ಗೋಮಾತೆ ದರ್ಶನ, ಪೂಜೆಯಿಂದ ದಾರಿದ್ರ್ಯ ದೂರ -ಮಹರ್ಷಿ ಆನಂದ ಗೂರೂಜಿ
ಶಹಾಪುರಃ ಗೋಶಾಲೆಗೆ ಭೇಟಿ ನೀಡಿದ ಡಾ.ಮಹರ್ಷಿ ಆನಂದ ಗೂರೂಜಿ
ಶಹಾಪುರಃ ಝೀ.ಟಿವಿಯಲ್ಲಿ ಬರುವ ಮಹರ್ಷಿ ದರ್ಪಣ ಖ್ಯಾತಿಯ ಡಾ.ಮಹರ್ಷಿ ಆನಂದ ಗೂರೂಜಿಯವರು ನಗರಕ್ಕೆ ಆಗಮಿಸಿದ್ದರು. ಇದೇ ವೇಳೆ ನಂದಿ ಬೆಟ್ಟದಲ್ಲಿರುವ ಗೋಶಾಲೆ ಬಗ್ಗೆ ತಿಳಿದು ಅಲ್ಲಿಗೆ ಭೇಟಿ ನೀಡಿದ ಗುರೂಜಿ ದಂಪತಿಗಳು ಗೋ-ಮಾತೆಗೆ ಸಾಂಪ್ರದಾಯಿಕ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಂದಿ ಬೆಟ್ಟದ ಪ್ರದೇಶದಲ್ಲಿ ಗೋಶಾಲೆ ಆರಂಭಿಸಿದ ಯುವಕ ಸಂಗಮೇಶ ಶಾಸ್ತ್ರೀಜಿ ನನ್ನ ಸಹೋದರರಿದ್ದಂತೆ. ಅವರ ಸಾರ್ಥಕ ಶ್ರಮ ಸಾವಿರಾರು ಜನರಿಗೆ ಉಪಯೋಗವಾಗಲಿದೆ. ಗೋವುಗಳು ವಾಸವಿದ್ದ ಪ್ರದೇಶ ಪವಿತ್ರವಾಗಿರುತ್ತದೆ.
ಪ್ರತಿ ಗೋಮಾತೆಯಲ್ಲಿ ಮುಕ್ಕೋಟಿ ದೇವರು ವಾಸವಿರುತ್ತಾರೆ ಎಂಬ ನಂಬಿಕೆ ಇದೆ. ಅದರಂತೆ ಈ ಪ್ರದೇಶ ಉತ್ತಮ ವಾತಾವರಣ ಹೊಂದಿದ್ದು ಮನಸ್ಸಿಗೆ ಮುದ ನೀಡುವ ಸ್ಥಳವಾಗಿದೆ. ಶಹಾಪುರಕ್ಕೆ ಆಗಮಿಸಿದ್ದಾಗ ಗೋಮಾತೆ ಪೂಜೆ ಸಲ್ಲಿಸುವ ಭಾಗ್ಯ ದೊರೆತಿರುವುದು ನಮ್ಮ ಭಾಗ್ಯ. ಮುಂದೆ ನಾನು ಈ ಭಾಗಕ್ಕೆ ಆಗಮಿಸಿದಾಗಲೆಲ್ಲಾ ಗೋಶಾಲೆಗೆ ಭೇಟಿ ನೀಡುತ್ತೇನೆ ಎಂದರು.
ಯುವಕ ಸಂಗಮೇಶನ ಶ್ರಮ ಫಲ ಆತನನ್ನು ಹೆತ್ತ ಅವರ ತಂದೆ ತಾಯಿಯರಿಗೆ ಸಲ್ಲಲ್ಲಿ. ಇದು ಪುಣ್ಯ ಕ್ಷೇತ್ರವಾಗಿ ಬೆಳೆಯಲಿ. ಗೋಮಾತೆಯ ಸುರಕ್ಷಿತ ಕೇಂದ್ರವಾಗಿ ಹೊರಹೊಮ್ಮಲಿ. ಇಲ್ಲಿ ಯಾವುದೇ ವಿಗ್ರಹ ಪೂಜೆ ಮಾಡುವ ಬದಲು ಸಾಕ್ಷಾತ್ ದೇವಾನುದೇವತೆಗಳೇ ಒಡಲಲ್ಲಿರುವ ಜೀವಂತ ದೇವತೆ ಗೋಮಾತೆ. ಗೋಮಾತೆಗೆ ನಿರಂತರ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ. ಇಲ್ಲಿಗೆ ಭೇಟಿ ನೀಡಿ ಗೋಮಾತೆಯ ದರ್ಶನ ಪಡೆದವರ ದಾರಿದ್ರ್ಯ ನಿವಾರಣೆ ಆಗುತ್ತದೆ. ಅಂತಹ ಮಹತ್ವದ ಶಕ್ತಿ ಈ ಸ್ಥಳದಲ್ಲಿದೆ ಎಂದರು. ಆಕಸ್ಮಿಕವಾಗಿ ಇಲ್ಲಿಗೆ ಭೇಟಿ ನೀಡಿದ್ದು ಅತೀವ ಆನಂದ ತಂದಿದೆ ಎಂದರು.
ಈ ಸಂದರ್ಭದಲ್ಲಿ ಗೋಶಾಲೆಯ ಸಂಗಮೇಶ ಶಾಸ್ತ್ರೀ, ಗುರು ಮಣಿಕಂಠ, ರಾಘವೇಂದ್ರ ಪತ್ತಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಮಂಜು ಬಿರೆದಾರ, ರಾಜೂ ಚಿಲ್ಲಾಳ, ಮಲ್ಲಿಕಾರ್ಜುನ ಬುಕಿಸ್ಟಗಾರ, ರವಿ ಮೋಟಗಿ, ಮಲ್ಲಿಕಾರ್ಜುನ ಆಲೂರ, ವೀರೇಶ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.