ಆರೋಗ್ಯ ಕೇಂದ್ರದಲ್ಲಿ ಹೋಮ ಹವನ: ‘ಪ್ರಗತಿಪರ’ ಸರ್ಕಾರಕ್ಕೆ ವ್ಯಂಗ್ಯ?
ಆರೋಗ್ಯ ಕೇಂದ್ರದಲ್ಲಿ ಹೋಮ ಹವನ:ಪ್ರಗತಿಪರ ಸಿದ್ಧಾಂತ ಹೊಂದಿದ್ದ ಸರ್ಕಾರಕ್ಕೆ ಇಕ್ಕಟ್ಟು
ರಾಜ್ಯ ಸರ್ಕಾರ ಪ್ರಗತಿಪರ ನಿಲುವಿನೊಂದಿಗೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಸಂಪುಟದ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ಹೆಚ್.ಆಂಜನೇಯ ಸೇರಿ ಹಲವರು ಮೌಢ್ಯ ಆಚರಣೆಗಳನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಸಾಕಷ್ಟು ಬಾರಿ ಹಲವು ವೇದಿಕೆಗಳಲ್ಲಿ ಮೌಢ್ಯಾಚರಣೆ, ಹೋಮ ಹವನಗಳ ಕುರಿತು ಟೀಕಿಸಿದ್ದಾರೆ. ಆದರೆ, ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಅವರ ಕ್ಷೇತ್ರದ ಆರೋಗ್ಯ ಕೇಂದ್ರವೊಂದರಲ್ಲಿ ಅರ್ಚಕರನ್ನು ಕರೆಸಿ ಹೋಮ, ಹವನ ಮಾಡಲಾಗಿದೆ. ಅಲ್ಲದೆ ಹಾಲು ಉಕ್ಕಿಸಿ ಗೋವು ಪ್ರವೇಶಿಸುವ ಸಾಂಪ್ರದಾಯಿಕ ಆಚರಣೆಯೂ ನಡೆದಿದೆ.
ಹೌದು..ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದ ಪ್ರಾಥಾಮಿಕ ಆರೋಗ್ಯ ಕೇಂದ್ರವನ್ನು ಅಕ್ಟೋಬರ್ 09ರಂದು ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಉದ್ಘಾಟಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ಉದ್ಘಾಟನೆಯಾದ ಬಳಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಸೇರಿ ಆರೋಗ್ಯ ಕೇಂದ್ರದಲ್ಲಿ ಹೋಮ ಹವನ ನಡೆಸಿದ್ದಾರೆ ಎನ್ನಲಾಗಿದೆ. ಕೇಂದ್ರದ ಹೊರಭಾಗದಲ್ಲಿ ನೂತನ ಕಟ್ಟಡ ನಿರ್ಮಾಣ ಆಗಿರುವ ಕಾರಣ ವಿಶೇಷ ಶಾಂತಿ ಪೂಜೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಆರೋಗ್ಯ ಕೇಂದ್ರದಲ್ಲಿ ನಡೆದ ಪೂಜೆಯ ಫೋಟೋಗಳು ಈಗ ವೈರಲ್ ಆಗಿವೆ.
ಇದು ಪ್ರಗತಿಪರ ನಿಲುವಿನ ಸರ್ಕಾರದ ಆಡಳಿತಕ್ಕೆ ವ್ಯಂಗ್ಯ ಮಾಡಿದಂತಾಗಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.