ಗಣಪತಿ ಶಿವ-ಪಾರ್ವತಿಯ ಪುತ್ರ ಅಲ್ಲ.! ಮತ್ತೆ ಯಾರ ಪುತ್ರ,? ನಿಡುಮಾಮಿಡಿಶ್ರೀ ಹೇಳಿದ್ದೇನು.?
ಶಿವ ಅವೈದಿಕ ಸಂಸ್ಕೃತಿಯ ಮೂಲ ನಾಯಕ
ಮೈಸೂರಃ ನೀವು ನಂಬಿದಂತೆ ಅಥವಾ ನಂಬಿಸಿರುವಂತೆ ಗಣಪತಿ ಪಾರ್ವತಿಯ ಮಗನಲ್ಲ. ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ಮಗ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಪುರಭವನದಲ್ಲಿ ದೇಶದ ಮೂಲ ನಿವಾಸಿಗಳ ಸಮಿತಿವತಿಯಿಂದ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್ಯ ಮತ್ತು ದ್ರಾವಿಡರ ನಡುವಿನ ಸಂಘರ್ಷ ತಪ್ಪಿಸಲು ಅಂದು ಶಿವ ಆರ್ಯರ ರಾಜ ದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿಯನ್ನು ಮದುವೆ ಆಗಿದ್ದ. ಆ ದಂಪತಿಗಳ ಮಗನೇ ಗಣಪತಿ. ಆದರೆ ವೈದಿಕರು ಇದನ್ನೆಲ್ಲ ತಮ್ಮ ಮನಬಂದಂತೆ ತಿರುಚಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಶಿವ ಅವೈದಿಕ ಸಂಸ್ಕೃತಿಯ ಮೂಲ ನಾಯಕ. ರಾವಣ, ಮಹಿಷಾಸುರ ಮತ್ತು ಬಲಿಚಕ್ರವರ್ತಿ ನೀವುಗಳು ತಿಳಿದಿರುವಂತೆ ದುಷ್ಟರಲ್ಲ. ಖಳನಾಯಕರೂ ಅಲ್ಲ. ಅವರು ಮಹಾನುಭಾವರು. ಆಗ ಇವರೆಲ್ಲರೂ ವೈದಿಕ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುತ್ತಿದ್ದರು. ಬಲವಾಗಿ ವಿರೋಧಿಸಿದ್ದರು. ಆ ಕಾರಣಕ್ಕೆ ರಾಕ್ಷಸ ಪಟ್ಟ ಕಟ್ಟಲಾಗಿದೆ ಎಂದು ಪ್ರತಿಪಾದಿಸಿದ ಅವರು ಮೂಲ ನಿವಾಸಿಗಳ ಸಂಸ್ಕೃತಿ ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀವು ರಾಜರು, ದೇವರು. ಆದರೆ ನಿಮ್ಮ ಸಮುದಾಯದವರು ಅಲ್ಲದವರನ್ನು ಯಾಕೇ ಅಸುರರು, ರಾಕ್ಷಸರು ಎನ್ನುತ್ತೀರಾ.? ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಕಮಲಮುಖಿಯರು, ಚಂದ್ರಮುಖಿಯರು ಎಂದು ಕರೆಯುತ್ತೀರಿ, ಆದರೆ, ನಿಮ್ಮದಲ್ಲದ ಸಮುದಾಯದ ಹೆಣ್ಣು ಮಕ್ಕಳನ್ನು ಶೂರ್ಪನಕಿಯರು, ಮಂಡೋದರಿ ಅಂತ ಯಾಕೇ ಕರೆಯುತ್ತೀರಿ ಎಂದು ಪ್ರಶ್ನಿಸಿದರು.
ನೀವು ಇರುವ ಜಾಗವನ್ನು ಸ್ವರ್ಗ ಎನ್ನುತ್ತೀರಿ. ಆದರೆ ಮೂಲ ನಿವಾಸಿಗಳು ವಾಸಿಸುವ ಜಾಗವನ್ನು ನರಕ ಎಂದು ಕರೆಯುತ್ತೀರಿ.? ಸನಾತನಿಗಳ ಈ ತಾರತಮ್ಯ ನೀತಿಯನ್ನು ನಾನು ಖಂಡಿಸುತ್ತೇನೆ, ಪ್ರಶ್ನೆ ಮಾಡುತ್ತೇನೆ. ನಿಮ್ಮನ್ನು ನೀವು ಗೌರವಿಸಿಕೊಳ್ಳಿ . ಆದರೆ ಮೂಲ ನಿವಾಸಿಗಳ ಸಂಸ್ಕೃತಿಯನ್ನು ಕೀಳಾಗಿ ನೋಡಬೇಡಿ, ಇತಿಹಾಸವನ್ನು ತಿರುಚುವ ಕೆಲಸ ಮಾಡುವುದು ಸರಿಯಲ್ಲ. ನೀವು ರಾಕ್ಷಸರು ಎನ್ನುವ ಮಹಾನ್ ನಾಯಕರು ದಮನಿತರ ದನಿಯಾಗಿ ಹೋರಾಟ ನಡೆಸಿದ್ದವರನ್ನು ಅವಮಾನಿಸೋದು ತಪ್ಪು ಎಂದು ನಿಡುಮಾಮಿಡಿ ಶ್ರೀಗಳು ಸನಾತನವಾದಿಗಳಿಗೆ ಎಚ್ಚರಿಕೆ ನೀಡಿದರು.