಸಿಗಿಡ ಬೆಳೆಯುತ್ತಿದೆಯಲ್ಲಾ! ಏನಿದು?! ಆಶ್ಚರ್ಯ!! ಪ್ರಪಂಚದ ಜೀವಿಗಳೆಲ್ಲಾ ಇದನ್ನು ವಿಸ್ಮಯದಿಂದ ನೋಡುತ್ತಿರಬಹುದಲ್ಲವೇ? ಬಹುವರ್ಷಗಳಿಂದ ಬಿದ್ದಲ್ಲೆ ಇಲ್ಲೇ ಬಿದ್ದಿದ್ದೇನೆ ಎಂದೆಂದೂ ಈ ವಿಸ್ಮಯ ನಡೆದದ್ದಿಲ್ಲಾ.. ಶಿಲೆಯ ಮೇಲೊಂದು ತುಳಸಿಯ ಗಿಡ ಬೆಳೆಯುವುದು ಎಂದರೇನು? ಎನ್ನುವ ಯೋಚನೆ ಬರುತ್ತಿದ್ದರು.. ಮನಸ್ಸಿನಲ್ಲಿ ರಾಮ ಸ್ಮರಣೆ ನಿರಂತರವಾಗಿ ನಡೆಯುತ್ತಲೇ ಇತ್ತು.. ಇಂದು ಅದ್ಯಾಕೋ ಹೇಳಲಾರದ ವೇದನೆ.. ಹಳೆಯದೆಲ್ಲ ನೆನಪಿಗೆ ಬರುತ್ತಿದೆ..
ನಾನು ನನ್ನನ್ನು ಹೇಗೆ ಪರಿಚಯಿಸಿಕೊಳ್ಳಲಿ ನಿಮಗೆ? ನಾನು ಶಾಪಗ್ರಸ್ಥ ಶಿಲೆ.. ಬಹುವರ್ಷಗಳಿಂದ ಬಿದ್ದಲ್ಲೇ ಬಿದ್ದಿದ್ದೇನೆ! ಆದರೂ ನನಗೇ ನೋವು ಹಿಂಸೆಯ ಸಂಕಟವಿದೆ ಎನ್ನಲೇ? ಅಥವಾ ದೇವಲೋಕದ ಸುಂದರಿ ಊರ್ವಶಿಯು ತಾನೇ ರೂಪವತಿ ಎನ್ನುವ ಅಹಂಕಾರದಿಂದ ಮೆರೆಯುತ್ತಿರುವಾಗ ಅವಳಿಗೆ ಪಾಠ ಕಲಿಸುವುದಕ್ಕಾಗಿ ಸಪ್ತ ಋಷಿಗಳ ಯಜ್ಞ ತ್ಯಾಜ್ಯದಿಂದ ಬ್ರಹ್ಮ ಸೃಷ್ಟಿ ಸಿದ ಅತಿ ಲಾವಣ್ಯವತಿ.. ಪ್ರಪಂಚದಲ್ಲೇ ಸುರಸುಂದರಿ ‘ಅಹಲ್ಯೆ’ ನಾನು ಎನ್ನಲೇ? ಅಥವಾ ಸಂಸಾರ ಪಥದಲ್ಲಿ ಎಡವಿ ಗಂಡನಿಂದ ಪರಿತ್ಯಕ್ತಳಾಗಿ ಶಾಪದಿಂದ ‘ಶಿಲೆ’ಯಾದೆ ಎನ್ನಲೇ? ನಿಜ ಇದೇ ನನ್ನ ಪರಿಚಯ..
ಏನಿವಳ ಕಥೆ ಎನ್ನುವ ಕುತೂಹಲ ನಿಮಗೂ ಇರಬಹುದಲ್ಲವೇ?
ನನ್ನಪ್ಪ ಮುದ್ಗಲ ಮಹರ್ಷಿ. ನನ್ನಮ್ಮ ಮಹಾಸಾಧ್ವಿ. ನನ್ನ ಮೇಲೆ ಅಪರಿಮಿತ ಪ್ರೀತಿ ಅವಳಿಗೆ. ಆ ಪ್ರೀತಿಯ ಮುಚ್ಚಟೆಯಲ್ಲಿ ಬೆಳೆದ ನಾನು ನನ್ನಮ್ಮನ ರಾಜಕುಮಾರಿಯೇ ಆಗಿದ್ದೆ. ಅಮ್ಮನ ಪ್ರೀತಿಯಲ್ಲಿ ಸುಖವಾಗಿದ್ದ ನನಗೆ ಯಾವ ಕಷ್ಟದ ಅರಿವು ಇರಲಿಲ್ಲ. ಮದುವೆಯ ವಯಸ್ಸಿಗೆ ಬಂದ ನನಗೆ ಅಪ್ಪ ಹುಡುಕಿದ ವರ ಮಹರ್ಷಿ ಗೌತಮರು! ಆಗಾಗ ಅಪ್ಪನನ್ನು ನೋಡಲು ಆಶ್ರಮಕ್ಕೆ ಬರುತ್ತಿದ್ದ ಗೌತಮರ ಗಡಸು ಮಾತು, ಮುಂಗೋಪದ ಪರಿಚಯವಿದ್ದ ನಾನು ಹೆದರಿದ್ದೆ! ಅಪ್ಪ ಹೇಳಿದ್ದು” ಮಹರ್ಷಿ ಗೌತಮರ ಕಮಂಡಲದಲ್ಲಿರುವ ಜಲಕ್ಕೆ ಪ್ರಪಂಚವನ್ನೇ ಸುಟ್ಟು ಬಿಡುವ ಶಕ್ತಿ ಇದೆ! ಅವರ ತಪಃಶಕ್ತಿಯ ಮುಂದೆ ಪ್ರಪಂಚವೇ ತೃಣಕ್ಕೆ ಸಮಾನ”!
ಭಯ ಭಕ್ತಿಯಿಂದಲೇ ನಾನು ಗೌತಮರಿಗೆ ಮಡದಿಯಾದೆ!
ಗೌತಮರ ಆಶ್ರಮದಲ್ಲಿ ನನ್ನ ಬದುಕಿನ ಹೊಸ ಅಧ್ಯಾಯವೊಂದು ಶುರುವಾಗಿತ್ತು.ನಾನು ಸೂರ್ಯೋದಯಕ್ಕೆ ಮುನ್ನವೇ ಎದ್ದು ಇಡಿಯ ಆಶ್ರಮದ ವಠಾರವನ್ನೆಲ್ಲ ಶುಚಿಗೊಳಿಸುತ್ತಿದ್ದೆ . ಪ್ರಾತಃಕಾಲ ಸನ್ನಿಹಿತವಾಗುವ ಮುನ್ನವೇ ಬಾವಿಯಿಂದ ನೀರು ಸೇದಿ ಸ್ನಾನಾದಿ ಕರ್ಮಗಳನ್ನೆಲ್ಲ ಮುಗಿಸುತ್ತಿದ್ದೆ . ಸೂರ್ಯಕಿರಣಗಳು ನೆಲವ ಸೋಕುವ ಮುನ್ನವೇ ಮನೆಯಂಗಳದಲ್ಲಿ ರಂಗೋಲಿಯ ಗೆರೆಗಳನ್ನು ಎಳೆಯಬೇಕು ಇದು ಆಶ್ರಮದ ನಿಯಮ . ಇನ್ನೇನು ಬೆಳಕು ಹರಿಯಿತ್ತಿದೆ ಎನ್ನುವಾಗಲೇ ಗೌತಮರ ಪೂಜೆಗೆ ಹೂವು, ತುಳಸಿ ಇತ್ಯಾದಿಗಳನ್ನು ಕೊಯ್ದು ಅಣಿಗೊಳಿಸುತ್ತಿದ್ದೆ . ಯಾವುದೊಂದರಲ್ಲೂ ಏನೊಂದು ಕೊರತೆಯನ್ನೂ ಅವರು ಸಹಿಸುತ್ತಿರಲಿಲ್ಲ..
ಪೂಜೆ, ಹೋಮಗಳೆಲ್ಲ ಸಾಂಗವಾಗಿ ಮುಗಿಯಿತೆಂದರೆ ನನಗೆ ಒಂದು ದಿನವನ್ನು ಕಳೆದ ನಿರಾಳತೆ. ಸಮಯ ಸಿಕ್ಕಾಗಲೆಲ್ಲಾ ಗೌತಮರು ನನ್ನನ್ನು ಕೂರಿಸಿಕೊಂಡು ಆಧ್ಯಾತ್ಮದ ಪಾಠ ಮಾಡುತ್ತಿದ್ದರು. ನನಗೆ ಅವರ ಅಧ್ಯಾತ್ಮದ ಮಾತುಗಳು ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ.. ಅವರು ಹೇಳಿದ್ದನ್ನು ಕೇಳಬೇಕಲ್ಲದೇ ಎದುರು ಮಾತನಾಡುವುದನ್ನು ಗೌತಮರು ಸಹಿಸಲಾರರು ಎಂಬ ಸತ್ಯದ ಅರಿವಿತ್ತು ನನಗೆ.
