ಆಂದೋಲಾಶ್ರೀ ಬಂಧನ ಖಂಡಿಸಿ ಶಹಾಪುರದಲ್ಲಿ ಬೃಹತ್ ಪ್ರತಿಭಟನೆ
ಕಾವಿತೊಟ್ಟ ಸಂತರಿಗೆ ತಡವಿದ ಸರ್ಕಾರ ಸರ್ವನಾಶಃ ಶ್ರೀಗಳ ಆಕ್ರೋಶ
ಶಹಾಪುರಃ ನಾಡಿನ ಹಿಂದೂ ಸಾಮ್ರಾಟ ಆಂದೋಲಾದ ಕರುಣೇಶ್ವರ ಮಠದ ಪೀಠಾಧಿಕಾರಿ ಸಿದ್ಧೇಶ್ವರ ಶ್ರೀಗಳನ್ನು ಸುಖಾಸುಮ್ಮನೆ ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಅವರ ಹೆಸರು ಸಿಲುಕಿಸಿ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದು, ಇದರ ಹಿಂದೆ ಬಲವಾದ ರಾಜಕೀಯ ಕೈವಾಡವಿದೆ ಎಂದು ನಗರದ ಕುಂಬಾರಗೇರಿ ಮಠದ ಸೂಗುರೇಶ್ವರ ಶಿವಾಚಾರ್ಯರು ಆರೋಪಿಸಿದರು.
ಆಂದೋಲಾದ ಸಿದ್ಧೇಶ್ವರ ಶ್ರೀಗಳ ಬಂಧನ ಖಂಡಿಸಿ ನಗರದಲ್ಲಿ ತಾಲೂಕಿನ ವಿವಿಧ ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಂದೋಲಾದಲ್ಲಿ ಎರಡು ಕೋಮಿನ ಮಧ್ಯೆ ನಡೆದ ಗಲಾಟೆಗೆ ಆಂದೋಲಾ ಶ್ರೀಗಳನ್ನು ಹೊಣೆಗಾರನನ್ನಾಗಿ ಮಾಡಿರುವುದು ತರವಲ್ಲ. ದೇಶ ಮತ್ತು ದೇಶದ ಹಿಂದೂ ಬಾಂಧವರ ರಕ್ಷಣೆಗೆ ಅವರು ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದಾರೆ. ಅವರ ಏಳ್ಗೆ ಸಹಿಸದ ಕೆಲ ರಾಜಕೀಯ ವ್ಯಕ್ತಿಗಳು ಅವರನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಮುಗಿಸಲು ಅವರೇನು ಕುರಿಯೇ ಎಂದು ಪ್ರಶ್ನಿಸಿದ ಅವರು ಆಂದೋಲಾಶ್ರೀಗಳು ಈ ನಾಡಿನ ಹುಲಿ ಎಂದರು.
ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ದೇಶದ ಏಕತೆಗಾಗಿ ಮತ್ತು ಹಿಂದೂ ಸಮಾಜದ ರಕ್ಷಣೆಗಾಗಿ ಸದಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಓರ್ವ ಕಾವಿಧಾರಿ ಸ್ವಾಮಿಗಳಿಗೆ ವಿನಾಃಕಾರಣ ಕೊಲೆಯತ್ನ ಪ್ರಕರಣದಡಿ ಸಿಲುಕಿಸಿ ನೋವು ನೀಡಲಾಗುತ್ತಿದೆ. ಕಾಣದ ಕುಹಕಿ ರಾಜಕೀಯ ವ್ಯಕ್ತಿಗಳ ಬೆನ್ನಿಗೆ ರಾಜ್ಯ ಸರ್ಕಾರ ನಿಂತಿದ್ದು ಆಂದೋಲಾ ಸ್ವಾಮೀಜಿಗೆ ಜೈಲಿಗೆ ಕಳುಹಿಸುವ ಕುತಂತ್ರ ರೂಪಿಸಿದವರು ಸರ್ಕಾರ ಸಮೇತ ಸರ್ವನಾಶವಾಗಿ ಹೋಗುತ್ತಾರೆ.
