ಕಥೆಪ್ರಮುಖ ಸುದ್ದಿ

ವಿಭಜನೆಯ ಬದಲು ಐಕ್ಯತೆಯ ಸೂತ್ರವನ್ನು ಅಳವಡಿಸಿಕೊಳ್ಳಿ

ದಿನಕ್ಕೊಂದು ಕಥೆ ನಿಮ್ಮ vinayavani.com ನಲ್ಲಿ ಓದಿ

ದಿನಕ್ಕೊಂದು ಕಥೆ

ವಿಭಜನೆಯ ಬದಲು ಐಕ್ಯತೆಯ ಸೂತ್ರವನ್ನು ಅಳವಡಿಸಿಕೊಳ್ಳಿ

ವಿಶಾಲವಾದ ಈ ಪ್ರಪಂಚದಲ್ಲಿ ನಾನಾ ಬಗೆಯ ವಿಭಿನ್ನ ಸ್ವರೂಪ, ಗುಣ, ಸ್ವಭಾವಗಳ ಮನುಷ್ಯರು, ಪಶು-ಪಕ್ಷಿಗಳನ್ನು ನಾವು ಕಾಣುತ್ತೇವೆ. ಈ ಭಿನ್ನತೆಗಳಿಗೆ ಮೂಲ ಕಾರಣವೇನು ಎಂಬ ಜಿಜ್ಞಾಸೆ ಬಲು ಹಳೆಯದು. ಇದರ ಸುಳಿವು ಒಂದು ಪ್ರಾಚೀನ ಗುರುಕುಲದ ಸಂವಾದದಲ್ಲಿ ಅಡಗಿದೆ.

ಅಯೋಧ್ಯೆಯ ಬಳಿಯಿದ್ದ ಆ ಗುರುಕುಲದಲ್ಲಿ, ಜ್ಞಾನತೃಷ್ಣೆಯಿಂದ ಕೂಡಿದ ಶಿಷ್ಯನೊಬ್ಬ ಆಚಾರ್ಯರ ಬಳಿ ಒಂದು ಗಂಭೀರ ಪ್ರಶ್ನೆಯನ್ನು ಮಂಡಿಸಿದನು:
“ಗುರುದೇವ, ಈ ಜಗತ್ತಿನ ಎಲ್ಲ ಜೀವಿಗಳೂ ಹುಟ್ಟು, ಬೆಳೆವಣಿಗೆ, ಸುಖ-ದುಃಖ, ಮರಣಗಳನ್ನು ಅನುಭವಿಸುತ್ತವೆ. ಆದರೆ ಮನುಷ್ಯರಲ್ಲಿ ಮಾತ್ರ ಸಾಧು, ಜ್ಞಾನಿ, ಕಳ್ಳ, ದುಷ್ಟ, ಕ್ರೂರ – ಹೀಗೆ ವೈವಿಧ್ಯತೆ ಏಕೆ? ಬೇರೆ ಬೇರೆ ಜಾತಿ, ಮತ, ಪಂಥಗಳ ವಿಭೇದಗಳು ಮಾನವರಲ್ಲಿ ಮಾತ್ರ ಏಕೆ ಕಂಡುಬರುತ್ತವೆ?” ಎಂದು ಕೇಳಿದ.

ಗುರುಗಳು ಮುಗುಳ್ನಗುತ್ತಾ “ಶಿಷ್ಯನೇ, ನೀನು ಕೇಳಿದ ಪ್ರಶ್ನೆಯ ಮೂಲವೆಲ್ಲ ಮನುಷ್ಯನಲ್ಲಿರುವ ‘ಬುದ್ಧಿ’. ಈ ಬುದ್ಧಿಯಿಂದಾಗಿ ಪ್ರಾಣಿಗಳಿಗೆ ಸಾಧ್ಯವಿಲ್ಲದ್ದನ್ನು ಮನುಷ್ಯ ಸಾಧಿಸಬಲ್ಲ. ಇದೇ ಬುದ್ಧಿ ಸರಿಯಾದ ದಾರಿಯಲ್ಲಿ ಉಪಯೋಗವಾದರೆ ಪಂಡಿತ, ಜ್ಞಾನಿ, ತಪಸ್ವಿಯಾಗಲೂ, ದುರುಪಯೋಗವಾದರೆ ಕಳ್ಳ, ದುಷ್ಟ, ಮೋಸಗಾರನಾಗಲೂ ಸಹಾಯಕವಾಗುತ್ತದೆ.” ಉತ್ತರಿಸಿದರು.

ಗುರುಗಳು ಮುಂದುವರೆದು “ಬುದ್ಧಿಯ ಸದುಪಯೋಗದಿಂದ ಮನುಷ್ಯನು ಸಾರ್ಥಕ ಜೀವನ ನಡೆಸಬಲ್ಲ. ಆದರೆ ದುರದೃಷ್ಟವಶಾತ್, ಅವನು ಬುದ್ಧಿಯನ್ನು ವಿಭೇದಗಳನ್ನು ಬೆಳೆಸಿಕೊಳ್ಳಲು, ಜಾತಿ-ಮತ-ವೃತ್ತಿಗಳ ಹೆಸರಿನಲ್ಲಿ ಭೇದ ಉಂಟುಮಾಡಲು ಬಳಸಿಕೊಳ್ಳುತ್ತಾನೆ. ಬುದ್ಧಿಯನ್ನು ಒಂದುಗೂಡಿಸುವ ‘ಐಕ್ಯದ ಸೂತ್ರದ’ ಬದಲು ‘ವಿಭಜನೆಯ ಸಾಧನವಾಗಿ’ ಮಾರ್ಪಡಿಸಿಕೊಂಡಿದ್ದಾನೆ.” ಎಂದು ಉತ್ತರಿಸಿದರು.

ಇತರ ಪ್ರಾಣಿಗಳು ಸಹಜವಾಗಿ ಒಗ್ಗಟ್ಟಿನಲ್ಲಿ ಬಾಳುತ್ತವೆ. ಮನುಷ್ಯನು ಮಾತ್ರ ತನ್ನ ಬುದ್ಧಿಯ ಸದ್ಬಳಕೆಯಿಂದ ಆ ಐಕ್ಯತೆ ಮತ್ತು ಸಾರ್ಥಕತೆಯನ್ನು ಗ್ರಹಿಸಬೇಕು. ಅದು ಅವನ ಪರಮ ಕರ್ತವ್ಯ.

ನೀತಿ :– ಬುದ್ಧಿ ಮನುಷ್ಯನ ಗುಣ-ದೋಷಗಳ ಮೂಲ. ಅದರ ಸದ್ವಿನಿಯೋಗವೇ ಸಾರ್ಥಕ ಜೀವನದ ಮಾರ್ಗ. ನಮ್ಮ ಬುದ್ಧಿಯನ್ನು ಶಾಂತಿ, ಐಕ್ಯ ಮತ್ತು ಸಾರ್ಥಕತೆಗಾಗಿ ಬಳಸೋಣ.

🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882, 9845763534.

Related Articles

Leave a Reply

Your email address will not be published. Required fields are marked *

Back to top button