ಮೊದಲ ಸಮ್ಮಿಲನದ ಸುಮಧುರ ಗಳಿಗೆಯ ‘ಹೋಳಿಗೆ’ ಸವಿಯೋಣ ಬಾರೇ…
ಬ್ಯೂಟಿಫುಲ್ ಬೆಡಗಿ ಮತ್ತು ಅಮಾವಾಸ್ಯೆಯ ಕಾರ್ಗತ್ತಲು
ಗೆಳತಿ, ಅದು ನನ್ನ ಕೊನೆ ಉಸಿರಿರೋವರೆಗೂ ಎಂದೂ ಮರೆಯದ ಸಕ್ಕರೆ ಕ್ಷಣ. ಆ ಸುಂದರ ಸಮಯವೇ ನಮ್ಮ ಪ್ರೀತಿಯ ಹುಟ್ಟಿಗೆ ಕಾರಣ. ಅರೇ, ನಿನ್ನ ಗೆಳತಿಯ ಮದುವೆಯಲ್ಲಿ ಅದೆಷ್ಟು ನಲಿವಿನಿಂದ ಓಡಾಡುತ್ತಿದ್ದೆ ನೀನು. ನೀನೇ ಮಧುವಣಗಿತ್ತಿಯ ಖಾಸಾ ತಂಗಿ ಅಂದುಕೊಂಡಿರಬೇಕು ಜನ. ಅಬ್ಬಾ… ಪಾದದ ತನಕ ಇಳಿಬಿಟ್ಟಿದ್ದ ದಟ್ಟ ಹಸಿರು ಬಣ್ಣದ ಲಂಗ, ಮೇಲೆ ಗುಲಾಬಿ ಮೇಲುದ. ಆ ಸವಿಸಂಜೆಯ ಕೆಂಬಿಸಿಲು ನಿನ್ನ ನುಣುಪಾದ ಕೆನ್ನೆಗೊಂದು ಮುತ್ತಿಟ್ಟು ಕಣ್ಣಿಗೆ ಮುತ್ತಿಡುವಷ್ಟರಲ್ಲಿ ನೀನು ಒಂದೇ ಒಂದು ಕಣ್ಣನ್ನು ಮುಚ್ಚಿ ತೆರೆದೆಯಲ್ಲ ಆಗಲೇ ನನ್ನಲ್ಲಿ ಪ್ರೀತಿಯ ಮಿಂಚು ಹೊಳೆದದ್ದು…
ಉದ್ದನೆಯ ಕಿವಿ, ಎದ್ದು ಕಾಣುವ ಗಿಣಿ ಮೂಗು, ಅರಳು ತಾವರೆಯಂತ ಕಣ್ಣು, ಮಾಟದ ಸುಳಿ ಹುಬ್ಬು, ಹುಣ್ಣಿಮೆ ಚಂದ್ರನಂಥ ಹಣೆ, ಹಣೆಯ ನಡುವೆ ಕೆಂಬೆಟ್ಟು ಆಹಾ… ಕೊರಳಲ್ಲಿ ಧರಿಸಿದ್ದ ಚಿನ್ನದ ಚೆಲುವು ಮೈಯೆಲ್ಲಾ ಬಂಗಾರದ ಪ್ರಭಾವಳಿ ಬಿಡಿಸಿತ್ತು. ಕೋಮಲವಾದ ಕೈಗಳು, ಮಲ್ಲಿಗೆ ಸಿಂಗಾರದ ತಲೆಮುಡಿ, ಚಂದನದ ಅಲಂಕಾರ, ಮೊಳಕೈವರೆಗೆ ಬಣ್ಣದ ಬಳೆಗಳು. ರಾಮನ ಬಿಲ್ಲಿನಂತಿರುವ ಸಿಂಹ ನಡು. ಈಗ ತಾನೇ ಯೌವನಕ್ಕೆ ಎಂಟ್ರಿ ಆಗಿರುವ ತಾಜಾ ತರುಣಿ. ಎಂಥವರನ್ನೂ ಮೈಮರೆಸುವ ರೂಪಶ್ರೀ.