ಹೀಗೆ ಜೀವನ ಏರುಪೇರಿಲ್ಲದೆ ನಡೆಯುತ್ತಿತ್ತು..
ಅಂದೇಕೋ ಎಂದಿನಂತಿರಲಿಲ್ಲ.. ಪ್ರಕೃತಿಯಲ್ಲಿ ಅದೇನೋ ಬದಲಾವಣೆ.. ಸೂರ್ಯೋದಯದ ಜೊತೆಜೊತೆಗೆ ಬಂದ ಕಾಮನಬಿಲ್ಲು ಅದ್ಯಾವ ಸಂದೇಶವನ್ನು ನೀಡಿತ್ತೋ ನನಗೆ ತಿಳಿಯಲಿಲ್ಲ.. ನನ್ನಲ್ಲೂ ಅದೇನು ಹೊಸ ಹುರುಪು ಮೂಡಿತ್ತು. ಹೀಗೆಯೇ ಸಮಯಕಳೆದು ಸಂಧ್ಯಾಕಾಲ ಸಮೀಪಿಸಿತ್ತು. ಗೌತಮರು ಸ್ನಾನಕ್ಕಾಗಿ ನದಿಯ ಕಡೆ ಹೋದರು.
ಕ್ಷಣಮಾತ್ರದಲ್ಲಿ ನನ್ನೆದುರು ಪ್ರತ್ಯಕ್ಷರಾದ ಗೌತಮರು ನನ್ನನ್ನು ಸಮೀಪಿಸುತ್ತಿರುವುದು ನನ್ನಲ್ಲಿ ಹೇಳಲಾಗದ ಸೋಜಿಗವನ್ನು ಉಂಟುಮಾಡಿತ್ತು. ಅರೇ!
ಇದೇನಿದು ಹೊಸ ಬಗೆ! ಸೂರ್ಯ ಮುಳುಗುತ್ತಿರುವ ಈ ಸಮಯದಲ್ಲಿ ಗೌತಮ ಮಹರ್ಷಿಗೆ ಕಾಮದ ವಾಂಛೆಯೇ? ಇಷ್ಟೆಲ್ಲಾ ತಿಳಿದ ಜ್ಞಾನಿಗೆ ಈ ಸಮಯದಲ್ಲಿ ಮಡದಿಯನ್ನು ಸೇರುವುದು ಧರ್ಮಸಮ್ಮತವಲ್ಲ ಎನ್ನುವ ವಿಷಯ ತಿಳಿದಿಲ್ಲವೇ? ಗೌತಮರನ್ನು ಪ್ರಶ್ನಿಸಲೋ ಬೇಡವೋ ಎನ್ನುವ ತೊಳಲಾಟದಲ್ಲಿ ನಾನು ಇರುವಾಗಲೇ.. ನನ್ನನ್ನು ಸ್ಪರ್ಶಿಸುತ್ತಿರುವ ಕೈಗಳು ಗೌತಮರದ್ದಲ್ಲ..ಈ ವ್ಯಕ್ತಿಯ ದೇಹದಿಂದ ಬರುತ್ತಿರುವ ಈ ಸುವಾಸನೆ ಸ್ವರ್ಗದ ಗಂಧದಂತೆ ನನಗೆ ಭಾಸವಾಯಿತು.. ದೇವತೆಗಳ ಶರೀರದಿಂದ ಮಾತ್ರ ಹೊರಬರುವ ಸುವಾಸನೆ!! ಓ! ಬಂದಿರುವನು ದೇವೇಂದ್ರ! ಸ್ವರ್ಗದ ಅಧಿಪತಿ ನನಗಾಗಿ.. ನನ್ನ ಮನೆಯ ಬಾಗಿಲಲ್ಲಿ.. ಒಂದು ಕ್ಷಣ ಮೈಮರೆತೆ!
ಮರುಕ್ಷಣದಲ್ಲೇ ಕಾಮನಬಿಲ್ಲು ಮಾಯವಾಗಿತ್ತು! ಕಗ್ಗತ್ತಲು ಕವಿದಿತ್ತು! ಆಶ್ರಮದ ಹೊರಗು.. ಮನಸ್ಸಿನ ಒಳಗೂ..ಬದುಕಿಗೂ!!

ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವುದೆಂದು ಗೊತ್ತಿದ್ದೂ, ಆತನನ್ನು ವಿರೋಧಿಸದೆ ಅಪರಾಧ ಮಾಡಿದ್ದೆ ನಾನು!!
ದೇವೇಂದ್ರನು ಆಶ್ರಮದ ಹೊರಹೋಗುವಾಗ, ಗೌತಮರು ಎದುರೇ ಸಿಕ್ಕಿದರು. ಗಡಗಡ ನಡುಗಿದ ಇಂದ್ರ. ಗೌತಮರು ಮುನಿವೇಷಧರನಾದ ಅವನನ್ನೇ ನೋಡಿದರು. “ಮಾಡಬಾರದ್ದನ್ನು ಮಾಡಲಿಕ್ಕೆ ನನ್ನ ವೇಷವೇ? ಇನ್ನು ಮುಂದೆ ನೀನು ಪುರುಷನಲ್ಲ. ಇಂದ್ರಪಟ್ಟ ನಿನಗೆ ಸ್ಥಿರವಲ್ಲ. ಸದಾ ಭಯವನ್ನು ಹೊಂದು” ಎಂದು ಶಪಿಸಿದರು. ಶಾಪಕ್ಕೆ ಗಡಗಡ ನಡುಗಿದ ಇಂದ್ರ ಗೌತಮರ ಪಾದದಲ್ಲಿ ಬಿದ್ದು ಹೊರಳಾಡುತ್ತಿದ್ದ. ಶಾಪದ ಪರಿಣಾಮವನ್ನು ತಗ್ಗಿಸಿಕೊಂಡ.

