ಶಹಾಪುರದ ‘ಸುಲ್ತಾನ್’ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದೇಕೆ?
ಟಿಪ್ಪು ಕಾರ್ಯಕ್ರಮದಲ್ಲಿ ಜಾಣ್ಮೆಯ ಭಾಷಣ ಮಾಡಿದ ಗುರು ಪಾಟೀಲ್!
ಶಹಾಪುರಃ ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರೋದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಕೆಲ ಬಿಜೆಪಿ ಸಂಸದರು, ಶಾಸಕರು ಟಿಪ್ಪು ಜಯಂತಿಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರನ್ನೂ ನಮೂದಿಸದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದ್ರೆ, ಶಹಾಪುರ ಮತಕ್ಷೇತ್ರದ ಬಿಜೆಪಿ ಶಾಸಕ ಗುರು ಪಾಟೀಲ್ ಶಿರವಾಳ್ ಅವರು ಮಾತ್ರ ಇಂದು ನಗರದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಾರೆ.
ತಾಲೂಕು ಆಡಳಿತದಿಂದ ನಗರಸಭೆಯ ಆವರಣದಲ್ಲಿ ಆಯೋಜಿಸಿಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಗುರು ಪಾಟೀಲ್ ಚಾಲನೆ ನೀಡಿದರು. ಭಾರತೀಯ ಜನತಾ ಪಕ್ಷದಲ್ಲಿರುವ ಶಾಸಕ ಗುರು ಪಾಟೀಲ್ ಅವರು ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಪರಮಾಪ್ತರೂ ಹೌದು. ಹಾಗಿದ್ದರೂ ಪಕ್ಷದ ನಿಯಮ ಉಲ್ಲಂಘಿಸಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಗಮಸಿ ಚಾಲನೆ ನೀಡಿದ್ದು ಸಭಿಕರು ಹುಬ್ಬೇರಿಸುವಂತೆ ಮಾಡಿತು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತಿಗೆ ನಿಂತ ಶಾಸಕರು ಜಾಣ್ಮೆಯ ಭಾಷಣ ಮಾಡಿದರು. ಟಿಪ್ಪು ಸುಲ್ತಾನ್ ಕುರಿತು ಮಾತನಾಡುವಾಗ ಮಾತ್ರ ಟಿಪ್ಪು ಬಗ್ಗೆ ಉಪನ್ಯಾಸ ನೀಡಿದ ಡಾ.ರವಿ ಹೊಸಮನಿ ಅವರ ಮಾತುಗಳನ್ನೇ ಉಲ್ಲೇಖಿಸಿದರು. ಬಳಿಕ ಕೋಮು ಸೌಹಾರ್ಧತೆಯ ಮಾತುಗಳನ್ನಾಡಿದ ಅವರು ನಮ್ಮದು ವಿಶಿಷ್ಟವಾದ ನಾಡು. ನಮ್ಮ ಶಹಾಪುರವೊಂದು ಪುಣ್ಯ ಭೂಮಿ. ನಮ್ಮ ನಾಡಿನ ಚಂದಾ ಹುಸೇನಿ ಅವರ ಇತಿಹಾಸ ಬಹಳ ಜನರಿಗೆ ಗೊತ್ತಿಲ್ಲ. ದೇಶವಾಳಿದ ದೆಹಲಿ ಮೊಗಲರಿಗೆ ಆಡಳಿತಾತ್ಮಕ ನಿರ್ದೇಶನ ನೀಡಿದವರು ಗೋಗಿಯ ಚಂದಾ ಹುಸೇನಿ ಅವರು. ವಿಜಯಪುರದ ಕೊನೆಯ ಆದಿಲ್ ಷಾಯಿ ಆದ ಇಷುಬ್ ಆದಿಲ್ ಷಾಯಿ ಕೊನೆಯ ಗಳಿಗೆಯಲ್ಲಿ ಗೋಗಿಯಲ್ಲಿರುವ ನನ್ನ ಗುರುಗಳ ಬಳಿಯೇ ನನ್ನ ಸಮಾಧಿ ಮಾಡಿ ಎಂದು ತಿಳಿಸಿದ್ದರಂತೆ ಇಂಥ ಅದ್ಭುತವಾದ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಿದೆ ಎಂದರು.
