ಪ್ರೀತಿ ಮಾಯೆ ಹುಷಾರು..! ಪ್ರೀತಿಸಿ ಕೈಕೊಟ್ಟ ಪ್ರಿಯಕರ, ಬಾಲಕಿ ಆತ್ಮಹತ್ಯೆ
ಯಾದಗಿರಿಃ ಪ್ರೀತಿಸಿದ ಯುವಕ ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಿದ ಯುವಕ ಮದುವೆ ಮಾಡಿಕೊಳ್ಳುತ್ತೇನೆಂದು ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಎನ್ನಲಾಗಿದೆ. ನಂತರ ಪೋಷಕರು ಹುಡುಕಿ ಇಬ್ಬರಿಗೂ ತಿಳಿಹೇಳಿ ಮದುವೆ ಮಾಡಿಸುವುದಾಗಿ ವಾಪಾಸ್ ಮನೆಗೆ ಕರೆ ತಂದಿದ್ದರು.
ಆದರೆ ನಂತರದ ದಿನಗಳಲ್ಲಿ ಯುವಕ ನಾಗರಾಜ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ವಿಷಯ ತಿಳಿದ ಅಪ್ರಾಪ್ತ ವಯಸ್ಸಿನ ಬಾಲಕಿ ಭಾಗಮ್ಮ ಬೇಸತ್ತು ಮಂಗಳವಾರ ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥಳಾಗಿದ್ದಳು. ಪಾಲಕರು ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ನಾಗರಾಜನನ್ನೆ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದ ಬಾಲಕಿಗೆ, ಇತ್ತೀಚೆಗೆ ಸಮೀಪದ ತಂಗಡಿಗಿ ಗ್ರಾಮದ ಯುವಕನೋರ್ವನ ಜತೆ ವಿವಾಹ ನಿಶ್ಚಯವಾಗಿತ್ತು. ಈ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರೇ ಎಚ್ಚರವಹಿಸಿ.! ನೀತಿ ಪಾಠ ಬೋಧನೆ ಅಗತ್ಯ
ವಿನಯವಾಣಿ ಕಳಕಳಿಃ ಓದುವ ಆಟವಾಡುವ ವಯಸ್ಸಲ್ಲಿ ಪ್ರೀತಿ ಎಂಬ ಮಾಯೆಯಲ್ಲಿ ಮುಳಿಗಿದ್ದ ತನ್ನ ಜೀವಕ್ಕೆ ಆಪತ್ತು ತಂದುಕೊಂಡ ಬಾಲಕಿ ಪೋಷಕರ ಬದುಕಿನಲ್ಲಿ ದೊಡ್ಡ ದುರಂತವೇ ಸೃಷ್ಟಿಸಿದಳು. ಇಂತಹ ಸಂಗತಿಗಳಿಂದ ಮಕ್ಕಳು ಜೀವ ಕಳೆದುಕೊಳ್ಳುವದಲ್ಲದೆ ಪಾಲಕರನ್ನು ನಿರಂತರ ಕಣ್ಣೀರಿನಲ್ಲಿ ಕಾಲ ಕಳೆಯುವಂತೆ ಮಾಡಿವೆ.
