ಗಣೇಶ ಬಸ್ಕಿ !! ಕೇವಲ ಆಟವಲ್ಲ! ಆಚರಣೆಯ ಕಾಟವಲ್ಲ! ಇದು ಆರೋಗ್ಯದ ಮರ್ಮ
ಗಣೇಶ ಚತುರ್ಥಿಯಿಂದ ಬಸ್ಕಿ ಹೊಡೆಯಲು ಆರಂಭಿಸಿ ಏನಂತೀರಾ..?

ಗಣೇಶ ಬಸ್ಕಿ !! ಕೇವಲ ಆಟವಲ್ಲ! ಆಚರಣೆಯ ಕಾಟವಲ್ಲ! ಇದು ಆರೋಗ್ಯದ ಮರ್ಮ.!
ನಾವು ಬಾಲ್ಯದಲ್ಲಿ “ಗಣೇಶ ಬಸ್ಕಿ” ಬಗ್ಗೆ ಕೇಳಿದ್ದೇವೆ. ಶಾಲೆಯಲ್ಲಿ ಶಿಕ್ಷೆಯ ರೂಪದಲ್ಲಿ ಮಕ್ಕಳಿಗೆ ತಮ್ಮ ಕೈಗಳಿಂದ ವಿರುದ್ದ ಕಿವಿಗಳನ್ನು ಹಿಡಿದು ಕುಳಿತು ಎಬ್ಬಿಸುವುದನ್ನು “ಗಣೇಶ ಬಸ್ಕಿ” ಎಂದು ಕರೆಯಲಾಗುತ್ತಿತ್ತು. ಹಾಗೆಯೇ ಗಣೇಶ ಹಬ್ಬದ ಸಂದರ್ಭದಲ್ಲಿ ದೇವರಿಗೆ ಸಲ್ಲಿಸುವ ಹರಕೆಯ ರೂಪದಲ್ಲಿಯೂ ಇದನ್ನು ಮಾಡುತ್ತೇವೆ. ಜನರಿಗೆ ಇದು ಕೇವಲ ಪರಂಪರೆ ಅಥವಾ ಪುರಾಣಕ್ಕೆ ಸೀಮಿತವಾದ ಆಚರಣೆ ಎಂದು ಕಾಣಬಹುದು. ಆದರೆ ಆಯುರ್ವೇದ,ಯೋಗ,ಮತ್ತು ಮರ್ಮದ ದೃಷ್ಟಿಯಿಂದ ಇದರಲ್ಲಿ ಆಳವಾದ ಆರೋಗ್ಯ ರಹಸ್ಯವಿದೆ.
ಗಣೇಶ ಬಸ್ಕಿ – ತೊಪ್ಪುಕಾರಣಂ
ಗಣೇಶ ಬಸ್ಕಿಯನ್ನು ತಮಿಳುನಾಡಿನಲ್ಲಿ “ತೊಪ್ಪುಕಾರಣಂ” (Thoppukaranam) ಎಂದು ಕರೆಯುತ್ತಾರೆ.ಇದರ ಅರ್ಥ ಕೈಗಳ ಸಹಾಯದಿಂದ ಕಿವಿಗಳನ್ನು ಹಿಡಿಯುವುದು ಎಂದು.ಇದನ್ನು ಸಾಮಾನ್ಯವಾಗಿ ಗಣೇಶ ದೇವಸ್ಥಾನಗಳಲ್ಲಿ ಪಾಪ ಪ್ರಾಯಶ್ಚಿತಕ್ಕಾಗಿ,ವಿದ್ಯೆ ಬುದ್ದಿಯನ್ನು ಕೇಳುವ ಪ್ರಾರ್ಥನೆಗಾಗಿ ಹಾಗು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷೆಯಾಗಿ ಮತ್ತು ಆರೋಗ್ಯದ ಅಭ್ಯಾಸಕ್ಕಾಗಿ ರೂಢಿಸಿಕೊಳ್ಳುತಿದ್ದರು.