ಧರ್ಮ ಪಂಥಗಳೆಂಬ ಬೇಧ ಬದಿಗೊತ್ತಿ ಸರ್ವರೂ ಸೌಹಾರ್ಧತೆಯ ಬದುಕಿನತ್ತ ಸಾಗಬೇಕಿದೆ ಎಂದ ಶಾಸಕ ಗುರುಪಾಟೀಲ್ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಬಹುಸಂಖ್ಯೆಯ ಜನ ಶಿಕ್ಷಣ ಪಡೆದಿಲ್ಲ, ಆರ್ಥಿಕವಾಗಿ ಸಬಲವಾಗಿಲ್ಲ. ಇದು ಬರೀ ಮಾತಿನಿಂದ ಸಾಧ್ಯವಾಗದು, ಈ ಬಗ್ಗೆ ಚಿಂತನೆ ನಡೆಯಬೇಕಿದೆ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ತಹಸೀಲ್ದಾರ ಸೋಮಶೇಖರ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಥಿತಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲಿಂ ಸಂಗ್ರಾಮ, ಸೈಯ್ಯದ್ ಖಾದ್ರಿ, ಉಪನ್ಯಾಸಕ ಡಾ.ರವಿ ಹೊಸಮನಿ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಮುಸ್ಲಿಂ ಸಮಾಜದ ಬಂಧುಗಳು, ಟಿಪ್ಪು ಸುಲ್ತಾನ ಅಭಿಮಾನಿಗಳು ಭಾಗವಹಿಸಿದ್ದರು.
ಇನ್ನು ಬಿಜೆಪಿ ಶಾಸಕ ಗುರು ಪಾಟೀಲ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಮತಬ್ಯಾಂಕಿಗಾಗಿ ಪಕ್ಷದ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮತ್ತೊಂದು ಕಡೆ ಪ್ರಗತಿಪರರು ಶಾಸಕರ ನಿಲುವು ಸರಿಯಾಗಿದೆ. ಬಿಜೆಪಿಯಲ್ಲಿದ್ದರೂ ಸಹ ಅವರು ಕೋಮುಭಾವನೆಯಿಂದ ಹೊರತಾಗಿರಲು ಪ್ರಯತ್ನಿಸಿದ್ದಾರೆ ಎದು ಮೆಚ್ಚಬೇಕಾದುದು ಎನ್ನುತ್ತಿದ್ದಾರೆ.
ಮಗದೊಂದು ಕಡೆ ಗುರು ಪಾಟೀಲ್ ಪರವಾಗಿರುವ ಬಿಜೆಪಿಯ ಕೆಲವರು ಸ್ಥಳೀಯ ರಾಜಕೀಯ ಉದ್ದೇಶದಿಂದ ಟಿಪ್ಪು ಜಯಂತಿಗೆ ಹೋಗಿದ್ದರೂ ಸಹ ಗುರು ಪಾಟೀಲ್ ಚಂದಾ ಹುಸೇನಿ ಅವರ ಕುರಿತು ಮಾತನಾಡುವ ಮೂಲಕ ತಮ್ಮತನವನ್ನು ಮೆರೆದಿದ್ದಾರೆ ಎಂದು ವಾದಿಸುತ್ತಿದ್ದಾರೆ. ಆದರೆ, ಗುರು ಪಾಟೀಲರ ಈ ನಿಲುವಿನ ಬಗ್ಗೆ ಬಿಜೆಪಿ ಯಾವ ಕ್ರಮ ಕೈಗೊಳ್ಳಲಿದೆ. ಬಿಜೆಪಿ, ಹಿಂದೂ ಸಂಘಟನೆಗಳು ಮತ್ತು ಟಿಪ್ಪು ವಿರೋಧಿಗಳು ಗುರು ಪಾಟೀಲ್ ವಿರುದ್ಧ ಮುನಿಸಿಕೊಳ್ಳಲಿದ್ದಾರೆಯೇ. ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಂ ಸಮುದಾಯ ಗುರು ಪಾಟೀಲ್ ಕೈಹಿಡಿಯಲಿದೆಯೇ ಎಂಬುದನ್ನು ಮುಂಬರುವ ಚುನಾವಣೆವರೆಗೆ ಕಾದು ನೋಡಬೇಕಿದೆ.