ಈ ಘಟನೆ ಇಡಿ ಗ್ರಾಮದ ಜನರಲ್ಲಿ ಆತಂಕ ಉಂಟುಮಾಡಿದೆ ಅಂದರೆ ತಪ್ಪಾಗಲಾರದು. ಹೆಣ್ಣು ಹೆತ್ತವರಲ್ಲಿ ಭಯವು ಮೂಡಿಸಿದೆ ಎಂದು ಹೇಳಿದರೆ ಸುಳ್ಳಲ್ಲ. ಮುಗ್ಧ ಬಾಲಕಿ ಬಾಗಮ್ಮಳ ಸಾವಿನಿಂದಾಗಿ ಅವರ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರೀತಿ ಎಂದರೇನು ಎಂಬ ಅರಿವಿರದ ಮುಗ್ಧ ಬಾಲಕಿ, ಪ್ರೀತಿಯ ಎಂಬ ಆಕರ್ಷಣೆಗೆ ಬಲಿಯಾಗಿದ್ದಾಳೆ. ಪ್ರೀತಿ ಎಂಬ ಮಾಯಾವಿ ಚಿಕ್ಕ ಬಾಲಕಿಗೆ ತಲೆ ಹೊಕ್ಕಿರುವ ಕಾರಣ, ಅದನ್ನು ಬಿಡುಸವ ಪ್ರಯತ್ನ ಮಾಡಿದ್ದಾರೆ. ಆದರೆ ಅದರಿಂದ ಹೊರಬರದ ಬಾಲಕಿ ತನ್ನ ಜೀವವನ್ನ ಕಳೆದುಕೊಂಡಿದ್ದಾಳೆ. ಪರಿಪಕ್ವವಿಲ್ಲದ ಮನಸ್ಸು ಬಾಲಕಿಯನ್ನು ಘಾಸಿಗೊಳಿಸುವ ಮೂಲಕ ಸಿನಿಮೆ, ಟಿವಿ ಧಾರವಾಹಿಯಲ್ಲಿ ಪ್ರೀತಿ ವಿಫಲತೆ ಬಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವದನ್ನು ತಿಳಿದಿದ್ದ ಪೋರಿ ತಾನು ಏನನ್ನು ಕಳೆದುಕೊಂಡಿದ್ದೇನೆ, ಪ್ರೀತಿಸಿದವನನ್ನು ಬಿಟ್ಟು ಬದುಕಲಾರೇನು ಎಂಬ ಭ್ರಮೆಯಿಂದ ಹೊರಬರದೆ ಸಾವಿನ ಹಾದಿ ತುಳಿದಿದ್ದಾಳೆ. ಇಂತಹ ಸಂದರ್ಭದಲ್ಲಿ ಆ ಬಾಲಕಿಗೆ ತಜ್ಞ ವೈದ್ಯರಿಂದ ಕೌನ್ಸಿಲ್ ಮಾಡಿಸಬೇಕಿತ್ತು.
ಮಕ್ಕಳ ವರ್ತನೆ ಬಗ್ಗೆ ಪಾಲಕರು ನಿರಂತರ ನಿಗಾವಹಿಸುವ ಅಗತ್ಯವಿದೆ. ಅವರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಲ್ಲಿ ಶಾಲಾ ಶಿಕ್ಷಕರು, ಅವರ ಸ್ನೇಹಿತರನ್ನು ಭೇಟಿಯಾಗಿ ವಿಚಾರಿಸುವ ಕೆಲಸ ಮಾಡಬೇಕು. ಮಕ್ಕಳ ಪೋಷಣೆಯಲ್ಲಿ ಪಾಲಕರು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ. ಸಿನಿಮಾ, ಟಿವಿ ಮತ್ತು ಮೊಬೈಲ್ ಗಳಲ್ಲಿ ಬರುವ ದೃಶ್ಯಗಳು ಪ್ರೇಮಾಂಕುರ ಕಥೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಹೀಗಾಗಿ ಶಾಲೆಯಲ್ಲೂ ಶಿಕ್ಷಕರ ಜವಬ್ದಾರಿಯೂ ಇದೆ. ಶಾಲಾ ಕಾಲೇಜುಗಳು ಸೇರಿದಂತೆ ಮನೆಯಲ್ಲಿಯೂ ಪಾಲಕರು ಎಲ್ಲಾ ಮಕ್ಕಳಿಗೆ ನೀತಿ ಪಾಠ, ಮಾನವೀಯ ಮೌಲ್ಯಯುತ ಕಥೆಗಳು, ಇತಿಹಾಸ, ಧಾರ್ಮಿಕ ಬೋಧನೆ ಅಗತ್ಯವಿದೆ. ನೆನಪಿರಲಿ ಇದು ಕೇವಲ ಶಾಲಾ ಮಕ್ಕಳಿಗಾಗಿ ಮಾತ್ರವಲ್ಲ. ಶಾಲೆಯಿಂದ ದೂರವಿದ್ದ , ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನ್ವಯ.