ಗಣೇಶ ಬಸ್ಕಿ ಮತ್ತು ಮರ್ಮ ಚಿಕಿತ್ಸೆ
ಆಯುರ್ವೇದದ ಪ್ರಕಾರ ದೇಹದಲ್ಲಿ 107 ಪ್ರಮುಖ ಮರ್ಮ ಸ್ಥಾನಗಳಿವೆ. ಇವುಗಳ ನಿಯಮಿತ ಉತ್ಪ್ರೇರಣೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಪ್ರಾಣಶಕ್ತಿ ಸಮತೋಲನವಾಗುತ್ತದೆ.
ದೇಹದಲ್ಲಿ ಪ್ರಮುಖ ಆರು ಚಕ್ರಗಳು , ಪ್ರತಿ ಚಕ್ರವೂ ಒಂದು ಪ್ರಮುಖ ಮರ್ಮಸ್ಥಾನಕ್ಕೆ ಸಂಬಂಧಿಸಿದೆ.
ಮೂಲಾಧಾರ – ಗುದ ಮರ್ಮ
ಸ್ವಾಧಿಷ್ಠಾನ – ಬಸ್ತಿ ಮರ್ಮ
ಮಣಿಪುರ – ನಾಭಿ ಮರ್ಮ
ಅನಾಹತ –ಹೃದಯ ಮರ್ಮ
ವಿಶುದ್ಧ – ಕಂಠ ಮರ್ಮ
ಆಜ್ಞಾ – ಸ್ತಪನಿ ಮರ್ಮ[ಮೂರನೇ ಕಣ್ಣು]
ಈ ಎಲ್ಲ ಮರ್ಮಗಳು ಮೆದುಳು ಮತ್ತು ಬೆನ್ನು ಹುರಿಯ ಮೇಲೆ ಅವಲಂಬಿತವಾಗಿವೆ, ಅದರಿಂದ ಗಣೇಶ ಬಸ್ಕಿಯ ಸಹಾಯದಿಂದ ಮರ್ಮವು ಉತ್ಪ್ರೇರಣೆಗೊಂಡಾಗ ಮೆದುಳಿನ ಚಟುವಟಿಕೆ, ಸ್ಮರಣೆ, ಏಕಾಗ್ರತೆ ಮತ್ತು ಶಕ್ತಿಯ ಸಮತೋಲನಕ್ಕೆ ನೇರವಾಗಿ ಸಹಾಯಕವಾಗುತ್ತವೆ.
ಈ ರೀತಿ ಗಣೇಶ ಬಸ್ಕಿಯಲ್ಲಿ ದೈಹಿಕ ವ್ಯಾಯಾಮದ ಅಂಶವೂ ಒಳಗೊಂಡಿರುವುದರಿಂದ ಸಾಮಾನ್ಯವಾಗಿ ಕಾಣುವ ಮಂಡಿ ನೋವು,ಕತ್ತು ನೋವು,ಬೆನ್ನು ಹಾಗೂ ಸೊಂಟದ ನೋವು,ಭುಜ ನೋವು ಹಾಗು ಇನ್ನಿತರ ನೋವುಗಳಿಗೆ ಪರಿಹಾರ ನೀಡುವುದು ಖಚಿತ.
