ಕಲಬುರಗಿ: ರೌಡಿ ಶೀಟರ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ!
ಕಲಬುರಗಿ: ತಾಲೂಕಿನ ತಾವರಗೇರಾ ಕ್ರಾಸ್ ಸಮೀಪ ಇಂದು ಬೆಳ್ಳಂಬೆಳಗ್ಗೆಯೇ ಪೊಲೀಸರು ರೌಡಿ ಶೀಟರ್ ಯಶವಂತ್ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಈ ಘಟನೆಯಿಂದ ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.
ಕೊಲೆ, ಕಿಡ್ನಾಪ್, ನಾಡ ಪಿಸ್ತೂಲ್ ಮಾರಾಟ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಯಶವಂತ್ ವಾಂಟೆಂಡ್ ಕ್ರಿಮಿನಲ್ ಆಗಿದ್ದ. ಹಾಗಾಗಿ, ಪಿಎಸ್ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ಟೀಮ್ ಖಚಿತ ಮಾಹಿತಿ ಮೇರೆಗೆ ರೌಡಿ ಯಶವಂತ ಬಂಧನಕ್ಕೆ ತೆರಳಿತ್ತು.
ಆದರೆ, ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿ ಯಶವಂತ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪರಿಣಾಮ ಕುಪೇಂದ್ರ ಮತ್ತು ಕುಶನ್ ಎಂಬ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ. ಹೀಗಾಗಿ, ಪಿಎಸ್ಐ ಚಂದ್ರಶೇಖರ್ ಆತ್ಮರಕ್ಷಣೆಗಾಗಿ ರೌಡಿ ಯಶವಂತ ಮೇಲೆ ಗುಂಡು ಹಾರಿಸಿದ್ದು ಯಶವಂತನ ಎಡಗಾಲಿಗರ ಗುಂಡು ಹೊಕ್ಕಿದೆ.
ಗಾಯಾಳು ಪೇದೆಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರಗೇರಾ ಗ್ರಾಮದ ರೌಡಿ ಯಶವಂತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.