ಪ್ರಮುಖ ಸುದ್ದಿ

ಪಾಕ್ ಸೇನೆಯ ಹಾಡಿಗೆ ಹೆಜ್ಜೆ ಹಾಕಿದರಂತೆ ಜನಪ್ರತಿನಿಧಿಗಳು?

ಬೆಳಗಾವಿ: ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಮತೀನ್ ಶೇಖ್, ಬಂದೇನವಾಜ್, ಹಾಗೂ ಅಜಿಂ ಪಾಕಿಸ್ತಾನದ ಸೇನೆಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪರಮಶತೃ ದೇಶ ಪಾಕಿಸ್ತಾನದ ಸೇನೆಯ ಹಾಡನ್ನು ಮೆರವಣಿಗೆ ವೇಳೆ ಹಾಕಲಾಗಿದೆ. ಅಲ್ಲದೆ ತಾವು ಜನಪ್ರತಿನಿಧಿಗಳು ಎಂಬುದನ್ನೂ ಮರೆತು ಮೂವರು ನಗರ ಪಾಲಿಕೆ ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ ಎಂದು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೀವ್ ಟೋಪಣ್ಣವರ್ ಆರೋಪಿಸಿದ್ದಾರೆ.

ಪಾಕಿಸ್ತಾನದ ಸೇನೆಯ ಹಾಡು ಹಾಕಿಕೊಂಡು ನಗರಪಾಲಿಕೆ ಸದಸ್ಯರು ಕುಣಿಯುತ್ತಿರುವ ವಿಡಿಯೋವನ್ನು ಬಿಜೆಪಿಯ ರಾಜೀವ್ ರಿಲೀಸ್ ಮಾಡಿದ್ದಾರೆ. ಮುಸ್ಲಿಂ ಬಾಂಧವರು ಹಬ್ಬ ಆಚರಣೆ ಮಾಡಲಿ, ಮೆರವಣಿಗೆ ಮಾಡಲಿ ನಮ್ಮ ವಿರೋಧವೇನು ಇಲ್ಲ. ಆದರೆ, ಶತೃ ದೇಶದ ಸೇನೆಯ ಹಾಡು ಹಾಕಿಕೊಂಡು ಹೆಜ್ಜೆ ಹಾಕಿದ್ದನ್ನು ಎಲ್ಲರೂ ಖಂಡಿಸಬೇಕಿದೆ ಎಂದು ರಾಜೀವ್ ಹೇಳಿದ್ದಾರೆ.

ಕಣ್ಣೆದುರೇ ಕೆಲವರು ರಾಷ್ಟ್ರದ್ರೋಹ ಕಾರ್ಯದಲ್ಲಿ ತೊಡಗಿದ್ದರೂ ಪೋಲೀಸರು ಮಾತ್ರ ಮೌನವಹಿಸಿದ್ದರು. ಪೊಲೀಸರು ಏಕೆ ತಕ್ಷಣವೇ ತಡೆದು ಕ್ರಮ ಕೈಗೊಂಡಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಪೊಲೀಸರು ಮೂವರು ನಗರಪಾಲಿಕೆ ಸದಸ್ಯರನ್ನು ಬಂಧಿಸಿ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ರಾಜೀವ್ ಆಗ್ರಹಿಸಿದ್ದಾರೆ. ಇನ್ನು ಈ ಆರೋಪಕ್ಕೆ ಗುರಿ ಆಗಿರುವ ನಗರ ಪಾಲಿಕೆ ಸದಸ್ಯರು ಈ ಬಗ್ಗೆ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಆದರೆ, ಅಸಲಿಗೆ ಬಿಜೆಪಿ ಮುಖಂಡ ಬಿಡುಗಡೆ ಮಾಡಿರುವ ದೃಶ್ಯ ಇಂದು ನಡೆದದ್ದಲ್ಲ. ಬದಲಾಗಿ ಕಳೆದ ವರ್ಷದ ಮೆರವಣಿಗೆಯ ದೃಶ್ಯ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸುದ್ದಿಗೋಷ್ಠಿ ಬಳಿಕ ಬಿಜೆಪಿ ಮುಖಂಡ ರಾಜೀವ್ ಮುಜುಗರಕ್ಕೀಡಾಗಿದ್ದಾರೆ. ಹೀಗಾಗಿ, ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಪೊಲೀಸರು ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ.

Related Articles

Leave a Reply

Your email address will not be published. Required fields are marked *

Back to top button