ಧರ್ಮಸ್ಥಳದ ದೇಗುಲದಲ್ಲಿ ವಸ್ತ್ರ ಬದಲಿಸ್ತಾರಂತೆ ನರೇಂದ್ರ ಮೋದಿ!?
ದಕ್ಷಿಣ ಕನ್ನಡದ ಬಹುತೇಕ ದೇಗುಲಗಳಿಗೆ ಪ್ರವೇಶಿಸಬೇಕೆಂದರೆ ಪುರುಷರು ಕಡ್ಡಾಯವಾಗಿ ಅಂಗಿಯನ್ನು ಕಳಚಲೇಬೇಕೆಂಬ ಸಂಪ್ರದಾಯವಿದೆ. ಅನೇಕ ಸಲ ಈ ನಿಯಮ ಗೊತ್ತಿಲ್ಲದವರು ದೇಗುಲ ಪ್ರವೇಶದ ಸಾಲಿನಲ್ಲಿ ನಿಂತಿರುತ್ತಾರೆ. ಆದರೆ ಗರ್ಭಗುಡಿ ಬಳಿ ತೆರಳುವ ವೇಳೆ ದೇಗುಲದ ಸಿಬ್ಬಂದಿ ಅವರಿಗೆ ಮೇಲಂಗಿ ಕಳಚುವಂತೆ ನಿರ್ದೇಶನ ನೀಡುತ್ತಾರೆ. ಅದರಿಂದ ಕೆಲವರಿಗೆ ಇರಿಸುಮುರಿಸು ಆಗುವುದೂ ಉಂಟು. ಆದರೆ, ಆ ನಿಯಮ ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುವಂಥದಲ್ಲ. ಬದಲಾಗಿ ನಾಳೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧರ್ಮಸ್ಥಳದ ಮಂಜುನಾಥ್ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಮೇಲಂಗಿ ಕಳಚಿ ಶಾಲು ಹೊದ್ದುಕೊಂಡು ಧರ್ಮಸ್ಥಳದ ಮಂಜುನಾಥಸ್ವಾಮಿಯ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಅಪ್ಪಟ ಸಂಪ್ರದಾಯವಾದಿ ಆಗಿರುವ ನರೇಂದ್ರ ಮೋದಿ ಧರ್ಮಸ್ಥಳದ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಲಿದ್ದಾರೆ. ಬಳಿಕ ದೇಗುಲದಲ್ಲಿ ನರೇಂದ್ರ ಮೋದಿ ವಸ್ತ್ರ ಬದಲಿಸಲಿದ್ದು ಈಗಾಗಲೇ ವಸ್ತ್ರ ಬದಲಿಸಲು ಸಹ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನಲಾಗಿದೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಜಿರೆಯ ರತ್ನವರ್ಮ ಹೆಗ್ಡೆ ಸ್ಟೇಡಿಯಂನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕಾರ್ಯಕ್ರಮ ನಡೆಯಲಿದ್ದು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ, ಬಿ.ಎಸ್ .ವೈ , ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಂಜುನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಧಾನಿ ಜೊತೆಗೆ ತಾವೂ ಸಹ ಮಂಜುನಾಥನ ದರ್ಶನ ಪಡೆಯುವುದಾಗಿ ದೇಗುಲದ ಸಿಬ್ಬಂದಿಗೆ ಬಿ.ಎಸ್.ವೈ ತಿಳಿಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಧರ್ಮಸ್ಥಳ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.