ಎಂಥ ಅಂದ ಎಂಥ ಚಂದ
ಶಾರದಮ್ಮ
ನಿನ್ನ ನೋಡಲೆರಡು ಕಣ್ಣು ಎನಗೆ
ಸಾಲದಮ್ಮ
ಕತ್ತಲು ಕವಿದಂತೆಲ್ಲ ಬಂಗಾರದ ಬಣ್ಣದ ಬೆಳಕು ಬೀರುವ ವಿದ್ಯುತ್ ದೀಪದ ಕಿರಣಗಳೂ ನಿನ್ನ ಬೆನ್ನು ಬಿದ್ದದ್ದು ಕಂಡು ನನಗೆ ಪರಮಾಶ್ಚರ್ಯ. ಆ ನಿರ್ಜೀವ ವಿದ್ಯುತ್ ದೀಪಗಳಿಗೂ ಈ ರೂಪಶ್ರೀಯ ಕಂಡು ಜೀವ ಬಂದು ಬಿಟ್ಟಿತ್ತಲ್ಲ!. ಮನದೊಳಗಿನ ಬೇಗುದಿ ತಡೆದುಕೊಳ್ಳಲಾಗಲೇ ಇಲ್ಲ ಕೊನೆಗೂ ಗೆಳೆಯನೊಬ್ಬನಿಗೆ ಹೇಳಿಯೇ ಬಿಟ್ಟೆ. ಎಂಥ ಚಲುವಿನ ರಾಶಿ ಕಣೋ ಆ ತಾಜಾ ಬ್ಯೂಟಿ… ಸರಿ ಸರಿ ಮದುವೆ ಮನೇಲಿರೋ ಮೇಕಪ್ ರಾಣೀಯರೆಲ್ಲಾ ಬ್ಯೂಟಿಫುಲ್ಲಾಗೇ ಕಾಣೋದು ಬೆಳಗ್ಗೆ ನೋಡುವಂತೆ ಇರು ಬಣ್ಣ ಬದಲಾಗಿರುತ್ತೆ. ಈಗ ಮಲಗೋಣ ಬಾ ಅಂತ ಕರೆದುಕೊಂಡು ಹೋದ. ಆದರೆ ನನಗೋ ರಾತ್ರಿಯಿಡೀ ನಿನ್ನದೇ ಧ್ಯಾನ.
ನೇಂದ್ ಚುರಾಯಿ ಮೇರಿ
ಕಿಸನೇ ಓ ಸನಮ್ .. ತುನೇ
ಚೈನ್ ಚುರಾಯಿ ಮೇರಾ
ಕಿಸನೇ ಓ ಸನಮ್… ತುನೇ
ಹೊ ದಿಲ್ ಮೆ ಮೇರಿ ರಹೆನೇ ವಾಲಿ ಕೌನ್ ಹೈ
ತು ಹೈ…
ಬೆಳಗ್ಗೆ ಎದ್ದಾಕ್ಷಣ ಅವನೇ ಕರೆದು ಅಲ್ಲೊಮ್ಮೆ ನೋಡು ನಿನ್ನ ಸುಂದರಿಯ ನಿಜವಾದ ಮೈಬಣ್ಣ ಅಂತ ಹೇಳಿದ ವ್ಯಂಗ್ಯವಾಗಿ. ನನಗೋ ಕೋಪ ನೆತ್ತಿಗೇರಿತು. ಬಣ್ಣದಲ್ಲೇನಿದೆ ಕಣೋ ಅವಳ ಲಕ್ಷಣವನ್ನೊಮ್ಮೆ ನೋಡು ಅಂದೆ. ಆದರೂ ಕಪ್ಪು ಕಪ್ಪೇ ಕಣೋ ಮಾರ್ಕೇಟ್ ಇಲ್ಲ. ಬ್ರೈಟ್ ಆಗಿರೋರನ್ನು ನೋಡಿಕೋ ಅಂತ ರೇಗಿಸಿದ. ಆದರೆ, ನನ್ನ ಅಂತರಾತ್ಮ ಮಾತ್ರ ಬೇರೆಯೇನನ್ನೋ ಹೇಳತೊಡಗಿತು. ಈ ರೂಪರಾಶಿಯನ್ನು ಸೃಷ್ಟಿಸಿದ ಬ್ರಹ್ಮ ಮೈಮರೆತು ಅಮಾವಾಸ್ಯೆಯ ಕಡುಗತ್ತಲಲ್ಲಿ ಈ ಬಾಲೆಯ ಧರೆಗಿಳಿಸಿರಬೇಕು. ನಮ್ಮ ಅನುಪಸ್ಥಿತಿಯಲ್ಲಿ ಅಪರೂಪದ ಚೆಲುವೆ ಭೂಮಿಗಿಳಿದು ಬಿಟ್ಟಳಲ್ಲ ಅಂತ ಸೂರ್ಯ-ಚಂದ್ರರು ಬೇಜಾರಾಗಿರಬೇಕು. ಅದಕ್ಕೆ ಸೂರ್ಯ-ಚಂದ್ರರ ಬೆಳಕು ಕಾಣದೆ ಭುವಿಗಿಳಿದ ಚೆಲುವ ರಾಶಿ ಕೊಂಚ ಕಪ್ಪಾಗಿದೆ ಅಷ್ಟೆ! ಆದರೆ ಈ ಬ್ಲಾಕ್ ಬ್ಯೂಟಿಗೆ ಸಾಟಿ ಯಾರಿಲ್ಲ ಬಿಡು… anyway i love you always blacky…!
– ಸದಾ ನಿನ್ನವ
samdhoor prema