ಸತ್ಯ ಯಾವತ್ತು ಬೆಂಕಿ ಇದ್ದಂತೆ. ಬೆಂಕಿಯನ್ನು ಮೀರಿದ್ದು ಈ ಕಾವಿಬಟ್ಟೆ. ಇದಕ್ಕೆ ಸರ್ಕಾರ ಬೆಂಕಿ ಇಡಲು ಬರುತ್ತದೆ ಅಂದರೆ ಕೆಲವೇ ತಿಂಗಳುಗಳಲ್ಲಿ ಚುನವಾಣೆ ಇದೆ ಆವಾಗ ಸಾರ್ವಜನಿಕರು, ಹಿಂದೂ ಬಾಂಧವರು ತಕ್ಕ ಪಾಠ ಕಲಿಸಲಿದ್ದಾರೆ. ಸರ್ಕಾರದ ಆಟಾಟೋಪ ಮಿತಿ ಮೀರಿದೆ. ಅಂತಹ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಮೀನು ಮಾಂಸ ತಿಂದು ಹೋಗಿದ್ದಲ್ಲದೆ ಉಡಾಫೆ ಮಾತಾನಾಡುತ್ತಾರೆ ಅಂದರೆ ಇವರ ಕಾಲ ಮುಗೀತು ಅಂತ್ಯ ಸಮೀಪಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಚಾಟಿ ಬೀಸಿದರು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆಂದೋಲಾ ಶ್ರೀಗಳನ್ನು ಬಿಡುಗಡೆಗೊಳಿಸಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ, ಹೋರಾಟ ನಡೆಯಲಿದೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಎಚ್ಚರಿಸಿದರು.
ಚರಬಸವೇಶ್ವರ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿತು. ನಂತರ ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ ವೆಂಕಣ್ಣಗೌಡ ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗುಂಬಾಳಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಮದ್ರಿಕಿ ಶೀಲವಂತ ಶಿವಾಚಾರ್ಯರು, ದೋರನಹಳ್ಳಿ ಹಿರೇಮಠದ ಚನ್ನವೀರ ಶಿವಾಚಾರ್ಯರು, ಫಕೀರೇಶ್ವರ ಮಠದ ಗುರುಪಾದ ಶ್ರೀ, ಬಿಲ್ಲಂಕೊಂಡಿ ಮಠದ ನಿಜಗುಣ ದೇವರು, ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು, ದಿಗ್ಗಿಯ ದೇವಯ್ಯ ಸ್ವಾಮಿಗಳು, ಲಕ್ಷ್ಮೀಪುರದ ಬಸವಲಿಂಗ ದೇವರು, ಸಗರದ ಮಡಿವಾಳೇಶ್ವರ ದೇವರು, ಸಗರನ ಸೋಮೇಶ್ವರ ಶ್ರೀ, ಕೆಂಭಾವಿಯ ಚನ್ನಬಸವೇಶ್ವರ ಶ್ರೀ, ಹತ್ತಿಗೂಡೂರ ಗಿರಿಮಲ್ಲ ಶ್ರೀಗಳು ಉಪಸ್ಥಿತರಿದ್ದರು
ವಿವಿಧ ಸಂಘಟನೆಗಳ ಮುಖಂಡರಾದ ಅರವಿಂದ ಉಪ್ಪಿನ್, ಅವಿನಾಶ ಗುತ್ತೇದಾರ, ಸುಧೀರ ಚಿಂಚೋಳಿ, ಸುನೀಲ್ ಮಾನು, ಬಸವರಾಜ ರತ್ತಾಳ, ಮಲ್ಲಿಕಾರ್ಜುನ ಮಲ್ಲಾಬಾದ, ಗೋಪಾಲ ಸುರಪುರಕರ್, ಅಯ್ಯಣಗೌಡ ಪಾಟೀಲ್, ಮಲ್ಲು ಬೊಮ್ಮನಳ್ಳಿ, ದೇವು ರಾಂಪೂರ, ಸಿದ್ದು ಆನೇಗುಂದಿ, ಬಸವರಾಜ ಶಿರವಾಳ, ವಿಶ್ವನಾಥ ಶಿರವಾಳ, ಉಮೇಶ ಜಾಕ್ರೆ, ಮಲ್ಲು ಕನ್ಯಾಕೋಳೂರ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರತಿಭಟನೆ ಸಂದರ್ಭದಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಿದರು. ಅಂಗಡಿ ಮುಂಗಟ್ಟು ಬಂದ್ ಮಾಡಿ ಸಹಕರಿಸಿದ ಎಲ್ಲಾ ವ್ಯಾಪಾರಸ್ಥರಿಗೆ ಇದೇ ಸಂದರ್ಭದಲ್ಲಿ ಶ್ರೀಗಳು ಧನ್ಯವಾದ ಅರ್ಪಿಸಿದರು.