ಜಾನಪದ ಕಲಾವಿದ ಹೊಸಕೋಟೆ ಶಹಾಪುರದ ಜನತೆಗೆ ಕೊಟ್ಟ ಮಾತೇನು.?
ಯಾದಗಿರಿಃ ಜಿಲ್ಲೆಯ ಶಹಾಪುರದ ಚರಬಸವೇಶ್ವರ ದೇವಸ್ಥಾನ ರಂಗಮಂದಿರದಲ್ಲಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯಿಂದ ಈಚೆಗೆ ನಡೆದ 20 ನೇ ವರ್ಷದ ಸಗರನಾಡು ಉತ್ಸವವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಾನಪದ ಕಲಾವಿದ ಗುರುರಾಜ ಹೊಸಕೋಟೆ, ರಂಗ ಕಲಾವಿದರು, ಸಿನಿಮಾ ನಟರು ಸೇರಿದಂತೆ ಸಂಗೀತ ಕಲೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸತತ ಎರಡು ದಶಕಗಳಿಂದ ಇಲ್ಲಿನ ಚರಬಸವೇಶ್ವರ ಸಂಗೀತ ಬಳಗ ಅದರ ಅಧ್ಯಕ್ಷರು ಆದ ಶರಣು ಗದ್ದುಗೆ ಅವರು ನೆರವೇರಿಸುತ್ತಾ ಬಂದಿದ್ದಾರೆ.
ಇಲ್ಲಿನ ಜನರ ಅಭಿಮಾನ ಕಂಡು ಧನ್ಯನಾದೆ. ಸಗರನಾಡಿನ ಆರಾಧ್ಯದೈವ ಚರಬಸವೇಶ್ವರರ ಸಂಸ್ಥಾನದಲ್ಲಿ ನನ್ನನ್ನು ಸನ್ಮಾನಿಸಿ ನನ್ನ ಕಲೆಗಾರಿಕೆಗೆ ಗೌರವ ದೊರೆತಿರುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. ಈ ಸಂದರ್ಭದಲ್ಲಿ ಶರಣ ಸಂತ ದಾಸೋಹಿಗಳಾದ ಚರಬಸವೇಶ್ವರರ ಚರಿತ್ರೆಯನ್ನು ಮನಗಂಡು ಮುಂಬರುವ ದಿನಗಳಲ್ಲಿ ಬರುವ ವರ್ಷದಲ್ಲಿ ನಾನೇ ಸ್ವತಃ ಗೀತೆಯೊಂದನ್ನು ರಚಿಸಿ ತಮ್ಮೆಲ್ಲರೆದುರಿಗೆ ಪ್ರಸ್ತುತ ಪಡೆಸುತ್ತೇನೆ ಎಂದು ನೆರೆದ ಜನರಿಗೆ ಭರವಸೆ ನೀಡಿದರು.
ಅವರ ಭರವಸೆಗೆ ಶಹಾಪುರದ ಜನತೆ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿತು. ಸಗರನಾಡಿನ ಭಾಗದ ಅಸಂಖ್ಯಾತ ಭಕ್ತಸಮೂಹವನ್ನು ಹೊಂದಿದ್ದ ಚರಬಸವೇಶ್ವರರ ಕುರಿತು ಜಾನಪದ ಹಾಡುಗಾರ ಹೊಸಕೋಟೆಯವರೇ ರಚಿಸಿದ ಮತ್ತು ಅವರೇ ಹಾಡಿದ ಹಾಡು ಕೇಳಲು ಕಾತುರರಾಗಿದ್ದೇವೆ. ಒಂದು ವರ್ಷವಾದರೂ ಕಾಯುತ್ತೇವೆ ಎಂದು ಭಕ್ತರು ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಹೊಸಕೋಟೆಯವರು ವಿವಿಧ ಜಾನಪದ ಗೀತೆಗಳನ್ನು ಹಾಡುವ ಮೂಲಕ ಜನರ ಗಮನಸೆಳೆದರು.
ಸಂಸ್ಥಾನದ ಬಸವಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಮುಖಂಡರಾದ ಚಂದ್ರಶೇಖರ ಆರಬೋಳ, ಸುರೇಂದ್ರ ಪಾಟೀಲ್ ಸೇರಿದಂತೆ ಚಿತ್ರನಟ ಸಂತೋಷ ಉಪ್ಪಿನ್, ನಟಿ ರಚನಾ ಝೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧೆ ವಿಜೇತ ಸುನೀಲ್ ಇತರರಿದ್ದರು. ಶರಣು ಬಿ.ಗದ್ದುಗೆ ಅಧ್ಯಕ್ಷತೆವಹಿಸಿದ್ದರು.