ದುರ್ಯೋಧನ ನೀತಿ ಅನುಸರಿಸುತ್ತಿರುವ ಸಿಎಂ- ಎಚ್.ವಿಶ್ವನಾಥ ಕಿಡಿ
ಸಿಎಂ ವಿರುದ್ಧ ಮತ್ತೆ ಗುಡುಗಿದ ವಿಶ್ವನಾಥ
ಮೈಸೂರು: ಎಲ್ಲದ್ದಕ್ಕೂ ನಾನು, ನಾನು ಅನ್ನೋದು, ನನ್ನನ್ನು ಬಿಟ್ಟರೆ ಮತ್ಯಾರಿದ್ದಾರೆ ಅನ್ನೋ ದುರಾಹಂಕಾರದ ಸಿಎಂ ಸಿದ್ರಾಮಯ್ಯ ಅವರಲ್ಲಿದೆ. ಮುಂಬರುವ ದಿನಗಳಲ್ಲಿ ಅದಕ್ಕೆ ಕಾಾಲವೇ ಉತ್ತರಿಸಲಿದೆ ಎಂದು ಮಾಜಿ ಸಚಿವ , ಜೆಡಿಎಸ್ ಮುಖಂಡ ಎಚ್.ವಿಶ್ವನಾಥ ಹೇಳಿದ್ದಾರೆ.
ನಗರದಲ್ಲಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಮೈಸೂರಿನಲ್ಲಿದ್ದೇವೆ ಎಂಬುದು ಸಿಎಂ ಅವರಿಗೆ ಅರ್ಥೈಸಬೇಕಿದೆ. ಸಿಎಂ ಅವರ ದುರ್ಯೋಧನ ನೀತಿಗೆ ಕಾಲವೇ ಉತ್ತರಿಸಲಿದೆ. ಅದಕ್ಕಾಗಿ ಶ್ರೀನಿವಾಸ ಪ್ರಸಾದ ನಾವು ಇಂದು ಭೇಟಿಯಾಗಿದ್ದೇವೆ ಎಂದರು.
ಮೈಸೂರು ಭಾಗದ ರಾಜಕಾರಣ ಶುದ್ಧಿಯಾಗಬೇಕಿದೆ. ಆ ನಿಟ್ಟಿನಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ನಂಜನಗೂಡಿನಲ್ಲಿ ಕಾಂಗ್ರೆಸ್ ಗೆದ್ದಿರುವುದು ಸಚಿವ ಮಹಾದೇವಪ್ಪನವರ ಖಾಸಗಿ ಖಜಾನೆಯಿಂದ ಎಂಬುದು ರಾಜ್ಯಕ್ಕೆ ಗೊತ್ತಿರುವ ವಿಷಯ. ನಾವು ಮಾತನಾಡಿದರೆ, ದ್ವೇಷದ ರಾಜಕೀಯ, ತಾವು ಮಾತನಾಡಿದರೆ ಪ್ರೀತಿಯ ರಾಜಕೀಯನಾ ಎಂದು ಸಿಎಂಗೆ ಪ್ರಶ್ನೆ ಹಾಕಿದ ಅವರು, ಕಾಂಗ್ರೆಸ್‍ನಲ್ಲಿ ಸಿದ್ಧಾಂತ, ತತ್ತ್ವಗಳಿಗೆ ಎಂದೋ ತಿಲಾಂಜಲಿ ಇಡಲಾಗಿದೆ ಎಂದರು.
ಶ್ರೀನಿವಾಸ ಪ್ರಸಾದ ಮತ್ತು ಎಚ್.ವಿಶ್ವನಾಥ ಇಬ್ಬರೂ ಹಿರಿಯ ಪ್ರಭಾವಿ ರಾಜಕಾರಣಿಗಳಾಗಿದ್ದು, ಈ ಹಿಂದೆ ಸಿದ್ರಾಮಯ್ಯನವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಿದ್ರಾಮಯ್ಯ ಅಗತ್ಯತೆ ಕುರಿತು ಕಾಂಗ್ರಸ್ ಪಕ್ಷದ ಕೇಂದ್ರ ನಾಯಕರಿಗೆ ಇವರೇ ಮನವರಿಕೆ ಮಾಡಿದ್ದರು ಎಂದರೆ ತಪ್ಪಾಗಲಾರದು.
ಆದರೆ ಪ್ರಸ್ತುತ ಈ ಇಬ್ಬರು ನಾಯಕರು ಸಿಎಂಗೆ ಬದ್ಧ ರಾಜಕೀಯ ವಿರೋಧಿಗಳಾಗಿರುವ ಸಂಗತಿ ಎಲ್ಲರಿಗೂ ಗೊತ್ತು. ಪ್ರಸ್ತುತ ವಿಶ್ವನಾಥ ಅವರು ಜೆಡಿಎಸ್ ಪಕ್ಷದಲ್ಲಿದ್ದರೆ, ಶ್ರೀನಿವಾಸ ಪ್ರಸಾದ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇಂದು ಈ ಇಬ್ಬರು ನಾಯಕರ ಭೇಟಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಬೇಧ ಮರೆತು ತಮ್ಮ ಬದ್ಧ ವೈರಿಯನ್ನು ಮಣಿಸಲು ರಣತಂತ್ರ ರೂಪಿಸುತ್ತಿದ್ದಾರೆಯೇ ಎಂಬ ಮಾತುಗಳು ಸಹಜವಾಗಿವೆ. ಈ ಬಗ್ಗೆ ಕಾಂಗ್ರೆಸ್‍ನಲ್ಲಿ ಕೂಡ ಚರ್ಚೆ ಶುರುವಾಗಿದೆ. ಸಿಎಂ ಹಿಂಬಾಲಕರು ಈ ಸುದ್ದಿ ತಿಳಿದು ಮಾಹಿತಿ ಕಲೆ ಹಾಕಲು ಶತಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸುದ್ದಿ ನಗರದಲ್ಲಿ ಹರಡಿದೆ..?