ಈಜಲು ತೆರಳಿದ್ದ ಮೂವರು ಬಾಲಕರು ಶವವಾಗಿ ಪತ್ತೆ!
ಈಜುಬಲ್ಲ ಮಕ್ಕಳು ಬದುಕಿ ಬರುತ್ತಾರೆಂದು ಕಾದಿದ್ದ ಪೋಷಕರಿಗೆ ಆಘಾತ!
ಚಿತ್ರದುರ್ಗಃ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿಯ ಕೆಂಪಮ್ಮನ ಕೆರೆಯಲ್ಲಿ ಶುಕ್ರವಾರ ಈಜಾಡಲು ಹೋಗಿ ನೀರುಪಾಲಾಗಿದ್ದ ಮೂವರು ಬಾಲಕರು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.ಹೆ ಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14), ಮಹಾಂತೇಶ್ (14) ನಿನ್ನೆ ಮದ್ಯಾಹ್ನ ಈಜಲು ತೆರಳಿದ್ದವರು ಸಂಜೆಯಾದರೂ ಮನೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದರು.
ಈ ವೇಳೆ ಕೆರೆ ಏರಿ ಮೇಲೆ ಮೂವರು ಬಾಲಕರ ಬಟ್ಟೆ ಇರುವುದು ಕಂಡುಬಂದಿತ್ತು. ಹೀಗಾಗಿ, ಅಗ್ನಿಶಾಮಕದಳ ಹಾಗೂ ಪೊಲೀಸ ಸಿಬ್ಬಂದಿ ನಿನ್ನೆ ಸಂಜೆಯಿಂದ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದರು.
ಆದರೆ, ಕತ್ತಲು ಕವಿದಿದ್ದರಿಂದ ಶವಪತ್ತೆ ಆಗಿರಲಿಲ್ಲ. ಇಂದು ಬೆಳಗ್ಗೆ ಮೂವರು ಮಕ್ಕಳ ಶವ ಪತ್ತೆಯಾಗಿವೆ. ಕೆರೆಯಲ್ಲಿ ಹೂಳು ತುಂಬಿತ್ತಲ್ಲದೆ ಜಾಲಿ ಕೂಡ ಬೆಳೆದಿತ್ತು. ಪರಿಣಾಮ ಈಜಲು ತೆರಳಿ ಮಕ್ಕಳು ಕೆರೆಯಲ್ಲಿದ್ದ ಜಾಲಿ ಮತ್ತು ಹೂಳಿನಲ್ಲಿ ಸಿಲುಕು ಸಾವನ್ನಪ್ಪಿದ್ದಾರೆ. ಕೆಂಪರಾಜ್ ಮತ್ತು ಕಾಂತರಾಜ್ ಈಜು ಬಲ್ಲವರಾಗಿದ್ದರು. ಪರಿಣಾಮ ಪೋಷಕರು ತಮ್ಮ ಮಕ್ಕಳು ಕೆರೆಯಲ್ಲಿ ಮುಳುಗಿರಲು ಸಾಧ್ಯವಿಲ್ಲ. ಬೇರೆಲ್ಲಾದರೂ ಇರಬೇಕು ಇಷ್ಟರಲ್ಲೇ ಮರಳಿ ಬರುತ್ತಾರೆಂದೇ ಆಸೆ ಇಟ್ಟುಕೊಂಡಿದ್ದರು. ಆದರೆ, ಮೂವರೂ ಮಕ್ಕಳ ಶವ ಒಂದೆಡೆ ಸಿಲುಕಿದ್ದು ಇಂದು ಬೆಳಗ್ಗೆ ಶವಪತ್ತೆಯಾಗಿವೆ. ಹೀಗಾಗಿ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಕಿನ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದ ಮನೆಗಳಲ್ಲೀಗ ನೀರವ ಮೌನ ಆವರಿಸಿದೆ. ದೀಪಾವಳಿ ಹಬ್ಬ ಬೆಳಕು ನೀಡಬೇಕಿದ್ದ ಇವರ ಪಾಲಿಗೆ ಕತ್ತಲಾವರಿಸಿದೆ.
ಈಜಲು ತೆರಳಿದ ಮಕ್ಕಳು ನೀರುಪಾಲಾದ ಬಗ್ಗೆ ತಿಳಿದು ಇಡೀ ಗ್ರಾಮ ದುಃಖದಲ್ಲಿ ಮುಳುಗಿದೆ. ಕುಟುಂಬಸ್ಥರ ಪಾಲಿಗೆ ಮಕ್ಕಳ ಸಾವಿನ ದುರಂತ ದೊಡ್ಡ ಆಘಾತವೇ ತಂದೊಡ್ಡಿದೆ. ಘಟನೆ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.