ಗಣೇಶ ಬಸ್ಕಿ ಮತ್ತು ಆಯುರ್ವೇದದ ಸಿದ್ದಾಂತ
ಗಣೇಶ ಬಸ್ಕಿಯನ್ನು ಉಚ್ಛ್ವಾಸ ನಿಶ್ವಾಸದ ಸಮನ್ವಯದೊಂದಿಗೆ ಮಾಡಿದಾಗ
ಈ ಎಲ್ಲ ಮರ್ಮ ಸ್ಥಾನಗಳು ಸಕ್ರಿಯವಾಗಿ ಉತ್ಪ್ರೇರಣೆಯಾಗುತ್ತವೆ ಮತ್ತು
ನಿಯಮಿತವಾಗಿ ಅಭ್ಯಾಸ ಮಾಡಿದರೆ ದೇಹ ಮನಸ್ಸಿನ ಸಮತೋಲನ ಕಾಪಾಡಲ್ಪಡುತ್ತದೆ. ಇದು ಕೇವಲ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಕಾಯಿಲೆಗಳು ಬರಲು ಬಿಡದೇ ತಡೆಯುತ್ತದೆ. ಜೊತೆಗೆ ಈಗಾಗಲೇ ಬಂದಿರುವ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲಿಯೂ ಸಹಾಯಕವಾಗುತ್ತದೆ. ಅಂದರೆ, ಇದು ತಡೆಗಟ್ಟುವ ಚಿಕಿತ್ಸೆಯೂ ಆಗಿ, ಚಿಕಿತ್ಸೆ ನೀಡುವ ಅಭ್ಯಾಸವೂ ಆಗಿದೆ ಮತ್ತು ಇದುವೇ ಆಯುರ್ವೇದದ ಮೂಲ ನಿಯಮವಾಗಿದೆ.
ಗಣೇಶ ಬಸ್ಕಿ ಮತ್ತು ಸೂಪರ್ ಬ್ರೈನ್ ಯೋಗ
ನಮ್ಮ ದೇಶದಲ್ಲಿ ವರ್ಷಕ್ಕೊಮ್ಮೆ ಗಣೇಶ ಹಬ್ಬದ ವೇಳೆ ಮಾಡುವ “ಗಣೇಶ ಬಸ್ಕಿ”ಯು ಪಾಶ್ಚಾತ್ಯ ದೇಶಗಳಲ್ಲಿ ಹೊಸ ಹೆಸರಿನಲ್ಲಿ ಪ್ರಸಿದ್ಧವಾಗಿದೆ ಅದುವೇ “Super Brain ಯೋಗ”
*ವೈಜ್ಞಾನಿಕ ಸಂಶೋಧನೆ ಮತ್ತು ಅನುಷ್ಠಾನ*
ಸೂಪರ್ ಬ್ರೈನ್ ಯೋಗವು ಕೇವಲ ಒಂದು ಆಧ್ಯಾತ್ಮಿಕ ಅಭ್ಯಾಸವಲ್ಲ, ಇದನ್ನು ವಿಜ್ಞಾನವೂ ದೃಢಪಡಿಸಿದೆ. ವಿಶ್ವದಾದ್ಯಂತ ಹಲವಾರು ಸಂಶೋಧನೆಗಳು ನಡೆದಿದ್ದು, ಅದರ ಪರಿಣಾಮವನ್ನು EEG (Electroencephalogram) ಮೂಲಕ ಪರೀಕ್ಷಿಸಲಾಗಿದೆ.
EEG ಪರೀಕ್ಷೆಯಲ್ಲಿ, ಸೂಪರ್ ಬ್ರೈನ್ ಯೋಗ ಮಾಡಿದ ತಕ್ಷಣವೇ ಮಿದುಳಿನ ಚಟುವಟಿಕೆಗಳಲ್ಲಿ ಉತ್ತಮ ಬದಲಾವಣೆ ಕಂಡುಬಂದಿದೆ.
ಅಮೇರಿಕಾ, ಯುರೋಪ್ ದೇಶಗಳಲ್ಲಿ ನರರೋಗ ತಜ್ಞರು , ಮನೋವೈದ್ಯರು ಹಾಗೂ ಫಿಟ್ನೆಸ್ ತಜ್ಞರು ಇದನ್ನು ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಾಗಿ ಶಿಫಾರಸು ಮಾಡುತ್ತಿದ್ದಾರೆ.ಶಾಲಾ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರೂ ಇದನ್ನು ಆರೋಗ್ಯಾಭ್ಯಾಸವಾಗಿ ಮಾಡುತ್ತಿದ್ದಾರೆ.
