
ದಿನಕ್ಕೊಂದು ಕಥೆ
ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ?
ಶ್ರಿರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸಕ್ಕೆಂದು, ಅಯೋಧ್ಯೆಯಿಂದ ಹೊರಟು, ಗುಹನಿಂದ ಗಂಗೆಯನ್ನು ದಾಟಿ, ಮುಂದೆ ಸಾಗಿ, ದಟ್ಟಡವಿಯನ್ನು ಪ್ರವೇಶಿಸಿದರು. ನಡೆದು ದಣಿದ ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು. ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು ಕಾಣಿಸಲಿಲ್ಲ. ದೂರ ದೂರದವರೆಗೆ ಬರೀ ಕಾಡೇ ಕಾಣುತ್ತಿತ್ತು. ಆಗ ಶ್ರೀ ರಾಮ ವಿಧಿಯನ್ನು ಪ್ರಾರ್ಥಿಸಿ, “ಹೇ, ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ, ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು” ಎಂದು ಬೇಡಿಕೊಂಡ.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆ “ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ. ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು. ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ” ಎಂದು ಹೇಳಿತು. ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು “ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು, ನಾನು ಹಾರುತ್ತ ನನ್ನ ಒಂದೊಂದೇ ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು. ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ” ಎಂದು ಹೇಳಿತು.
ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ. ಇಲ್ಲಾಗಿದ್ದೂ ಅದೇ. ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ, ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು “ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ, ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ. ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ” ಎಂಬ ಭಾವನೆ ಮೂಡಿತು.
ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ “ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು. ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ ಧರಿಸುವೆನು” ಎಂದು ಹೇಳಿದ.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು. ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದ. ಆನಂತರ ಮುಂದಿನ ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದ.
ನೀತಿ :– ಋಣ ತೀರಿಸಲು, ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು. ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ. ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ? ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡಿ.
🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882, 9845763534.