ಪೊಲೀಸ್ ಠಾಣೆಯ ಎದರು ಶಾಸಕರು ಧರಣಿ ನಡೆಸಿದ್ದೇಕೆ?
ನ್ಯಾಯ ಎಲ್ಲಿದೆ, ಎಲ್ಲಿದೆಯೋ ನ್ಯಾಯ…
ಬಳ್ಳಾರಿ: ಕೇಂದ್ರ ಸಚಿವರ ಪುತ್ರ ಎಂದು ಹೇಳಿಕೊಂಡು ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಗೆ ಯಾಮಾರಿಸಿದ್ದ ಆರೋಪಿ ದುಬಾರಿ ಕಾರನ್ನು ಪಡೆದಿದ್ದ. ದುಬಾರಿ ಕಾರು ರೇಜ್ ರೋವರನಲ್ಲಿ ಶಾಸಕರ ಚಾಲಕನೊಂದಿಗೆ ಹಂಪಿ ಸುತ್ತಿದ್ದ. ಬಳಿಕ ಶಾಸಕರ ಕಾರು ಕದ್ದೊಯ್ಯಲು ಯತ್ನಿಸಿದ್ದ. ಹೀಗಾಗಿ, ಅನುಮಾನಗೊಂಡು ವಿಚಾರಿಸಿದಾಗ ಆಂದ್ರ ಮೂಲದ ರಾಬಿನ್ ಮತ್ತು ಆತನ ಜತೆಗಿದ್ದವರು ವಂಚಕರೆಂದು ತಿಳಿದು ಬಂದಿತ್ತು. ಪರಿಣಾಮ ಆರೋಪಿಗಳನ್ನು ಕಮಲಾಪುರ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಆದರೆ, ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡಿಲ್ಲ. ಬದಲಾಗಿ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳುಹಿಸಿದ್ದಾರೆ ಎಂಬುದು ಶಾಸಕ ಆನಂದಸಿಂಗ್ ಮತ್ತು ಬೆಂಬಲಿಗರ ಆರೋಪ. ಪಿಎಸ್ಐ ಭೀಮನಗೌಡ್ ಆರೋಪಿಗಳೊಂದಿಗೆ ಶಾಮೀಲಾಗಿ ಬಿಟ್ಟು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಆನಂದಸಿಂಗ್ ಹಾಗೂ ಬೆಂಬಲಿಗರು ಕಮಲಾಪುರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ. ಪಿಎಸ್ಐ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ.
ಶಾಸಕರಿಗೆ ವಂಚಿಸಿದವರ ವಿರುದ್ಧವೇ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಕೆಲಹೊತ್ತು ಠಾಣೆಯಲ್ಲಿಟ್ಟುಕೊಂಡು ಬಿಟ್ಟು ಕಳುಹಿಸಿದ್ದಾರಂತೆ. ನ್ಶಾಯಕ್ಕಾಗಿ ಶಾಸಕರೇ ಬೀದಿಗಳಿದು ಧರಣಿ ನಡೆಸುವ ಸ್ಥಿತಿ ಬಂದಿದೆ. ಇನ್ನೂ ಜನಸಾಮಾನ್ಯರ ಗತಿಯೇನು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಹೀಗಾಗಿ, ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.