ಕಾಂಗ್ರೆಸ್ ಗೆ ಗುಡ್ ಬೈ ಹೇಳ್ತಾರಾ ಹಿರಿಯ ಶಾಸಕ ಡಾ. ಎ.ಬಿ.ಮಾಲಕರೆಡ್ಡಿ!
ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥ ಹೆಚ್ಚಿದೆ – ಶಾಸಕ ಡಾ.ಎ.ಬಿ.ಮಾಲಕರೆಡ್ಡಿ
ಯಾದಗಿರಿ ಮತಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಡಾ. ಎ.ಬಿ.ಮಾಲಕರೆಡ್ಡಿ ಪಕ್ಷ ತೊರೆಯುವ ಬಗ್ಗೆ ಅನೇಕ ಸಲ ಊಹಾಪೋಹಗಳು ಕೇಳಿಬರುತ್ತಲೇ ಇವೆ. ಈಗಾಗಲೇ ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಒಂದು ಸುತ್ತಿನ ಮಾತುಕತೆ ಆಗಿದೆ. ಇಷ್ಟರಲ್ಲೇ ಜೆಡಿಎಸ್ ಪಕ್ಷ ಸೇರಲಿದ್ದಾರೆ ಅಂತ ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಮಾತುಕತೆ ಆಗಿದ್ದು ಬಿಜೆಪಿ ಸೇರಲಿದ್ದಾರೆ ಅನ್ನುತ್ತಿದ್ದಾರೆ.
ಈ ಬಗ್ಗೆ ಕಲಬುರಗಿ ನಗರದಲ್ಲಿಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಯಾದಗಿರಿಯ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುತ್ತೇನೆ ಎಂಬುದು ಊಹಾಪೋಹ ಅಷ್ಟೇ. ನಲವತ್ತು ವರ್ಷಗಳ ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಈ ವಯಸ್ಸಿನಲ್ಲಿ ಪಕ್ಷ ಬಿಟ್ಟು ಸಾಧಿಸುವುದೇನೂ ಇಲ್ಲ. ಶಾಸಕ ಆಗೋದೇ ದೊಡ್ಡ ಸಾಧನೆ ಅಲ್ಲ, ಮುಂದೊಂದು ದಿನ ಪಕ್ಷ ಬಿಡಬಹುದು. ಆದರೆ. ಸಾಮಾನ್ಯ ನಾಗರೀಕನಾಗಿ ನನಗೆ ಇಷ್ಟವಾದ ಪಕ್ಷವನ್ನು ಬೆಂಬಲಿಸುತ್ತೇನೆ. ಆದರೆ, ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತೇನೆ ಎಂಬ ಸುದ್ದಿ ನನಗೆ ನೋವು ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸತ್ಯ. ನಮ್ಮ ಪಕ್ಷದಲ್ಲಿ ಅಸಮಾಧಾನ ಹೇಳಿಕೊಳ್ಳಲು ಅವಕಾಶವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಿರಿಯ ಶಾಸಕರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಪಕ್ಷದಲ್ಲಿ ತಪ್ಪು ತಿದ್ದಿ ನಡೆಯುವ ಕೆಲಸ ಆಗಬೇಕಿದೆ. ಆದರೆ ತಪ್ಪು ತಿದ್ದಿಕೊಂಡು ನಡೆಯುವ ಬದಲು ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥತನವೇ ತಾಂಡವವಾಡುತ್ತಿದೆ ಎಂದು ಸ್ವಪಕ್ಷದ ವಿರುದ್ಧ ಹಿರಿಯ ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಕಿಡಿ ಕಾರಿದ್ದಾರೆ.