ನರ್ಸಿಂಗ್ ಮಾನವೀಯ ಸಂವೇದನೆಯ ವೃತ್ತಿಯಾಧಾರಿತ ಪದವಿ – ಡಾ. ಶಿನ್ನೂರ
ಸ್ಪಂದನಾ ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ

ನರ್ಸಿಂಗ್ ಮಾನವೀಯ ಸಂವೇದನೆಯ ವೃತ್ತಿಯಾಧಾರಿತ ಪದವಿ – ಡಾ. ಶಿನ್ನೂರ
ವಿನಯವಾಣಿ
Yadgiri, ಶಹಾಪುರಃ ನರ್ಸಿಂಗ್ ಒಂದು ಪ್ರಮುಖವಾದ ಮಾನವೀಯ ಸಂವೇದನೆಯ ವೃತ್ತಿಯಾಧಾರಿತ ಪದವಿಯಾಗಿದೆ. ಈ ಶುಶ್ರೂಷೆ (ನರ್ಸಿಂಗ್) ಪದವಿಯಲ್ಲಿ ಅಧ್ಯಯನ ಮತ್ತು ತರಬೇತಿ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಗಳಿಗೆ ತುಂಬಾ ಬೇಡಿಕೆಯಿದೆ ಎಂದು ಹಿರಿಯ ವೈದ್ಯರು ಹಾಗೂ ಸ್ಪಂದನಾ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಆರ್. ಶಿನ್ನೂರ ಅವರು ಅಭಿಪ್ರಾಯಪಟ್ಟರು.

ನಗರದ ಸ್ಪಂದನಾ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಒಂದು ದಿನದ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಕರ್ತವ್ಯ ಮತ್ತು ವೃತ್ತಿಪರತೆಯೊಂದಿಗೆ ಮಾನವೀಯ ಕಾಳಜಿಯಿಂದ ಕಾರ್ಯನಿರ್ವಹಿಸಲು ಸಮರ್ಥರನ್ನಾಗಿ ಮಾಡುವ ನರ್ಸಿಂಗ್ ಪದವಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಲವಾರು ನಿರ್ದೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ. ಬಸವರಾಜ ಇಜೇರಿ ಅವರು ಮಾತನಾಡಿ ವೈದ್ಯಕೀಯ ಮತ್ತು ನರ್ಸಿಂಗ್ ಪದವಿಗಳು ಪರಸ್ಪರ ಪೂರಕ ಸಮಾನ ಉದ್ದೇಶಗಳನ್ನು ಹೊಂದಿರುವ ವೃತ್ತಿಗಳಾಗಿ ಜನರ ಆರೋಗ್ಯವನ್ನು ಸಂರಕ್ಷಿಸುವುದು ಮತ್ತು ಪ್ರತಿಷ್ಠಾಪಿಸುವ ಆಶಯಗಳೊಂದಿಗೆ ಕೆಲಸ ಮಾಡುತ್ತದೆ.
ನರ್ಸಿಂಗ್ವು ವೈದ್ಯಕೀಯ ಸೇವಾ ಕ್ಷೇತ್ರದ ಸಂಪೂರ್ಣ ಸಂರಚನೆಯಲ್ಲಿ ವೈದ್ಯ ತಜ್ಞರೊಂದಿಗೆ ಸಂಯೋಜಕರಾಗಿ ರೋಗಿಗಳ ಕಾಳಜಿ ತೆಗೆದುಕೊಳ್ಳುವುದು, ಮಾರ್ಗದರ್ಶನ ನೀಡುವುದು ಮುಂತಾದವುಗಳೊಂದಿಗೆ ತುಂಬಾ ಮಹತ್ವವನ್ನು ಪಡೆದುಕೊಂಡ ಪದವಿಯಾಗಿದೆ ಎಂದು ತಿಳಿಸಿದರು.
ಡಾ. ವಿನಯ ಅವರು ಚಿಕಿತ್ಸಾ ಪ್ರಕ್ರಿಯೆಗಳಲ್ಲಿ ನರ್ಸಿಂಗ್ ಪದವೀದರರ ಪಾತ್ರ ಕುರಿತು ವಿಚಾರ ಮಂಡಿಸಿದರು. ಕಾಲೇಜಿನ ಆಡಳಿತಾಧಿಕಾರಿ ಎಮ್.ಡಿ. ವಾಸಿಮ್ ಆಸ್ಕರಿ ಅವರು ನರ್ಸಿಂಗ್ ಪದವಿ ಪಠ್ಯಕ್ರಮದ ಪ್ರಕ್ರಿಯೆಗಳ ಕುರಿತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪೆನ್ನಿನಾ ಅವರು ನರ್ಸಿಂಗ್ ಪದವಿಯ ಪ್ರಯೋಜನಗಳ ಕುರಿತು ಮಾತನಾಡಿದರು. ಉಪನ್ಯಾಸಕ ಡಾ. ರಾಘವೇಂದ್ರ ಹಾರಣಗೇರಾ ಅವರು ನರ್ಸಿಂಗ ಪದವಿ ಅಧ್ಯಯನದಲ್ಲಿ ಸಮಾಜಶಾಸ್ತ್ರ ಜ್ಞಾನದ ಮಹತ್ವ ಕುರಿತು ಹೇಳಿದರು.
ಈ ಸಂದರ್ಭದಲ್ಲಿ ಅನಿತಾರೆಡ್ಡಿ, ಡಾ. ಶರಣರಡ್ಡಿ, ಡಾ. ಶಿವರಾಯ. ಡಾ. ಜಲಪಾ ಚೋಪ್ರಾ, ಉದಯ ಪಾಟೀಲ ಹಾಗೂ ವಿವಿಧ ವಿಭಾಗದ ತಜ್ಞ ವೈದ್ಯರು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.