ಯಡಿಯೂರಪ್ಪನವರಿಗೆ ಆರೋಪ ಮಾಡುವ ಚಟವಿದೆಯಾ.? ಗೃಹ ಸಚಿವರು ಹೇಳಿದ್ದೇನು..?
ಬಿಜೆಪಿಗೆ ಆರೋಪ ಮಾಡುವುದು ಚಟವಾಗಿದೆಃ ಗೃಹ ಸಚಿವ ರಾಮಲಿಂಗಾರಡ್ಡಿ
ಯಾದಗಿರಿಃ ಬಿಜೆಪಿ ಮತ್ತು ಯಡಿಯೂರಪ್ಪನವರಿಗೆ ಆರೋಪ ಮಾಡುವುದು ಚಟವಾಗಿ ಬಿಟ್ಟಿದೆ ಅಂತ ಅನ್ಸುತ್ತೆ ಎಂದು ಗೃಹ ಸಚಿವ ರಾಮಲಿಂಗಾರಡ್ಡಿ ಯಾದಗಿರಿಯಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ರವಿವಾರ ನಗರದ ನೂತನ ಎಸ್ಪಿ ಕಚೇರಿ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ.ಶಿವಕುಮಾರ ಮತ್ತು ಸಿಎಂ ಸಿದ್ರಾಮಯ್ಯನವರ ಮೇಲೆ ಯಡಿಯೂರಪ್ಪನವರು ಕಲ್ಲಿದ್ದಲು ಹಗರಣ ಕುರಿತು ಕೋಟ್ಯಂತರ ರೂಪಾಯಿ ವ್ಯವಹಾರದಲ್ಲಿ ಕಮಿಷನ್ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದು, ಇದರಲ್ಲಿ ಯಾವುದೇ ಹುರಳಿಲ್ಲ. ಸಮರ್ಪಕ ದಾಖಲೆಗಳಿಲ್ಲದೆ ಆರೋಪಿಸುವುದು ಸರಿಯಲ್ಲ. ಒಟ್ಟಾರೆ ಸರ್ಕಾರವನ್ನು ಭ್ರಷ್ಟತೆಯ ಕೂಪದಲ್ಲಿ ತಳ್ಳಲು ಶತ ಪ್ರಯತ್ನ ನಡೆಸುತ್ತಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದು ಅಸಾಧ್ಯವಾದದು ಎಂದರು.
ಅಲ್ಲದೆ ಟಿಪ್ಪು ಜಯಂತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಗೊಂದಲವಿದೆ. ಅವರಲ್ಲಿಯೇ ಪ್ರತ್ಯೇಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ಪಷ್ಟತೆ ಇದ್ದರೆ ಯಡಿಯೂರಪ್ಪನವರು ಟಿಪ್ಟು ಜಯಂತಿ ಬಗ್ಗೆ ಹೇಳಿಕೆ ನೀಡಿ ಸ್ಪಷ್ಟ ಪಡಿಸಲು ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.
ಶೀಘ್ರದಲ್ಲಿ ಗೌರಿ ಹಂತಕರ ಬಂಧನ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಸುಳಿವು ಸಿಕ್ಕಿದೆ. ಆದರೆ ಮಾಧ್ಯಮಗಳ ಮುಂದೆ ಅದನ್ನು ಅನಾವರಣಗೊಳಿಸಲು ಆಗಲ್ಲ. ಹಂತಕರನ್ನು ಆದಷ್ಟು ಬೇಗ ಹಿಡಿಯುತ್ತೇವೆ ಎಂಬ ವಿಶ್ವಾಸ ನಮಗಿದೆ. ಕೊಲೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.