ಇದು ಮೆದುಳಿನ ಚಟುವಟಿಕೆ ಹೆಚ್ಚಿಸುವುದು, ಸ್ಮರಣೆ ಬಲಪಡಿಸುವುದು, ಏಕಾಗ್ರತೆ ಹೆಚ್ಚಿಸುವುದು ಇತ್ಯಾದಿ ಪ್ರಯೋಜನಗಳಿಗೆ “Super Brain Yoga” ಎಂದು ಜನಪ್ರಿಯವಾಗಿದೆ.ಆದರೆ ನಮಗೆ ಇದು ಹೊಸದಲ್ಲ. ನಾವು ಇದನ್ನು ಹಲವಾರು ಶತಮಾನಗಳಿಂದಲೇ ಗಣೇಶ ಬಸ್ಕಿ ಎಂದು ಧಾರ್ಮಿಕ ಆಚರಣೆ, ಹರಕೆ ಹಾಗೂ ಶಿಸ್ತು ರೂಪದಲ್ಲಿ ಮಾಡುತ್ತಿದ್ದೇವೆ.ಇದು ಕೇವಲ ಆಚರಣೆ ಅಲ್ಲ ದೇಹ, ಮನಸ್ಸು, ಮರ್ಮ ಬಿಂದುಗಳ ಸಮತೋಲನಕ್ಕೆ ಸಹಾಯಕವಾದ ಆರೋಗ್ಯಪೂರ್ಣ ಯೋಗಾಭ್ಯಾಸವಾಗಿದೆ.
ಇಂದಿನ ಸಮಯದಲ್ಲಿ ಗಣೇಶ ಬಸ್ಕಿಯ ಮಹತ್ವ
ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರಿಗೂ ಇದರ ಅಗತ್ಯ ವಿದೆ.
ಪ್ರತಿದಿನ ಆರೋಗ್ಯವಂತರು ಬೆಳಿಗ್ಗೆ ಮತ್ತು ಸಂಜೆ ೧೫ ರಿಂದ ೨೦ ಬಸ್ಕಿ ಮಾಡಿದರೆ, ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಇದರ ಲಾಭ ಪಡೆಯುತ್ತಾರೆ.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ತಿಳಿದಿರಬೇಕು.
ಗಣೇಶ ಬಸ್ಕಿ ಯಿಂದ ಆಗುವ ಪ್ರಯೋಜನ
ಮಕ್ಕಳಲ್ಲಿ ಏಕಾಗ್ರತೆ, ಸ್ಮರಣಾಶಕ್ತಿ, ಓದು ಶಕ್ತಿ ಹೆಚ್ಚುವುದರ ಜೊತೆಗೆ, ಅತಿಯಾಗಿ ಮೊಬೈಲ್ ಬಳಕೆ ಕಡಿಮೆಯಾಗುತ್ತದೆ, ಚುರುಕುತನ ಬರುತ್ತದೆ, ಅತಿಯಾದ ದೇಹದ ದಪ್ಪ (ಅತಿಸ್ಥೂಲತೆ) ತಡೆಯುತ್ತದೆ.ಇದಕ್ಕೆ ಯಾವುದೇ ಉಪಕರಣಗಳು ಸಹ ಬೇಕಾಗಿಲ್ಲ.
ವಯಸ್ಕರಲ್ಲಿ ಅಸ್ಥಿರ ಮನಸ್ಸು, ಖಿನ್ನತೆ (ಡಿಪ್ರೆಶನ್), ಡಿಜಿಟಲ್ ವ್ಯಸನ, ಏಕಾಗ್ರತೆ ಕೊರತೆ, ಹೊಟ್ಟೆ ತೊಂದರೆ, ಕಾಲು ನೋವು ಮುಂತಾದವು ನಿವಾರಣೆ ಆಗುತ್ತವೆ.
ವೃದ್ಧರಲ್ಲಿ ಸಂಧಿ ಬಲ ಹೆಚ್ಚುತ್ತದೆ, ನರಶಕ್ತಿ ದೃಢವಾಗುತ್ತದೆ, ಮೆದುಳಿನ ಚುರುಕುತನ ಹೆಚ್ಚುತ್ತದೆ. ಜೊತೆಗೆ ಕಿವಿಯ ಗುನುಗು (ಟಿನಿಟಸ್), ಪಾರ್ಕಿನ್ಸನ್‌ರೋಗದಂತಹ ನರ ಸಂಬಂಧಿ ತೊಂದರೆಗಳ ನಿಯಂತ್ರಣಕ್ಕೂ ಇದು ಸಹಕಾರಿಯಾಗುತ್ತದೆ.
