ಗಲಭೆಗಳ ಹಿಂದಿರುವ ಮಾಸ್ಟರ್ ಮೈಂಡ್‍ನವರಿಗೆ ಗಡಿಪಾರು ಶಿಕ್ಷೆಃ ಐಜಿಪಿ ಅಲೋಕಕುಮಾರ
ಶಹಾಪುರಃ ಕಾನೂನು ಪರಿಪಾಲನೆಗೆ ಐಜಿಪಿ ಅಲೋಕಕುಮಾರ ಕರೆ
ಯಾದಗಿರಿಃ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಗೆಡಹುವ ನಿಟ್ಟಿನಲ್ಲಿ ಜಾತಿ ಗಲಭೆ ಇನ್ನಿತರ ಅನಗತ್ಯ ಗಲಭೆ ಎಬ್ಬಿಸುವವರ ಹಿಂದಿರುವ ಮಾಸ್ಟರ ಪ್ಲಾನ್ ಮೈಂಡನವರನ್ನು ಗಡಿಪಾರು ಮಾಡುವ ಕ್ರಮ ತೆಗೆದುಕೊಳ್ಳುವದರೊಂದಿಗೆ ಗಲಭೆ ಮಾಡುವವರ ವಿರುದ್ಧ ರೌಡಿಶೀಟ್ ದಾಖಲಿಸಲಾಗುವುದು ಎಂದು ಐ.ಜಿ.ಪಿ ಅಲೋಕ ಕುಮಾರ ತಿಳಿಸಿದರು.
ಟ್ರಾಫಿಕ್ ನಿಯಮ ಜಾಗೃತಿ ಮತ್ತು ಸರ್ಕಲ್ ಇನ್ಸಪೆಕ್ಟರ್ ಕಚೇರಿ ತಪಾಸಣಾ ಕಾರ್ಯದ ನಿಮಿತ್ತ ಜಿಲ್ಲೆಯ ಶಹಾಪುರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಆರಕ್ಷಕ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ಸೌಹಾರ್ದ ಬಾಳ್ವೆ ವಾತಾವರಣ ನಿರ್ಮಾಣ ಅಗತ್ಯವಿದೆ.
ಶಾಂತ ವಾತಾವರಣ ಕಲುಷಿತಗೊಳಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತವಾಗಿ ಶಿರವಾಳ, ರಸ್ತಾಪುರ, ಕನ್ಯಾಕೋಳೂರು ಗ್ರಾಮದಲ್ಲಿ ಈ ಹಿಂದೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಎಲ್ಲರನ್ನು ಕರೆಸಿ ತಿಳುವಳಿಕೆ ನೀಡಲಾಗಿದೆ ಎಂದರು.
ಟ್ರಾಫಿಕ್ ಬಗ್ಗೆ ಜಾಗೃತಿಃ ಟ್ರಾಫಿಕ್ ಪೊಲೀಸ್ ಠಾಣೆ, ಅವಶ್ಯಕತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ವಿವಿಧ ಅನುದಾನದಲ್ಲಿ ಟ್ರಾಫಿಕ್ ನಿಯಮಗಳುಳ್ಳ ನಾಮಫಲಕಗಳನ್ನು ಅಲ್ಲಲ್ಲಿ ಅಳವಡಿಸಲು ಕ್ರಮ ಜರುಗಿಸಲಾಗುವುದು.
ಪ್ರತ್ಯೇಕ ಟ್ರಾಫಿಕ್ ಪೊಲೀಸ್ ವ್ಯವಸ್ಥೆಗೆ ಸರ್ಕಾರದ ಮಟ್ಟದಲ್ಲಿ ಯಾದಗಿರಿ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತಂದು ಅನುಕೂಲ ಕಲ್ಪಿಸಲಾಗುವುದು. ಪ್ರಮುಖ ಟ್ರಾಫಿಕ್ ತಾಣಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.
ಬ್ಯಾನರಗಳ ಕಡಿವಾಣಃ ನಗರದಲ್ಲಿ ಅನಾವಶ್ಯಕ ಕಟೌಟ್ ಬ್ಯಾನರಗಳಿಂದ ವಾತಾವರಣ ಕೆಡುತ್ತಿದ್ದು ಅದಕ್ಕೆ ಕಡಿವಾಣವಿಲ್ಲದಂತಾಗಿದೆ. ಬ್ಯಾನರ್‍ಗಳಿಗೆ ಕಡಿವಾಣ ಹಾಕುವ ಕರ್ತವ್ಯ ಆಯ ನಗರಸಭೆ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ಪೊಲೀಸ್ ಇಲಾಖೆ ಸಹಕಾರ ನೀಡಬಹುದು ಹೊರತಾಗಿ ಎಲ್ಲವನ್ನು ಪೊಲೀಸ್ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳುವದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಓಣಿಗೊಂದಂತೆ ಜಾತಿಗೆ ಸಂಬಂಧಿಸಿದ ಕಟ್ಟೆಗಳು, ನಾಮಫಲಕಗಳು ಸೃಷ್ಠಿಯಾಗುತ್ತಿದ್ದು, ಇವುಗಳಿಂದ ಸಾಮಾಜಿಕ ಸ್ವಾಸ್ತ್ಯ ಹದಗೆಡಲು ಕಾರಣವಾಗಿದೆ. ಗ್ರಾಮೀಣ ಭಾಗದ ಇಂತಹ ಸಮಸ್ಯೆಗಳಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಅನುಮತಿ ನೀಡುವಾಗ ಜಾಗೃತಿ ವಹಿಸಬೇಕು. ಅನಿವಾರ್ಯವಿದ್ದಾಗ ಪೊಲೀಸ್ ರಕ್ಷಣೆ ನೀಡಲಾಗುತ್ತದೆ ಎಂದರು.
ಹೆಲ್ಮೇಟ್ ಕಡ್ಡಾಯ ಸುಪ್ರೀಂಕೋರ್ಟ ಆದೇಶಃ ಪ್ರಸ್ತುತವಾಗಿ ಟ್ರಾಫಿಕ್ ನಿಯಮ ಪಾಲನೆ ಅಗತ್ಯವಾಗಿದ್ದು, ಹೆಲ್ಮೇಟ್ ಕಡ್ಡಾಯ ಎಂಬುದು ಸುಪ್ರೀಂಕೋರ್ಟ್ ಆದೇಶವಿದ್ದು, ಅದರ ಪ್ರಕಾರ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಪಾಲಿಸುವುದು ಸರ್ವರಿಗೂ ಶ್ರೇಯಸ್ಸು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್‍ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎ.ಎಸ್.ಪಿ ಶಿವಪ್ರಕಾಶ ದೇವರಾಜ ಉಪಸ್ಥಿತರಿದ್ದರು. .