ಯಾದಗಿರಿ : ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ!
ಸುರಪುರದ ಶಾಸಕರ ಮನೆ ಬಳಿ ಕಲ್ಲು ತೂರಾಟ!
ಯಾದಗಿರಿ: ಜಿಲ್ಲೆಯ ಸುರಪುರ ನಗರ ಪ್ರದೇಶದ ಶಾಸಕರ ಮನೆ ಹತ್ತಿರ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಆರಂಭವಾಗಿದ್ದು, ಕಲ್ಲು ತೂರಾಟ ನಡೆದ ಪರಿಣಾಮ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ಗುಂಪು ಘರ್ಷಣೆ ನಡೆದ ಪರಿಣಾಮ ಇಡೀ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಗುಂಪು ಘರ್ಷಣೆಗೆ ಕರಾಣರಾದ 17 ಜನರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಿನ್ನೆಲೆಃ ಮೊಬೈಲ್ ಮೂಲಕ ಮಹಿಳೆಯೊಬ್ಬರಿಗೆ ಕೀಟಲೆ ನೀಡುತ್ತಿದ್ದ ಎಂಬ ಆರೋಪದ ಮೇಲೆ ಕೃಷ್ಣ ಎಂಬುವರ ವಿರುದ್ಧ ಶುಕ್ರವಾರದಂದು ದೂರು ದಾಖಲಾಗಿದೆ. ಬಳಿಕ ದೂರುದಾರರ ವಿರುದ್ಧ ಕೃಷ್ಣ ಎಂಬುವವರು ಪ್ರತಿ ದೂರು ದಾಖಲಿಸಿದ್ದಾರೆ. ಇದೇ ಕಾರಣದ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳಿಂದ ಶಾಸಕರ ಮನೆ ಎದುರು ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಹೀಗಾಗಿ, ಶಾಸಕರ ಪರವಾಗಿ ಶಾಂತಪ್ಪ ಎಂಬುವರು ಗಲಾಟೆ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ಘರ್ಷಣೆ ನಡೆದಿದೆ ಎನ್ನಲಾಗಿದ್ದು ಘಟನೆ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಹೀಗಾಗಿ, ಮೊದಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜಿದ್ದಾಜಿದ್ದಿನ ಕಣವಾಗಿರುವ ಸುರಪುರ ಮತಕ್ಷೇತ್ರದಲ್ಲಿ ಘರ್ಷಣೆ ನಡೆದಿದ್ದು ನಗರದಲ್ಲಿ ಭಯ, ಭೀತಿ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸುರಪುರದಲ್ಲಿ ವಿವಿಧಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಕೆಎಸ್‍ಆರ್‍ಪಿ, 2 ಡಿಆರ್, ಇಬ್ಬರು ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.