“ಗಣೇಶ ಬಸ್ಕಿ”ಯನ್ನು ನಾವು ಹಬ್ಬದ ಆಚರಣೆಯ ಮಟ್ಟದಲ್ಲಿ ಮಾತ್ರ ಸೀಮಿತಗೊಳಿಸದೆ, ದಿನನಿತ್ಯದ ಒಂದು ಭಾಗವನ್ನಾಗಿ ಮಾಡಿಕೊಂಡರೆ, ದೇಹ, ಮನಸ್ಸು ಹಾಗು ಮೆದುಳಿನ ಸಮಗ್ರ ಆರೋಗ್ಯವನ್ನು ಕಾಪಾಡಬಹುದು.
ಮೂಲವನ್ನು ಗೌರವಿಸಿ ಮತ್ತು ಫಲವನ್ನು ಅನುಭವಿಸಿ
ಪಾಶ್ಚಾತ್ಯ ದೇಶಗಳಲ್ಲಿ ಇಂದು ಗಣೇಶ ಬಸ್ಕಿಯನ್ನು “Super Brain Yoga” ಎಂಬ ಹೊಸ ಹೆಸರಿನಲ್ಲಿ ಪರಿಚಯಿಸುತ್ತಿದ್ದಾರೆ.ಅದೇ ರೀತಿಯಲ್ಲಿ ಮರ್ಮ ಚಿಕಿತ್ಸೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದರೂ, ಇಂದು ಜನಸಾಮಾನ್ಯರಲ್ಲಿ ಹೆಚ್ಚು ಪರಿಚಿತವಾಗಿಲ್ಲ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಅದೇ ತತ್ವವನ್ನು Acupressure ಮತ್ತು Acupuncture ಎಂಬ ಹೆಸರಿನಿಂದ ಪ್ರಸಿದ್ದಿಯಾಗಿದೆ.
ಸಾರಾಂಶ
ಇದರ ಅರ್ಥ ಏನೆಂದರೆ, ನಮ್ಮಸಂಸ್ಕೃತಿ, ಪರಂಪರೆ,ವೈದ್ಯ ಪದ್ದತಿ ಎಷ್ಟೊಂದು ಅಮೂಲ್ಯವೆಂಬುದನ್ನು ಜಗತ್ತು ಗುರುತಿಸಿದೆ. ಆದ್ದರಿಂದ, ನಾವು ಅದನ್ನು ಮರೆಯದೆ, ನಮ್ಮ ಜೀವನದಲ್ಲೇ ಅಳವಡಿಸಿಕೊಂಡರೆ ಅದೇ ನಮಗೆ ನಿಜವಾದ ಶ್ರೇಷ್ಠತೆಯನ್ನು ತರುತ್ತದೆ ಹಾಗೆಯೇ ನಾವು ಹೆಮ್ಮೆಪಟ್ಟು ಪಾಲಿಸಿಕೊಂಡು ಹೋದಾಗ ಮಾತ್ರ ನಮ್ಮ ಸಂಸ್ಕೃತಿ, ಸಂಪ್ರದಾಯ,ವೈದ್ಯಪದ್ಧತಿಯು ನಮಗೆ ಶಕ್ತಿಯ ಮೂಲವಾಗುತ್ತದೆ.
ಲೇಖಕರು- ಡಾ.ಪ್ರಶಾಂತ್. ಡಿ. (ಆಯುರ್ವೇದ ಮರ್ಮ ಚಿಕಿತ್ಸಾ ತಜ್ಞರು)
ಅಯುರ್ಸೆಂಟ್ರಲ್ ಕ್ಲಿನಿಕ್
ಕೋರಮಂಗಲ ಬೆಂಗಳೂರು ೯೫
೯೭೪೧೮೨೨೧೦೭/೯೪೪೮೮೭೫೫೯೩