ಆಗ ನನಗನ್ನಿಸಿದ್ದು..
ಛೇ ! ತಪ್ಪು ಮಾಡಿಬಿಟ್ಟೆ!! ತಪೋಬಲದಿಂದ ಸೂರ್ಯನಂತೆ ಪ್ರಕಾಶಿಸುತ್ತಿರುವ ಗೌತಮರೆಲ್ಲಿ! ಈ ಲಂಪಟ ಇಂದ್ರನೆಲ್ಲಿ?!

ಅರಿಯದೇ ಅಪರಾಧ ಮಾಡಿದರೆ, ಪರಿಹಾರವಿದೆ. ಅರಿತೂ ಅಪರಾಧ ಮಾಡಿದರೇ,, ತಪ್ಪನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಟ್ಟರೆ ಪರಿಹಾರ ಆದರೇ ನನಗೆ?!

ನಾನು ಗೌತಮರ ಮುಂದೆ ಕಲ್ಲಿನಂತೆ ನಿಂತಿದ್ದೆ..
“ಬಹುಸಹಸ್ರವರ್ಷಗಳ ಕಾಲ ನೀನು ಶಿಲೆಯಾಗಿ ಹೋಗು ರಾಮಬರುವವರೆಗೆ ಇಲ್ಲೇ ಬಿದ್ದಿರು. ಯಾವಾಗ ರಾಮನ ಪಾದಸ್ಪರ್ಶವಾಗುತ್ತದೋ , ಆಗ ಶಾಪ ವಿಮುಕ್ತಿ” ಎಂದರು.ನೀನು ರಾಮ ನಾಮಸ್ಮರಣೆಯಿಂದ ತಪಸ್ಸಿನ ಮೂಲಕ ಪಾವಿತ್ರ್ಯತೆ ಪಡೆಯಬೇಕು ಎಂದರು . ಇಷ್ಟು ಹೇಳಿ ಗೌತಮರು ಆಶ್ರಮ ತೊರೆದು, ಹಿಮಾಲಯಕ್ಕೆ ತೆರಳಿದರು.

ಅಯ್ಯೋ! ಒಂದು ವಿಷಯ ಹೇಳುವುದನ್ನೇ ಮರೆತೆ.. ನನ್ನ ಮತ್ತು ಗೌತಮರ ದಾಂಪತ್ಯದ ಫಲವಾಗಿ ನಮಗೊಂದು ಮಗನಿದ್ದಾನೆ. ಅವನ ಹೆಸರು ಶತಾನಂದ. ಜನಕ ರಾಜನ ಆಸ್ಥಾನದಲ್ಲಿ ಆಶ್ರಿತನಾಗಿದ್ದಾನೆ.. ಅವನೇ ನನಗೆ ಹೇಳಿದ್ದು..
ನನ್ನನ್ನು ನೋಡುವುದಕ್ಕಾಗಿ, ನನ್ನನ್ನು ಮಾತನಾಡಿಸುವುದಕ್ಕಾಗಿ ಬರುವ ಏಕೈಕ ವ್ಯಕ್ತಿ! ಬರುತ್ತಾನೆ!! ಹತ್ತಿರ ಕುಳಿತುಕೊಳ್ಳುತ್ತಾನೆ ಅಮ್ಮ ಎನ್ನುತ್ತಾನೆ!! ಕಣ್ಣೀರು ಸುರಿಸುತ್ತಾನೆ!! ಮಗನ ಕಣ್ಣೀರು ಒರೆಸಲು ಆಗದ ನತದೃಷ್ಟ ತಾಯಿ ನಾನು!

ಅರೇ!! ಯಾರದೋ ಮಾತುಗಳು ಕೇಳುತ್ತಿದೆಯಲ್ಲಾ! ಬಂದವರು ಯಾರಿರಬಹುದು!? ಅಮ್ಮಾ!! ಅಹಲ್ಯಾ! ಎಂದ ಧ್ವನಿ ಯಾರದ್ದು?? ಅರೆರೆ!! ಇಂದು ಬಂದವನು ಶತಾನಂದನಲ್ಲ! ಇಂದು ನನ್ನ ಭಾಗ್ಯದ ಬಾಗಿಲು ತೆರೆಯಿತು! ಬಂದಿರುವನು ದಶರಥಾತ್ಮಜ! ಶ್ರೀರಾಮಚಂದ್ರ!! ರಘುವಂಶ ದೀಪ! ಬಹು ಸಹಸ್ರ ವರ್ಷಗಳ ತಪಸ್ಸಿಗೆ ಇಂದು ಸಿಗುತ್ತಿದೆ ಫಲ! ಇಂದು ಬಂದಿದೆ ಆ ಸುದಿನ!! ನಾನು ಇಂದಿನಿಂದ ಪವಿತ್ರಳು!! ವಿಶ್ವಾಮಿತ್ರರೋಡನೇ ಶ್ರೀರಾಮ ಲಕ್ಷ್ಮಣರ ಆಗಮನ!! ನಾನಿನ್ನು ಪವಿತ್ರಳು!! ರಾಮಪಾದ ಸ್ಪರ್ಶದಿಂದ ಅಹಲ್ಯೆ ಪವಿತ್ರಳು!!

ಸಂಗೀತಾ ವೈದ್ಯ

Related Articles

Leave a Reply

Your email address will not be published. Required fields are marked *

Back to top button